ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜ್ಞಾನ ಗಂಗಾ ಪುಸ್ತಕ ಮಳಿಗೆಯ ನೇತೃತ್ವದಲ್ಲಿ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪುಸ್ತಕ ಹಬ್ಬ -ಪುಸ್ತಕ ದಾನಿಗಳ ಮೇಳ-ಸಾಹಿತ್ಯ ವೈಭವ ಕಾರ್ಯಕ್ರಮದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಇದರ ವತಿಯಿಂದ, “ಮಾಗಧ ವಧೆ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಆನಂದ್ ಸವಣೂರು, ಚೆಂಡೆ ಮದ್ದಳೆಗಳಲ್ಲಿ ದಂಬೆ ಈಶ್ವರ ಶಾಸ್ತ್ರಿ, ಮುರಳೀಧರ ಕಲ್ಲೂರಾಯ, ಆದಿತ್ಯ ನಾರಾಯಣ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು(ಮಾಗಧ), ಹರಿಣಾಕ್ಷಿ.ಜೆ.ಶೆಟ್ಟಿ(ಭೀಮಸೇನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ವಂದಿಸಿದರು. ಪರಿಷತ್ ವತಿಯಿಂದ ಕಲಾವಿದರಿಗೆ ಪುಸ್ತಕ ಮತ್ತು ಶಾಲು ಇತ್ತು ಗೌರವಿಸಲಾಯಿತು. ಜ್ಞಾನ ಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕಿರಿ ಸಹಕರಿಸಿದರು.