ಉಪ್ಪಿನಂಗಡಿ: ಪುತ್ತೂರಿನಿಂದ ಬರುವ ಎಕ್ಸ್‌ಪ್ರೆಸ್ ಲೈನ್‌ನಿಂದ ಕೊಪ್ಪಳಕ್ಕೂ ವಿದ್ಯುತ್ ನೀಡಬೇಕೆಂಬ ಆಗ್ರಹ ಹಲವು ಗ್ರಾಮ ಸಭೆಗಳಲ್ಲಿ ಮಂಡನೆಯಾಗಿದ್ದರೂ, ನಮಗೆ ಭರವಸೆ ಸಿಕ್ಕಿದ್ದೇ ಹೊರತು ಇನ್ನೂ ಕೂಡಾ ಈ ಕೆಲಸ ಆಗಿಲ್ಲ ಎಂಬ ಆರೋಪ ಉಪ್ಪಿನಂಗಡಿ ಗ್ರಾಮ ಸಭೆಯಲ್ಲಿ ಕೇಳಿ ಬಂತು.
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಅವರ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಆ.11ರಂದು ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಆದಂ ಕೊಪ್ಪಳ ಅವರು, ಕೊಪ್ಪಳಕ್ಕೆ ಈಗ ಕಾಂಚನ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಈ ವಿದ್ಯುತ್ ಲೈನ್‌ಗಳು ಗುಡ್ಡ ಕಾಡು ಪ್ರದೇಶ, ತೋಟಗಳ ನಡುವಿನಿಂದ ಹಾದು ಬಂದಿರೋದರಿಂದ ಮಳೆಗಾಲದಲ್ಲಿ ಹೆಚ್ಚಾಗಿ ಈ ಲೈನ್‌ನಲ್ಲಿ ವಿದ್ಯುತ್‌ನ ಕಡಿತ ಉಂಟಾಗುತ್ತಿದೆ. ಪುತ್ತೂರಿನ ಸಬ್ ಸ್ಟೇಶನ್‌ನಿಂದ ಬರುವ ಎಕ್ಸ್‌ಪ್ರೆಸ್ ಲೈನ್ ಕೊಪ್ಪಳ ಬಳಿಯ ಕುಕ್ಕುಜೆ ತನಕ ಬಂದಿದೆ. ಅಲ್ಲಿಂದ ಕೊಪ್ಪಳಕ್ಕೆ ಎಕ್ಸ್‌ಪ್ರೆಸ್ ಲೈನ್‌ನ ಸಂಪರ್ಕ ನೀಡಲು ಕೇವಲ ತಂತಿ ಮಾತ್ರ ಸಾಕು. ಕಂಬದ ಅಗತ್ಯವೂ ಇಲ್ಲ. ಅಲ್ಲೇ ಟಿಸಿ ಪಾಯಿಂಟ್ ಇದೆ. ಕೊಪ್ಪಳದಲ್ಲಿ ಸುಮಾರು 70-80 ಮನೆಗಳಿದ್ದು, ಇದೆಲ್ಲಾ ಇರುವಾಗ ನಮಗೂ ಎಕ್ಸ್‌ಪ್ರೆಸ್ ಲೈನ್‌ನಿಂದ ವಿದ್ಯುತ್ ಸಂಪರ್ಕ ನೀಡಿ. ಈ ಬೇಡಿಕೆ ಹಲವು ಗ್ರಾಮ ಸಭೆಗಳಲ್ಲಿ ನಾವು ಮಂಡಿಸಿದ್ದೇವೆ. ಆಗ ಮೆಸ್ಕಾಂ ಅಧಿಕಾರಿಗಳು ಕೇವಲ ಭರವಸೆ ನೀಡಿದ್ದಾರೆಯೇ ಹೊರತು, ಈವರೆಗೆ ಈಡೇರಿಸಿಲ್ಲ ಎಂದರು.
