ಉಪ್ಪಿನಂಗಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇವರ ವತಿಯಿಂದ ಆಗಸ್ಟ್ 14 ರಂದು ಉಪ್ಪಿನಂಗಡಿ ವಲಯ ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್ನ ಅಧ್ಯಕ್ಷ ಉಷಾಚಂದ್ರ ಮುಳಿಯ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯೊಂದಿಗೆ ಪಂದ್ಯಾಟಗಳಲ್ಲಿ ಭಾಗವಹಿಸಬೇಕು ಎಂದರು.
ತಾಲೂಕು ಪರಿವೀಕ್ಷಣಾಧಿಕಾರಿ ಸುಂದರ ಗೌಡ ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂದು ತಿಳಿಸಿದರು. ವಾಲಿಬಾಲನ್ನು ಹೊತ್ತು ಧರೆಗೆ ಇಳಿದ ಇಂದ್ರಯಾನ ರಾಕೆಟ್ನಿಂದ ಬಾಲನ್ನು ಪಡೆಯುವ ಮೂಲಕ ಶ್ರೀ ದಯಾನಂದ ರೈ ಕೋರ್ಮಂಡ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಪಂದ್ಯಾಟವನ್ನು ವಿನೂತನವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಲಯ ನೋಡಲ್ ಅಧಿಕಾರಿ ಶ್ರೀಯುತ ಚಕ್ರಪಾಣಿ ಎ. ವಿ, ದೈಹಿಕ ಶಿಕ್ಷಣ ಶಿಕ್ಷಕರು ಬಜತ್ತೂರು ಉಪಸ್ಥಿತರಿದ್ದರು. ನಂತರ ನಡೆದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಒಟ್ಟು 11 ತಂಡಗಳು ಹಾಗೂ ಬಾಲಕಿಯರ 5 ತಂಡಗಳು ಭಾಗಹಿಸಿದ್ದವು. ಅಂತಿಮವಾಗಿ ಬಾಲಕರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಪ್ರಥಮ, ಸರಕಾರಿ ಪ್ರೌಢ ಶಾಲೆ ಪಡುಬೆಟ್ಟು ಇಲ್ಲಿನ ವಿದ್ಯಾರ್ಥಿಗಳ ತಂಡ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಪಡುಬೆಟ್ಟು ಇಲ್ಲಿನ ವಿದ್ಯಾರ್ಥಿನಿಯರ ತಂಡ ಪ್ರಥಮ, ಸೈಂಟ್ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ನೆಲ್ಯಾಡಿ ಇಲ್ಲಿನ ವಿದ್ಯಾರ್ಥಿನಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಈ 4 ತಂಡಗಳು ಪುತ್ತೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ವೈಯುಕ್ತಿಕವಾಗಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಾದ ಚಿಂತನ್ ಕೆ.ಸಿ ಬೆಸ್ಟ್ ಆಲ್ರೌಂ ಡರ್, ಪ್ರಾಂಜಲ್ ಬೆಸ್ಟ್ ಆಟ್ಯಾಕರ್, ಸರಕಾರಿ ಪ್ರೌಢ ಶಾಲೆ ಪಡುಬೆಟ್ಟು ಇಲ್ಲಿನ ವಿದ್ಯಾರ್ಥಿಗಳಾದ ರಮ್ಯ ಬೆಸ್ಟ್ ಆಲ್ರೌಂ ಡರ್, ಹರ್ಷ. ಪಿ ಬೆಸ್ಟ್ ಆಟ್ಯಾಕರ್, ಕೌಶಿಕ ಬೆಸ್ಟ್ ಪಾಸರ್, ಸೈಂಟ್ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ನೆಲ್ಯಾಡಿ ಇಲ್ಲಿನ ಆಯಿಶಾ ಫಾಕಿಹಾ ಬೆಸ್ಟ್ ಪಾಸರಾಗಿ ಆಯ್ಕೆಯಾಗಿರುತ್ತಾರೆ. ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಯು. ಜಿ ರಾಧಾ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ವಂದನಾ, ಸೀತಾರಾಮ ಗೌಡ ದೈಹಿಕ ಶಿಕ್ಷಣ ಶಿಕ್ಷಕರು ಹಿರೇಬಂಡಾಡಿ, ಶಿಕ್ಷಕ – ಶಿಕ್ಷಕೇತರ ವೃಂದವರು ಹಾಗೂ ಪಾಲಕರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಸಹ ಶಿಕ್ಷಕಿಯಾದ ರಚನಾ, ನೇಹಾ, ಶ್ರೀಮತಿ ಚಿತ್ರಾ, ಶೀಲಾ ಹರೀಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.