ಪುತ್ತೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಪೆರೆಡ್ ನಲ್ಲಿ ಹಾಗೂ ಪ್ರಧಾನ ಮಂತ್ರಿ ವಿಕಾಸ್ ಯೋಜನೆಯ ಅನಾವರಣ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ವತಿಯಿಂದ ಗ್ರಾಮೀಣ ಕುಂಬಾರಿಕೆಯ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಸರ್ಕಾರದ ಅತಿಥ್ಯವನ್ನು ಪಡೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಪುತ್ತೂರಿನಲ್ಲಿ ಪ್ರಧಾನ ಶಾಖೆ ಹೊಂದಿರುವ ಕುಂಬಾರರ ಗುಡಿ ಕೈಗಾರಿಕೆಯು 1958 ರಲ್ಲಿ ಪ್ರಾರಂಭಗೊಂಡಿದ್ದು ಪುತ್ತೂರು ಸಹಿತ ಹಲವು ಕಡೆ ಒಟ್ಟು14 ಶಾಖೆಗಳನ್ನು ಹೊಂದಿದ್ದು ಕುಂಬಾರಿಕೆಯಲ್ಲಿ ಆಧುನಿಕ ಟಚ್ ನೀಡಿ ಗ್ರಾಮೀಣ ಕುಂಬಾರಿಕೆಯನ್ನು ಅಭಿವೃದ್ದಿ ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದೀಗ ಕುಂಬಾರಿಕೆಯನ್ನು ಗುರುತಿಸಿ ಕೇಂದ್ರ ಸರಕಾರ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದಲ್ಲಿ ದೆಹಲಿಗೆ ಆಹ್ವಾನಿಸಿದೆ. ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.