ಮಠ ಬಳಿ ಸರ್ವೇ ನಂಬರ್ 170ರಲ್ಲಿ 1.30 ಸೆಂಟ್ಸ್ ಜಾಗವನ್ನು ಮೆಸ್ಕಾಂನವರ ವಿದ್ಯುತ್ ಸಬ್ ಸ್ಟೇಶನ್‌ಗೆಂದು ಕಾಯ್ದಿರಿಸಲಾಗಿತ್ತು. ಆದರೆ ಅಲ್ಲಿನ ಮಣ್ಣು ವಿದ್ಯುತ್ ಸಬ್ ಸ್ಟೇಶನ್‌ಗೆ ಪೂರಕವಲ್ಲದ ಕಾರಣ ಸಬ್‌ಸ್ಟೇಶನ್‌ಗೆ ಈಗ ಕರ್ವೇಲು ಬಳಿ ಜಾಗ ನಿಗದಿಯಾಗಿದೆ. ಈ ಜಾಗವನ್ನು ಗ್ರಾ.ಪಂ. ವಶಕ್ಕೆ ಪಡೆದು ಅಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಯೋಜನೆ ರೂಪಿಸಲಾಗಿದೆ. ಆದರೆ ಆರ್‌ಟಿಸಿಯ ಕಾಲಂನಲ್ಲಿ ಈಗಲೂ ಮೆಸ್ಕಾಂಗೆ ಕಾಯ್ದಿರಿಸಿದ ಜಾಗ ಎಂದು ಹೆಸರಿರೋದ್ರಿಂದ ಅದು ಗ್ರಾ.ಪಂ.ಗೆ ಹಸ್ತಾಂತರ ಮಾಡಲು ಆಗಿಲ್ಲ. ಆದ್ದರಿಂದ ಆ ಕಲಂನಲ್ಲಿ ಮೆಸ್ಕಾಂನ ಹೆಸರನ್ನು ರದ್ದು ಮಾಡಲು ಎಸಿಯವರಿಗೆ ಮೆಸ್ಕಾಂ ಅಧಿಕಾರಿಗಳು ಕೋರಬೇಕೆಂದು ಆದಂ ಕೊಪ್ಪಳ ಆಗ್ರಹಿಸಿದರು. ಪುಳಿತ್ತಡಿ ಸಮೀಪದ ಮರುವೇಲು ಎಂಬಲ್ಲಿ ಟ್ರಾನ್ಸ್‌ಫಾರ್ಮರ್‌ವೊಂದನ್ನು ಒಂದೇ ಕಂಬದಲ್ಲಿ ಅಳವಡಿಸಲಾಗಿದ್ದು, ಕಂಬ ವಾಲಿ ನಿಂತು ಅಪಾಯದ ಸ್ಥಿತಿಯಲ್ಲಿದೆ. ಅಲ್ಲದೇ, ಈ ಭಾಗದಲ್ಲಿ ಅಕೇಷಿಯಾ ತೋಪಿನ ಗೆಲ್ಲುಗಳು ವಿದ್ಯುತ್ ಲೈನ್‌ಗಳಿಗೆ ತಾಗಿಕೊಂಡಿದ್ದು, ಅದನ್ನು ತೆರವು ಮಾಡುವ ಕೆಲಸ ಮಾಡಬೇಕೆಂದು ಗ್ರಾಮಸ್ಥ ವೆಂಕಪ್ಪ ಪೂಜಾರಿ ಆಗ್ರಹಿಸಿದರು. ರಾಮನಗರ- ಜನತಾ ಕಾಲನಿಯ ವಿದ್ಯುತ್ ತಂತಿಗಳು ತೀರಾ ಹಳೆಯದಾಗಿದ್ದು, ತುಕ್ಕು ಹಿಡಿದು ಆಗಾಗ ತುಂಡಾಗಿ ಬೀಳುತ್ತ ಇವೆ. ಆದ್ದರಿಂದ ಈ ತಂತಿಗಳನ್ನು ಬದಲಾವಣೆ ಮಾಡಬೇಕೆಂದು ಸರ್ವೇಶ್ ಭಟ್ ಮನವಿ ನೀಡಿದರು.
