ಆಟಿ ತಿಂಗಳು ಮಾನವೀಯ ಸಂಬಂಧದ ಕೊಂಡಿ-ಪುರಂದರ ರೈ
ಪುತ್ತೂರು: ಹಿಂದಿನ ಕೂಡು ಕುಟುಂಬದಲ್ಲಿ ಮನೆ ಎಂಬುದು ದೂರ ಇದ್ದು ಮನಸ್ಸುಗಳು ಬಹಳ ಹತ್ತಿರವಾಗಿದ್ದವು. ಆದರೆ ಇಂದು ಮನೆಗಳು ಹತ್ತಿರವಿದ್ದರೂ ಮನಸ್ಸು ಬಹಳ ದೂರವಾಗಿ ಬಿಟ್ಟಿವೆ. ಹಿಂದಿನ ಆಟಿ ತಿಂಗಳೆಂದರೆ ಅದು ಮಾನವೀಯ ಸಂಬಂಧಗಳ ಕೊಂಡಿಯಾಗಿತ್ತು ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿ ಹೇಳಿದರು.
ಆ.10 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಜರಗಿದ ಆಟಿದ ಕೂಟ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಿಂದಿನ ಆಟಿ ತಿಂಗಳೆಂದರೆ ಅದು ಕಷ್ಟದ ತಿಂಗಳಾಗಿತ್ತು. ಆದರೆ ಇಂದು ಸೆಲೆಬ್ರೇಶನ್ ಗೆ ಸೀಮಿತವಾದಂತಿದೆ. ದಕ್ಷಿಣ ಕನ್ನಡದ ರೈತಾಪಿ ವರ್ಗದವರು ವರ್ಷದ ಹನ್ನೊಂದು ತಿಂಗಳು ದುಡಿಯುತ್ತಾ ಶರೀರದಲ್ಲಿ ನಂಜು ಶೇಖರಣೆಯಾಗುತ್ತಿತ್ತು. ಇದನ್ನ ಹೋಗಲಾಡಿಸಲು ಆಟಿ ತಿಂಗಳಿನ ತಿನಸುಗಳು ಔಷಧಿಯಂತೆ ಸಹಕಾರಿಯಾಗುತ್ತಿತ್ತು ಎನ್ನುವ ಭಾವನೆ ಹಿರಿಯರಲ್ಲಿತ್ತು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕ್ಲಬ್ ಸದಸ್ಯ, ಕೃಷ್ಣನಗರ ನಿವಾಸಿ ಜಯರಾಂ ಆಚಾರ್ಯ ಮಾತನಾಡಿ, ಆಟಿ ತಿಂಗಳು ಕಷ್ಟದ ತಿಂಗಳು ಜೊತೆಗೆ ಆರೋಗ್ಯದಾಯಕವಾಗಿತ್ತು. ಹಿಂದಿನ ಆಟಿ ತಿನಸುಗಳಲ್ಲಿ ವೈಜ್ಞಾನಿಕತೆಯಿತ್ತು, ಮಾನವನ ಆಯಸ್ಸನ್ನು ಹೆಚ್ಚಿಸುವಂತಿತ್ತು ಎಂದರು.
ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ರೋಟರಿ ಸ್ವರ್ಣವು ಪ್ರತಿ ವರ್ಷ ಆಟಿ ಕೂಟವನ್ನು ಏರ್ಪಡಿಸಿ ಆಟಿಯ ಮಹತ್ವವನ್ನು ನೆನಪಿಸುವ ಕೆಲಸ ಮಾಡುತ್ತಿದೆ. ರೋಟರಿ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಮಾನವೀಯ ಸಂಬಂಧಗಳನ್ನು ಉಳಿಸುವ ಕೈಂಕರ್ಯ ಮಾಡುತ್ತಿದೆ ಎಂದರು.
ರೋಟರಿ ವಲಯ ಸೇನಾನಿ ಭಾಸ್ಕರ ಕೋಡಿಂಬಾಳ ಮಾತನಾಡಿ, ಹಿಂದಿನ ಆಟಿ ಎಂದರೆ ಕಷ್ಟದ ದಿನಗಳಾಗಿದ್ದರೂ ಹಿರಿಯರಿಗೆ ಅದು ಖುಶಿಯ ದಿನವಾಗಿತ್ತು. ಇಂದಿನ ಆಟಿಯಲ್ಲಿ ಹಿಂದಿನ ಕಷ್ಟಗಳನ್ನು ನೆನೆಸಿಕೊಂಡು ಎಲ್ಲರೊಂದಿಗೆ ಸೇರಿಕೊಂಡು ಗಮ್ಮತ್ತು ಮಾಡುವ ದಿನಗಳಾಗಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಎಲ್ಲಾ ಜಾತಿ, ಧರ್ಮದವರು ಹಬ್ಬಗಳನ್ನು ಒಟ್ಟಾಗಿ ಆಚರಣೆ ಮಾಡಿದಾಗ ತುಳುನಾಡಿನ ಸಂಸ್ಕೃತಿಯ ಅನಾವರಣವಾಗುವುದು. ತುಳು ಭಾಷೆಯನ್ನು ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದ್ದು ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ಇತ್ತೀಚೆಗೆ ತುಳು ಭಾಷೆಯ ಕುರಿತು ಮಾತನಾಡಿರುವುದು ಒಳ್ಳೆಯ ವಿಚಾರ ಎಂದರು.
