ತಾಲೂಕು ಬಂಟರ ಸಂಘದಿಂದ ಆಟಿಡೊಂಜಿ ದಿನ, ಸಾಧಕರಿಗೆ ಚಿನ್ನದ ಪದಕ ಪ್ರದಾನ

0

ಬಂಟ ಸಮುದಾಯ ಎನ್ನುವುದು ನಮ್ಮ ಹೆಮ್ಮೆ-ಸೀತಾರಾಮ್ ರೈ
ಪುತ್ತೂರು: ಬಂಟರ ಸಮುದಾಯ ಎನ್ನುವುದು ನಮಗೆ ಹೆಮ್ಮೆ ಎನಿಸಿದೆ. ಮಲ್ಲಿಕಾಪ್ರಸಾದ್, ಶ್ರೀಧರ್ ರೈ, ದಿ.ಸಾಂತಪ್ಪ ರೈಯವರು ನಿರ್ಮಿಸಿದ ಈ ಸಂಘ ಇಂದು ವಿಸ್ತಾರವಾಗಿ ಬೆಳೆದು ಫಲ ನೀಡಿದೆ ಎಂದು ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರುರವರು ಹೇಳಿದರು.
ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿಯ ನಿರ್ದೇಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ ಮಹಿಳಾ, ಯುವ, ವಿದ್ಯಾರ್ಥಿ ಬಂಟರ ಸಂಘದ ಸಹಯೋಗದಲ್ಲಿ ಆ.13ರಂದು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು. ಬಂಟರ ಸಂಘ ಅಂದು ಸ್ಥಾಪನೆಯಾದರೂ ಇಂದು ಸಮಾಜವು ಈ ರೀತಿ ಬೆಳೆಯುತ್ತದೆ ಎನ್ನುವ ಕಲ್ಪನೆ ಇರಲಿಲ್ಲ. ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ತಂಡವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಸಹಾಯಹಸ್ತ ಮೂಲಕ ಬಂಟ ಸಮುದಾಯಕ್ಕೆ ಶಕ್ತಿ-ಶಶಿಕುಮಾರ್ ರೈ:
ಅಧ್ಯಕ್ಷತೆ ವಹಿಸಿದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯರ ಆ ಕಾಲದ ಆಟಿಯ ಕಷ್ಟದ ದಿನಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ನಮ್ಮ ಕರ್ತವ್ಯವಾಗಿದೆ. ಬಂಟ ಸಮುದಾಯ ಸಮಾಜಮುಖಿ ಕೆಲಸ ಮಾಡಿಕೊಂಡು ಯಾವುದೇ ಬೇಧ-ಭಾವವಿಲ್ಲದೆ ಎಲ್ಲರನ್ನೂ ಸಮನಾಗಿ ಕಾಣುತ್ತಾ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡುತ್ತಾ ಬಂದಿರುವುದು ಬಂಟ ಸಮುದಾಯಕ್ಕೆ ಶಕ್ತಿಯಾಗಿದೆ ಎಂದರು.


ಸಾಧಕರ ಸನ್ಮಾನ ಬಂಟ ಸಮುದಾಯಕ್ಕೆ ಕಿರೀಟ-ನಿರಂಜನ್ ರೈ:
ಆಶಯ ಮಾತುಗಳನ್ನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟುರವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಬಂಟರ ಸಮಾಜಕ್ಕೆ ಕಿರೀಟವೆನಿಸಿದೆ. ಆಟಿ ತಿಂಗಳು ಕಷ್ಟದ ದಿನವಾದರೂ ಅಂದಿನ ತಿನಸುಗಳಲ್ಲಿ ಔಷಧೀಯ ಗುಣಗಳಿದ್ದವು. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು, ಮುಂದಿನ ಪೀಳಿಗೆಗೆ ಇದನ್ನ ಪ್ರಚುರಪಡಿಸುವಂತಾಗಬೇಕು ಎಂದರು.


