ವಿಟ್ಲ : ಯಕ್ಷ ಮಿತ್ರರು ವಿಟ್ಲ ವಾಟ್ಸ್‌ಆಪ್ ಬಳಗದವರ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ಸಭಾಂಗಣದಲ್ಲಿ ಆ.13ರಂದು ವಿಟ್ಲ ಯಕ್ಷೋತ್ಸವ ನಡೆಯಿತು.
ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ಆಸ್ರಣ್ಣ ಅವರು ಮಾತನಾಡಿ, ಸರ್ವರೂ ಸಂತೋಷಕ್ಕಾಗಿ ಸಾಹಿತ್ಯ, ಸಂಗೀತ, ಕಲೆಗೆ ಮಾರುಹೋಗುತ್ತಾರೆ.ಯಕ್ಷಗಾನ ನಾಶ ಆಗಲು ಬಿಡಲೇಬಾರದು. ಮಕ್ಕಳ ಶಿಕ್ಷಣಕ್ಕೆ ಯಕ್ಷಗಾನದಿಂದ ಯಾವುದೇ ತೊಂದರೆಯಾಗುವುದಿಲ್ಲ. ಉತ್ತಮ ಫಲಿತಾಂಶಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭುಜಬಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಾಸಕ ಪದ್ಮನಾಭ ಕೊಟ್ಟಾರಿ, ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ ಬೆಳ್ಳಾರೆ, ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್, ಇಕೋ ವಿಶನ್ ಮಾಲಕ ರಾಜಾರಾಮ ಭಟ್ ಬಲಿಪಗುಳಿ, ವಿಟ್ಲ ಅರಮನೆಯ ಕಷ್ಣಯ್ಯ ಕೆ.ವಿಟ್ಲ, ಸ್ಪರ್ಶ ಕಾಲ ಮಂದಿರದ ಸುಭಾಶ್ಚಂದ್ರ ಜೈನ್, ಯಕ್ಷಭಾರತ ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಹಿರಿಯ ಅರ್ಥಧಾರಿ ಶಂಭು ಶರ್ಮ ಅವರಿಗೆ ಹುಟ್ಟೂರ ಗೌರವ ಪುರಸ್ಕಾರ, ಕಲಾಪೋಷಕ ದಿನಕರ ಭಟ್ ಮಾವೆ, ಹವ್ಯಾಸಿ ಹಿಮ್ಮೇಳ ಕಲಾವಿದ ಪಿ.ಜಿ.ಜಗನ್ನಿವಾಸ ರಾವ್, ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಹರೀಶ್ ಕೊಳ್ತಿಗೆ ಅವರನ್ನು ಪುರಸ್ಕರಿಸಲಾಯಿತು. ಅಗಲಿದ ಕಲಾವಿದ ದಿ.ಜಗದೀಶ್ ನಲ್ಕ ಅವರ ಕುಟುಂಬಕ್ಕೆ ಯಕ್ಷಸಾಂತ್ವನ ನಿಧಿ ಸಮರ್ಪಿಸಲಾಯಿತು.
ಹರೀಶ್ ಬಳಂತಿಮೊಗರು, ಕಷ್ಣಪ್ರಕಾಶ್ ಉಳಿತ್ತಾಯ, ರಮೇಶ ಕುಲಶೇಖರ ಅಭಿನಂದನೆ ಭಾಷಣ ಮಾಡಿದರು. ಸಂಘಟಕ ಸುಬ್ರಹ್ಮಣ್ಯ ಮುರಾರಿ ಭಟ್ ಪಂಜಿಗದ್ದೆ ಪ್ರಸ್ತಾವಿಸಿ, ಸ್ವಾಗತಿಸಿದರು. ಸಾಯಿಸುಮಾ ನಾವುಡ, ರಾಧಾಕಷ್ಣ ಎ. ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ :
ಮಧ್ಯಾಹ್ನ ದ್ವಾರಕಾ ಕನ್‌ಸ್ಟ್ರಕ್ಷನ್ ಮಾಲಕ, ಕಲಾಪೋಷಕ ಗೋಪಾಲಕೃಷ್ಣ ಭಟ್ ಯಕ್ಷೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷ ಶ್ರೀಧರ ಶೆಟ್ಟಿ ಡಿ., ಕೃಷ್ಣಮೂರ್ತಿ ಚೆಂಬರ್ಪು, ರಾಜಗೋಪಾಲ ಜೋಷಿ, ಗಣಪತಿ ಭಟ್ ಪಂಜಿಗದ್ದೆ, ಕೃಷ್ಣ ಭಟ್ ಪಂಜಿಗದ್ದೆ, ಸಂಘಟಕ ಸುಬ್ರಹ್ಮಣ್ಯ ಮುರಾರಿ ಭಟ್ ಪಂಜಿಗದ್ದೆ, ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಡಳಿತಾಧಿಕಾರಿ ರಾಧಾಕೃಷ್ಣ ಎ. ಮತ್ತಿತರರು ಉಪಸ್ಥಿತರಿದ್ದರು. ಮಧ್ಯಾಹ್ನ ತೆಂಕು ಬಡಗು ತಿಟ್ಟಿನ ದ್ವಂದ್ವ ಭಾಗವತಿಕೆಯೊಂದಿಗೆ ವಾಚಿಕೋತ್ಸವ, ರಾತ್ರಿ ತುಳು ಕಲೋತ್ಸವದ ಅಂಗವಾಗಿ ಕಾಡಮಲ್ಲಿಗೆ ಯಕ್ಷಗಾನ ಬಯಲಾಟ ನಡೆಯಿತು.