ಗೃಹ ಲಕ್ಷ್ಮೀ ಅರ್ಜಿವೊಂದಕ್ಕೆ ಗ್ರಾಮ ಒನ್‌ನಲ್ಲಿ 60 ರೂಪಾಯಿ ತೆಗೆದುಕೊಳ್ಳುತ್ತಾರೆ. ಸೈಬರ್‌ಗಳಂತೆ ಗ್ರಾಮ ಒನ್ ಕೂಡಾ ಆದರೆ ಗ್ರಾಮ ಒನ್‌ನ ಅವಶ್ಯಕತೆ ಏನು? ಸರಕಾರ ಗ್ರಾಮ ಒನ್ ಅನ್ನು ಅನುಷ್ಠಾನಕ್ಕೆ ತಂದ ಉದ್ದೇಶವಾದರೂ ಏನು ಎಂದು ಗ್ರಾಮಸ್ಥ ಲಕ್ಷ್ಮಣ ಗೌಡ ನೆಡ್ಚಿಲು ಆಗ್ರಹಿಸಿದರು. ಗೃಹ ಲಕ್ಷ್ಮೀ ಅರ್ಜಿಗೆ ಗ್ರಾಮ ಒನ್‌ನಲ್ಲಿ ಹೆಚ್ಚುವರಿ ಶುಲ್ಕ ಪಡೆಯುವುದು ಕಂಡು ಬಂದರೆ ಗಮನಕ್ಕೆ ತರುವಂತೆ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ತಿಳಿಸಿದರು.
ಮಳೆ ಹಾನಿಯಂತಹ ಸಂದರ್ಭದಲ್ಲಿ ಸರಕಾರಿದಿಂದ ತುರ್ತಾಗಿ ನೀಡುವ 10 ಸಾವಿರ ಪರಿಹಾರ ಧನದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಪ್ಪಿನಂಗಡಿ ಗ್ರಾಮಕರಣಿಕ ರಮೇಶ್ ಕೆ. ನೆರೆ ಬಂದು ಮನೆಯೊಳಗೆ ನೀರು ನುಗ್ಗಿ ಅಲ್ಲಿರುವ ಸಾಮಗ್ರಿಗಳು ಹಾಳಾದಂತಹ ಸಂದರ್ಭದಲ್ಲಿ ಮಾತ್ರ ಈ ತುರ್ತು ಪರಿಹಾರ ಧನ ನೀಡುವಂತದ್ದು. ಮನೆಗೆ ಮರ ಬಿದ್ದು ಹಾನಿ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪಗಳು ನಡೆದಾಗ ಅದಕ್ಕೆ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನೀಡಲಾಗುತ್ತದೆ. ಈ ತುರ್ತು ಪರಿಹಾರ ಪಡೆದುಕೊಂಡವರಿಗೆ ಮತ್ತೆ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ಪಡೆದುಕೊಳ್ಳಲು ಬರುವುದಿಲ್ಲ ಎಂದರು.
ಮಠದ ಹಿರ್ತಡ್ಕ ಶಾಲೆ ಉಪ್ಪಿನಂಗಡಿ ಗ್ರಾ.ಪಂ.ನ ವ್ಯಾಪ್ತಿಯಲ್ಲಿದ್ದು, ಆದರೆ ಶಿಕ್ಷಣ ಇಲಾಖೆ ಅದನ್ನು ಬಜತ್ತೂರು ಕ್ಲಸ್ಟರ್‌ಗೆ ಸೇರಿಸಿದೆ. ಇದರಿಂದ ಅಲ್ಲಿನ ಸಮಸ್ಯೆಗಳನ್ನು ಹೇಳಲು ಶಿಕ್ಷಕರಿಗೆ ಉಪ್ಪಿನಂಗಡಿ ಗ್ರಾಮ ಸಭೆಯಲ್ಲಿ ಸಾಧ್ಯವಾಗುತ್ತಿಲ್ಲ. ಅವರು ದೂರದ ಬಜತ್ತೂರು ಗ್ರಾ.ಪಂ.