ಬಂಟರು ಎಂದರೆ ಸಾಧಕರು-ಹೇಮನಾಥ ಶೆಟ್ಟಿ:
ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬಂಟರು ಎಂದರೆ ಸಾಧಕರು. ಜಗತ್ತಿನಲ್ಲಿನ ಯಾವುದೇ ಕ್ಷೇತ್ರವಿರಲಿ ಅಲ್ಲಿ ಬಂಟ ಸಾಧಕರು ಕಾಣ ಸಿಗುತ್ತಾರೆ. ಪುತ್ತೂರು ಬಂಟರ ಸಂಘದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗುರುತಿಸಬೇಕೆನ್ನುವ ಕನಸು ಕಂಡವರು ಕಡಮಜಲು ಸುಭಾಶ್ ರೈಯವರು. ಇದೇ ರೀತಿ ಪ್ರೋತ್ಸಾಹ ಮುಂದುವರೆಯಲಿ ಜೊತೆಗೆ ಮಹಿಳಾ ಬಂಟರ ಸಂಘದಿಂದ, ವಿದ್ಯಾರ್ಥಿ ಸಂಘದಿಂದಲೂ ಸಾಧಕರನ್ನು ಗುರುತಿಸುವ ಕೆಲಸ ಆಗಲಿ ಎಂದರು.
ಒಳ್ಳೆಯ ಕೆಲಸಕ್ಕೆ ಸಮಾಜ ಎಂದಿಗೂ ಗುರುತಿಸುತ್ತದೆ-ದಯಾನಂದ ರೈ:
ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಇಂದಿಲ್ಲಿ ಸನ್ಮಾನ ಪಡೆದುಕೊಂಡ ವ್ಯಕ್ತಿಗಳನ್ನು ನೋಡಿದಾಗ ಸಮಾಜದಲ್ಲಿ ಒಳ್ಳೆಯ ಮನಸ್ಸಿನವರು ಇದ್ದಾರೆ ಎಂದು ತಿಳಿಯುತ್ತದೆ. ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರನ್ನು ಸಮಾಜ ಗುರುತಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲಿ ಬಂಟ ಸಮುದಾಯದಲ್ಲಿ ಮತ್ತಷ್ಟು ಸಾಧಕರು ಹುಟ್ಟಿಕೊಳ್ಳಲಿ ಎಂದರು.
ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ-ಚಂದ್ರಹಾಸ ಶೆಟ್ಟಿ:
ಬೆಳಿಗ್ಗೆ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೆಲ ವರುಷದ ಹಿಂದೆ ಬಂಟರ ಸಂಘದ ವತಿಯಿಂದ ಆಟಿ ಕೂಟ ನಡೆಯುತ್ತಾ ಬಂದಿದ್ದು ಸರ್ವರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ನಾವೆಲ್ಲ ಬಂಟರು ಎಂಬಂತೆ ಮುಂದಿನ ದಿನಗಳಲ್ಲೂ ಸಂಭ್ರಮದ ಆಟಿ ಕೂಟ ಯಶಸ್ವಿಯಾಗಿ ನಡೆಯಲಿ ಎಂಬುದೇ ನನ್ನ ಹಾರೈಕೆಯಾಗಿದೆ ಎಂದರು.
ಸಂಘಟನೆಯು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದಾಗ ಮಾದರಿ ಎನಿಸಬಲ್ಲುದು-ವಸಂತ್ ರೈ:
ಆಟಿ ಕೂಟದ ಚಾವಡಿಯ ದೀಪ ಪ್ರಜ್ವಲನೆ ಮಾಡಿದ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳರವರು ಮಾತನಾಡಿ, ಬಂಟ ಸಮುದಾಯದ ಹಿರಿಯರು-ಕಿರಿಯರು ಒಟ್ಟಾಗಿ ಸೇರಿಕೊಂಡು ಆ ಕಾಲದ ಹಿರಿಯರು ಅನುಭವಿಸಿದ ಆಟಿಯ ಮಹತ್ವವನ್ನು ನಿರಂತರ ಆಚರಿಸಿಕೊಂಡು ಬಂದಿರುವುದಾಗಿದೆ. ಸಂಘಟನೆಯು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದಾಗ ಮಾದರಿ ಎನಿಸಬಲ್ಲುದು ಎಂದರು.