ಕ್ಲಬ್ ಅಧ್ಯಕ್ಷ ಸುಂದರ ರೈ ಬಲ್ಕಾಜೆ ಸ್ವಾಗತಿಸಿ ಮಾತನಾಡಿ, ಯಾವುದೇ ಸಮಾಜಮುಖಿ ಕೆಲಸ ಒಬ್ಬನಿಂದ ಮಾಡಲು ಸಾಧ್ಯವಿಲ್ಲ, ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಎಲ್ಲರೂ ಸಮಾನ ಮನಸ್ಕರಂತೆ ಒಗ್ಗಟ್ಟಾಗಿ ಮಾಡಿದಾಗ ಕೆಲಸಗಳು ಯಶಸ್ವಿಯಾಗುವುದು ಎಂಬುದಕ್ಕೆ ಇಂದಿನ ಆಟಿಕೂಟಕ್ಕೆ ಸದಸ್ಯರು ಕೈಜೋಡಿಸಿರುವುದಾಗಿದೆ. ಮುಂದಿನ ದಿನಗಳಲ್ಲೂ ಇದು ಇದೇ ರೀತಿ ಮುಂದುವರೆದು ಕ್ಲಬ್ ಎತ್ತರಕ್ಕೆ ಸಾಗುವಂತಾಗಲಿ ಎಂದರು.
ಮೀನಾಕ್ಷಿ ಪ್ರಾರ್ಥಿಸಿದರು. ಸದಸ್ಯ ಸುರೇಂದ್ರ ಆಚಾರ್ಯರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಯಶವಂತ ಗೌಡ ಕಾಂತಿಲ ವರದಿ ಮಂಡಿಸಿ, ವಂದಿಸಿದರು. ಸದಸ್ಯರಾದ ದೀಪಕ್ ಕೋಟ್ಯಾನ್ ಹಾಗೂ ರಾಮಣ್ಣ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಸೇರ್ಪಡೆ..
ಕ್ಲಬ್ ಸರ್ವಿಸ್ ನಡಿಯಲ್ಲಿ ವಕೀಲ ದಿವಾಕರ ನಿಡ್ವಣ್ಣಾಯರವರ ಸಹೋದರ, ನಿವೃತ್ತ ಯೋಧ, ವಕೀಲರಾದ ಸುಧಾಕರ್ ನಿಡ್ವಣ್ಣಾಯರನ್ನು ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈಯವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಶಿಕ್ಷಕರಿಗೆ ಸ್ಮರಣಿಕೆ..
ಆಂಗ್ಲ ಭಾಷೆಯಲ್ಲಿ ಉತ್ತಮತೆಯನ್ನು ಹೊಂದಲು ‘ಕನ್ನಡದ ಮೂಲಕ ಆಂಗ್ಲ ಭಾಷೆಯಲ್ಲಿ ಮಾತನಾಡುವ ಕೌಶಲ್ಯಾಭಿವೃದ್ಧಿ’ ಎಂಬ ಶಿಕ್ಷಣ ವ್ಯಾಕರಣ ಪುಸ್ತಕವನ್ನು ಕ್ಲಬ್ ನಲ್ಲಿನ ಶಿಕ್ಷಕರಿಗೆ ಸ್ಮರಣಿಕೆಯಾಗಿ ಈ ಸಂದರ್ಭದಲ್ಲಿ ವಿತರಿಸಲಾಯಿತು.
30ಕ್ಕೂ ಮಿಕ್ಕಿ ಆಟಿ ತಿನಸುಗಳು…
ಉಪ್ಪಿನಕಾಯಿ, ತಿಮರೆ ಚಟ್ನಿ, ಪತ್ರೋಡೆ, ತಜಂಕ್ ದ ಅಂಬಡೆ, ಮಂಜಲ್ ಇರೆತ ಗಟ್ಟಿ, ಪೆಲಕ್ಕಾಯಿದ ಗಟ್ಟಿ, ನೀರ್ದೋಸೆ, ನುಪ್ಪು, ಕುಡುತ್ತ ಸಾರ್, ಕಡ್ಲೆ ಬಲ್ಯಾರ್ ಸುಕ್ಕ, ಕೋರಿ ಸುಕ್ಕ ಹೀಗೆ ಸುಮಾರು 30ಕ್ಕೂ ಮಿಕ್ಕಿ ಆಟಿ ತಿನಸುಗಳನ್ನು ಕ್ಲಬ್ ಸದಸ್ಯರೇ ಮಾಡಿಕೊಂಡು ತಂದಿದ್ದರು.