ಗೆ ಹೋಗಬೇಕು ಎಂದು ಆದಂ ಕೊಪ್ಪಳ ವಿಷಯ ಪ್ರಸ್ತಾಪಿಸಿದರು. ಆದ್ದರಿಂದ ಹಿರ್ತಡ್ಕ ಶಾಲೆಯನ್ನು ಉಪ್ಪಿನಂಗಡಿ ಕ್ಲಸ್ಟರ್‌ಗೆ ಸೇರಿಸಲು ನಿರ್ಣಯ ಕೈಗೊಳ್ಳಲಾಯಿತು. ಇಲ್ಲಿ ನೂತನ ಶೌಚಾಲಯ ಕಟ್ಟಡ ನಿರ್ಮಾಣವಾಗಿದ್ದು, ಅದರ ಬಳಿಯಲ್ಲಿಯೇ ಧರೆ ಕುಸಿದಿದ್ದರಿಂದ ಆ ಕಟ್ಟಡ ಅಪಾಯದಲ್ಲಿದೆ. ಆದರೆ ಇದಕ್ಕೆ ತಿಂಗಳಾಗುತ್ತಾ ಬಂದರೂ, ಶಿಕ್ಷಣ ಇಲಾಖೆ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ಸದಸ್ಯ ಅಬ್ದುರ್ರಶೀದ್ ಆಗ್ರಹಿಸಿದರು. ಅಂಗನವಾಡಿಗಳಿಗೆ ವಿತರಣೆಯಾಗುವ ಆಹಾರವು ಸಕಾಲಕ್ಕೆ ಅಂಗನವಾಡಿಗಳನ್ನು ತಲುಪಬೇಕು. ಎಷ್ಟೋ ಸಮಯದ ಬಳಿಕ ಕಳೆದ ಮೂರು ದಿನಗಳ ಹಿಂದೆ ಮೊಟ್ಟೆ ಅಂಗನವಾಡಿಗಳಿಗೆ ಸರಬರಾಜಾಗಿದೆ. ಹೀಗೆ ಆದಾಗ ಬಾಕಿಯಾದ ಮೊಟ್ಟೆಗಳು ಸೇರಿ ಓರ್ವ ಗರ್ಭೀಣಿಗೆ ಒಮ್ಮೆಲೇ 50-60 ಮೊಟ್ಟೆಗಳನ್ನು ನೀಡಬೇಕಾದ ಪ್ರಸಂಗ ಅಂಗನವಾಡಿಗಳಲ್ಲಿ ಒದಗಿ ಬರುತ್ತದೆ. ಒಮ್ಮೆಲೇ ಇಷ್ಟೊಂದು ಮೊಟ್ಟೆ ಕೊಟ್ಟರೆ ಏನು ಮಾಡೋದು. ಅದು ಕೆಡುವ ಸಂಭವವೂ ಇರುತ್ತದೆ. ಅಂಗನವಾಡಿಗಳಲ್ಲೂ ಶೇಖರಣೆಗೆ ಕಷ್ಟವಾಗುವ ಸಂದರ್ಭವೂ ಇದೆ. ಆದ್ದರಿಂದ ಸಕಾಲಕ್ಕೆ ಅಂಗನವಾಡಿಗಳಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವಂತೆ ಇಲಾಖಾಧಿಕಾರಿಗಳು ಟೆಂಡರುದಾರರಿಗೆ ಸೂಕ್ತ ನಿರ್ದೇಶನ ನೀಡಬೇಕೆನ್ನುವ ಆಗ್ರಹವೂ ಗ್ರಾಮ ಸಭೆಯಲ್ಲಿ ಕೇಳಿ ಬಂತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಮಹಮ್ಮದ್ ತೌಸೀಫ್ ಯು.ಟಿ., ವಿದ್ಯಾಲಕ್ಷ್ಮೀ ಪ್ರಭು, ಉಷಾ ನಾಯ್ಕ, ಲೊಕೇಶ್ ಪೂಜಾರಿ, ಧನಂಜಯ ಕುಮಾರ್, ರುಕ್ಮಿಣಿ, ಶೋಭಾ, ಯು.ಕೆ. ಇಬ್ರಾಹೀಂ, ಜಯಂತಿ, ಸುರೇಶ್ ಅತ್ರೆಮಜಲ್, ವನಿತಾ, ಕೆ. ಅಬ್ದುರ್ರಹ್ಮಾನ್, ನಬಿಸಾ, ಸೌಧ ಉಪಸ್ಥಿತರಿದ್ದರು. ಗ್ರಾಮೀಣ ಉದ್ಯೋಗದ ಉಪನಿರ್ದೇಶಕಿ ಶೈಲಜಾ ಭಟ್ ಚರ್ಚಾ ನಿಯಂತ್ರಣಾಧಿಕಾರಿ ಸಭೆಯನ್ನು ಮುನ್ನಡೆಸಿದರು. ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಪ್ರಭಾರ ಕಾರ್ಯದರ್ಶಿ ದಿನೇಶ್ ಎಂ. ವಂದಿಸಿದರು.