ಬಂಟ ಸಮುದಾಯದ ಪ್ರತಿಷ್ಟೆ, ಗೌರವವನ್ನು ಉಳಿಸಿ ಬೆಳೆಸುವವರಾಗಿ-ಪುರಂದರ ರೈ:
ಆಟಿ ಕೂಟದ ಚಾವಡಿಯ ಮಾತುಗಳನ್ನಾಡಿದ ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಿತ್ರಂಪಾಡಿರವರು, ಆಟಿ ಕೂಟಕ್ಕೂ ಬಂಟ ಸಮುದಾಯಕ್ಕೂ ಹತ್ತಿರದ ಸಂಬಂಧವಿದೆ. ಯಾಕೆಂದರೆ ಹಿಂದಿನ ನಮ್ಮ ಹಿರಿಯರು ರೈತಾಪಿ ವರ್ಗದಿಂದ ಬಂದವರಾಗಿದ್ದಾರೆ. ಪ್ರತಿಯೋರ್ವರು ಕಷ್ಟ-ಸುಖಗಳನ್ನು ಸಮನಾಗಿ ಹಂಚಿದಾಗ ಹೇಗೆ ಶಮನವಾಗುವುದೋ ಹಾಗೆಯೇ ಪ್ರೀತಿಯು ದ್ವಿಗುಣವಾಗುವುದು. ಹಿಂದಿನಿಂದಲೂ ಆಚರಿಸಿಕೊಂಡು ಬರಯತ್ತಿದ್ದ ಬಂಟ ಸಮುದಾಯದ ಪ್ರತಿಷ್ಟೆ, ಗೌರವವನ್ನು ಉಳಿಸಿ ಬೆಳೆಸುವವರಾಗಬೇಕು ಎಂದರು.
ಹಿರಿಯರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಎನ್.ಜಗನ್ನಾಥ್ ರೈ ಮಾದೋಡಿ ಹಾಗೂ ಹಿರಿಯ ಉದ್ಯಮಿ ಸುಂದರ ರೈ ಸವಣೂರುರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಸನ್ಮಾನ ಪತ್ರವನ್ನು ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ ಆಳ್ವರವರು ವಾಚಿಸಿದರು.
ಚೆನ್ನಮಣೆ ಆಡುವ ಮೂಲಕ ಚಾಲನೆ:
ಪ್ರಗತಿಪರ ಕೃಷಿಕ ಇಳಂತಾಜೆ ಸಂತೋಷ್ ಕುಮಾರ್ ರೈ ಹಾಗೂ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ರೈಯವರು ಚೆನ್ನಮಣೆ ಆಟವನ್ನು ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಿಗೀತೆ ಹಾಗೂ ಜನಪದ ಹಾಡನ್ನು ಕು.ಸಾನ್ವಿ ಉಪ್ಪಿನಂಗಡಿ, ನೃತ್ಯವನ್ನು ವೈಷ್ಣವಿ ಆಳ್ವ ಹಾಗೂ ಮಧುರ ಆಳ್ವ ಮತ್ತು ಶರಣ್ಯ ಶೆಟ್ಟಿ ಸಾವಣ್ಯ ರೈ, ಪಾಡ್ದನವನ್ನು ಹರಿಣಾಕ್ಷಿ ಜೆ.ಶೆಟ್ಟಿ ಪಂಗಡ, ಪ್ರಶಾಂತ್ ರೈ ತಂಡದಿಂದ ಯಕ್ಷಗಾನ ಹಾಡು ಮನರಂಜಸಿತು.
ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳದಡ್ಡರವರು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲಾ ಮಕ್ಕಳು ಪ್ರಾರ್ಥಿಸಿದರು. ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಸಂಜೀವ ಆಳ್ವ ಹಾರಾಡಿ, ಶಿವರಾಂ ಆಳ್ವ, ಮೋಹನ್ ರೈ ನರಿಮೊಗರು, ಸುಧೀರ್ ಶೆಟ್ಟಿ ತೆಂಕಿಲ, ಜಯಪ್ರಕಾಶ್ ರೈ ನೂಜಿಬೈಲು, ಅಮ್ಮಣ್ಣ ರೈ ಪಾಪೆಮಜಲು, ಸೂರ್ಯನಾಥ ಆಳ್ವ ಮಿತ್ತಳಿಕೆ, ಅನುಶ್ರೀ ಬಿ.ಶೆಟ್ಟಿ, ರವಿಚಂದ್ರ ರೈ, ಮಲ್ಲಿಕಾ ಪಕ್ಕಳರವರು ಶಾಲು ಹೊದಿಸಿ ಸ್ವಾಗತಿಸಿದರು. ಶಶಿರಾಜ್ ರೈ, ಸಂತೋಷ್ ಶೆಟ್ಟಿ, ಹರಿಣಾಕ್ಷಿ ಜೆ.ಶೆಟ್ಟಿ, ಸ್ವರ್ಣಲತಾ ಜೆ.ರೈ, ಎ.ಕೆ ಜಯರಾಮ ರೈ, ಅನಿತಾ ಹೇಮನಾಥ ಶೆಟ್ಟಿ, ಶಿವನಾಥ ರೈ ಮೇಗಿನಗುತ್ತು, ತಿಲಕ್ ರೈ ಕುತ್ಯಾಡಿ, ನಿತ್ಯಾನಂದ ಶೆಟ್ಟಿ, ಕುಸುಮಾ ಸವಣೂರು, ರಾಕೇಶ್ ರೈ ಕೆಡೆಂಜಿರವರು ಸನ್ಮಾನಿತರ ಪತ್ರ ವಾಚಿಸಿದರು. ಸನ್ಮಾನಿತರ ಪರವಾಗಿ ಎಸ್.ಬಿ ಜಯರಾಮ ರೈ ಬಳಜ್ಜ, ಪ್ರಶಸ್ತಿ ಪ್ರಾಯೋಜಕರ ಪರವಾಗಿ ಕಡಮಜಲು ಸುಭಾಶ್ ರೈ ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ.ರೈ ಡಿಂಬ್ರಿ ಹಾಗೂ ಬೆಳಗ್ಗಿನ ಚಾವಡಿ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಆಳ್ವರಮನೆ ಉಪ್ಪಳಿಗೆ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರ್ವಹಿಸಿದರು.

13 ಮಂದಿಗೆ ಚಿನ್ನದ ಪದಕ ಪ್ರಶಸ್ತಿ..
ಕಡಮಜಲು ಸುಭಾಶ್ ರೈ ‘ಸಿರಿ ಕಡಮಜಲು ಕೃಷಿ ಪ್ರಶಸ್ತಿ’ಯನ್ನು ಪ್ರಗತಿಪರ ಕೃಷಿಕ ಅರುಣ್ ಕುಮಾರ್ ರೈ ಆನಾಜೆ, ಡಾ.ಬಿ.ಸಂಜೀವ ರೈ ಬೂಡಿಯಾರು ‘ವೈದ್ಯಕೀಯ ಪ್ರಶಸ್ತಿ’ಯನ್ನು ಮಕ್ಕಳ ತಜ್ಞ ಡಾ.ಮಂಜುನಾಥ್ ಶೆಟ್ಟಿ, ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಅಬುದಾಬಿ ಜಯರಾಮ್ ರೈ ಮಿತ್ರಂಪಾಡಿರವರಿಂದ ‘ಸಮಾಜಸೇವಾ ಮಿತ್ರ ಪ್ರಶಸ್ತಿ’ಯನ್ನು ಸಮಾಜ ಸೇವಕ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಕೆ.ಸೀತಾರಾಮ ರೈ ಸವಣೂರು ಸಾಧಕ ‘ಸಹಕಾರಿ ರಶ್ಮಿ ಪ್ರಶಸ್ತಿ’ಯನ್ನು ಸಹಕಾರಿ ಸಾಧಕ ಎಸ್.ಬಿ ಜಯರಾಮ ರೈ ಬಳಜ್ಜ, ಮಿತ್ರಂಪಾಡಿ ಪುರಂದರ ರೈ ಪಂಚಮಿ ‘ಉದ್ಯಮ ಸಿರಿ ಪ್ರಶಸ್ತಿ’ಯನ್ನು ಉದ್ಯಮಿ ಕರುಣಾಕರ್ ರೈ ದೇರ್ಲ, ಅಗರಿ ಭಂಡಾರಿ ಸಹೋದರರು ‘ದೇಶಸೇವಾ ಅಗರಿ ಪ್ರಶಸ್ತಿ’ಯನ್ನು ಮಾಜಿ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು, ಎನ್.ಚಂದ್ರಹಾಸ ಶೆಟ್ಟಿ ದಿ.ರೇಖಾ ಮುತ್ತಪ್ಪ ರೈ ಮತ್ತು ದಿ.ಜಯಂತ್ ರೈ ಸ್ಮರಣಾರ್ಥ ‘ಕ್ರೀಡಾ ಪ್ರಶಸ್ತಿ’ಯನ್ನು ಕ್ರೀಡಾಪಟು ದಯಾನಂದ ರೈ ಕೋರ್ಮಂಡ, ಮೇರ್ಲ ಕರುಣಾಕರ್ ರೈ ‘ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿ’ಯನ್ನು ನಿವೃತ್ತ ಶಿಕ್ಷಕ ಎಚ್.ಶ್ರೀಧರ್ ರೈ, ಪನಡ್ಕ ಮಂಜುನಾಥ ಶೆಟ್ಟಿ ಬೊಡ್ಯಮೆ ಫಾರ್ಮ್ ಸ್ಮರಣಾರ್ಥ ‘ಅರಣ್ಯ ಮಿತ್ರ ಪ್ರಶಸ್ತಿ’ಯನ್ನು ಕಡಮಜಲು ಸುಭಾಶ್ ರೈ, ಅರಿಯಡ್ಕ ಚಿಕ್ಕಪ್ಪ ನಾಕ್ ಪ್ರತಿಭಾನ್ವಿತ ‘ವಿದ್ಯಾ ಅರಿಯಡ್ಕ ಪ್ರಶಸ್ತಿ’(ಪಿಯುಸಿ ವಿಭಾಗ)ಯನ್ನು ಕು.ಸಮೃದ್ಧಿ ರೈ ಮಾದೋಡಿ, ಚನಿಲ ತಿಮ್ಮಪ್ಪ ಶೆಟ್ಟಿ ಪ್ರತಿಭಾನ್ವಿತ ‘ವಿದ್ಯಾ ಚನಿಲ ಪ್ರಶಸ್ತಿ’(ಎಸೆಸ್ಸೆಲ್ಸಿ ವಿಭಾಗ)ಯನ್ನು ಕು.ಸ್ವಸ್ತಿಕ ಪಿ.ಆರ್ ಪಿಜಕ್ಕಳ, ದೋಳ್ಪಾಡಿರವರಿಗೆ ಚಿನ್ನದ ಪದಕದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುತ್ತೂರಿನ ಬಂಟ ಸಮುದಾಯದ ಆಟಿಡೊಂಜಿ ಕಾರ್ಯಕ್ರಮ ಪ್ರತಿ ವರ್ಷವೂ ಉತ್ತಮವಾಗಿ ನಡೆಯುತ್ತಿದೆ ಮಾತ್ರವಲ್ಲ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಸಾಧಕರನ್ನು ಸನ್ಮಾನ ಮಾಡುವ ಕಾರ್ಯಕ್ರಮ ಶ್ಲಾಘನೀಯ. ಇಡೀ ಬಂಟ ಸಮಾಜ ಒಟ್ಟಾಗಬೇಕು ಎನ್ನುವ ದೃಷ್ಟಿಕೋನದಿಂದ ಈ ಆಟಿಡೊಂಜಿ ಕಾರ್ಯಕ್ರಮವನ್ನು ಆಯೋಜಿಸಿದ್ದಾಗಿದೆ. ಬೇರೆ ಬೇರೆ ಭಾಷೆ ಮಾತನಾಡುವ ಧರ್ಮವಿದ್ದರೂ ಎಲ್ಲರೂ ಒಟ್ಟಾಗಿ ಸೇರುವಾಗ ಮಾತನಾಡುವುದು ತುಳು ಭಾಷೆಯಲ್ಲಿ. ತುಳುನಾಡಿನ ಸಂಸ್ಕೃತಿಯನ್ನು ನಾವು ಬೆಳೆಸಿಕೊಂಡು ಮುಂದುವರೆಸಬೇಕಾಗಿದೆ.


-ಅಶೋಕ್ ಕುಮಾರ್ ರೈ,
ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here