ದೇಶದಲ್ಲಿ ಎಂದೆಂದಿಗೂ ಸೌಹಾರ್ದ ವಾತಾವರಣ ಇರಲಿ-ರಫೀಕ್ ಫೈಝಿ
ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ77ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಮಸೀದಿಯ ಅಧ್ಯಕ್ಷ ಆರ್.ಎಂ ಅಲಿ ಹಾಜಿ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಾತಿ, ಧರ್ಮಗಳ ಹೋರಾಟಗಾರರು ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು ಅವರ ಹೋರಾಟ ಮತ್ತು ಸ್ಪೂರ್ತಿ ಎಂದಿಗೂ ಮಾದರಿಯಾಗಿದೆ ಎಂದು ಹೇಳಿದರು.
ಸ್ಥಳೀಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ಮಾತನಾಡಿ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ತೆರೆಮರೆಗೆ ಸರಿಸುವ ಪ್ರಯತ್ನಗಳು ಎಲ್ಲೋ ಒಂದು ಕಡೆ ನಡೆಯುತ್ತಿದ್ದು ನೈಜ ಇತಿಹಾಸವನ್ನು ನಾವೆಲ್ಲಾ ತಿಳಿಯಬೇಕು ಮತ್ತು ಮುಂದಿನ ತಲೆಮಾರಿಗೂ ತಿಳಿಸಿಕೊಡಬೇಕು, ದೇಶದಲ್ಲಿ ಎಂದೆಂದೂ ಸೌಹಾರ್ದತೆಯ ವಾತಾವರಣ ಇರಲಿ ಎಂದು ಹೇಳಿದರು.
ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ನಮ್ಮ ದೇಶವಿಂದು ಸ್ವಾತಂತ್ರ್ಯದ ಸಂಭ್ರಮದಲ್ಲಿರುವಾಗ ಅದೆಷ್ಟೋ ಮಂದಿ ಸ್ವಾತಂತ್ರ್ಯ ಆಚರಣೆಯಿಂದ ವಂಚಿತರಾಗಿದ್ದಾರೆ. ದೇಶದ ಸ್ವಾತಂತ್ರ್ಯವನ್ನು ಎಲ್ಲರೂ ಅನುಭವಿಸುವಂತಾಗಬೇಕು ಎಂದು ಹೇಳಿದರು.
ರೆಂಜಲಾಡಿ ಯಂಗ್‌ಮೆನ್ಸ್ ಅಧ್ಯಕ್ಷ ಯೂಸುಫ್ ರೆಂಜಲಾಡಿ ಮಾತನಾಡಿ ಸ್ವಾತಂತ್ರ್ಯ ಆಚರಣೆ ಒಂದು ದಿನಕ್ಕೆ ಸೀಮಿತವಾದರೂ ಕೂಡಾ ಸ್ವಾತಂತ್ರ್ಯ ಹೋರಾಟಗಾರರ ನೆನಪು ನಿತ್ಯ ಮಾಡಿಕೊಳ್ಳುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ ಎಂದು ಹೇಳಿದರು.
ಅಝೀಝ್ ರೆಂಜಲಾಡಿಗೆ ಸನ್ಮಾನ:
ಸಾಮಾಜಿಕ ಸೇವಾ ರಂಗದ ಉತ್ತಮ ಕಾರ್ಯಚಟುವಟಿಕೆಗಾಗಿ ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ರೆಂಜಲಾಡಿಯವರನ್ನು ರೆಂಜಲಾಡಿ ಮದ್ರಸ ವಿದ್ಯಾರ್ಥಿ ಸಂಘಟನೆ ಎಸ್‌ಕೆಎಸ್‌ಬಿವಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಾಧಕ ಮದ್ರಸ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನಡೆಯಿತು. ಎಸ್‌ಕೆಎಸ್‌ಬಿವಿ ಕುಂಬ್ರ ರೇಂಜ್ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನಿಝಾರ್ ಜೆ.ಎಸ್ ಅವರನ್ನು ಗುರುತಿಸಲಾಯಿತು.
ವೇದಿಕೆಯಲ್ಲಿ ಸ್ಥಳೀಯ ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ರೆಂಜಲಾಡಿ ಆದರ್ಶ ಸೇವಾ ಸಂಘದ ಅಧ್ಯಕ್ಷ ಇಮ್ರಾನ್ ಮಲ್ನಾಡ್, ಕಾರ್ಯದರ್ಶಿ ರಹೀಂ ರೆಂಜಲಾಡಿ ಹಾಗೂ ಜಮಾಅತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ವಿದ್ಯಾರ್ಥಿ ಶುಹೈಬ್ ಪ್ರತಿಜ್ಞಾ ವಿಧಿ ಬೋಧಿಸಿದರು.
ರೆಂಜಲಾಡಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಝೈನುದ್ದೀನ್ ಜೆ.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.