ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪೋಕ್ಸೋ ಕಾಯಿದೆ ಬಗ್ಗೆ, ಕಾನೂನು ಅರಿವು ಕಾರ್ಯಕ್ರಮ ಆ.16ರಂದು ನಡೆಯಿತು.
ಪುತ್ತೂರು ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಮಧುಸೂಧನ್ ರಾವ್ ಮಾಹಿತಿ ನೀಡಿ ಮಾತನಾಡಿ, ಅಪರಾಧ ಚಟುವಟಿಕೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಇರುತ್ತದೆ. ಎಲ್ಲ ಕಾಯಿದೆಗಳನ್ನು ಚಿಂತಕರ ಸಮ್ಮುಖದಲ್ಲಿ ಚರ್ಚಿಸಿ ಕೊನೆಗೆ ಸರಕಾರ ಅದನ್ನು ಜಾರಿಗೆ ತರುತ್ತದೆ. ಪೋಕ್ಸೋ ಕಾಯಿದೆಯೂ ಮಕ್ಕಳ ಮೇಲಿನ ಅಪರಾಧ ಚಟುವಟಿಕೆಗಳು, ದೌರ್ಜನ್ಯ ಕಡಿಮೆ ಆಗಬೇಕೆಂಬ ಹಿತ ದೃಷ್ಟಿಯಿಂದ ಸರಕಾರವು ಜಾರಿಗೆ ತಂದಿದೆ ಎಂದು ಹೇಳಿದರು.
ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಭವಾನಿ ಮಾತನಾಡಿ, ಜೆಜೆ ಆಕ್ಟ್ ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪೋಕ್ಸೋ ಕಾಯಿದೆ ಪ್ರಕಾರ ಆರೋಪಿತ ವ್ಯಕ್ತಿ ಆರೋಪಿಯಾಗಿರದೆ ನೇರವಾಗಿ ಅಪರಾಧಿ ಆಗುತ್ತಾನೆ, ವಿದ್ಯಾರ್ಥಿನಿಯರು ಯಾವುದೇ ಆಮಿಷಗಳಿಗೆ ಬಲಿಯಾಗದೆ, ದುರ್ವರ್ತನೆ ತೋರುವವರನ್ನು ಧೈರ್ಯದಿಂದ ಎದುರಿಸಬೇಕು ಎಂದರು. ಮಾದಕ ದ್ರವ್ಯಗಳ ಸೇವನೆ, ಮಾರಾಟ, ಎಲ್ಲವೂ ಕಾನೂನಿನಲ್ಲಿ ಅಪರಾಧ, ವಿದ್ಯಾರ್ಥಿಗಳು ಆ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದರ್ರಹ್ಮಾನ್ ಹಾಜಿ ಮಾತನಾಡಿ, ಕಾನೂನಿನ ಬಗ್ಗೆ ಅರಿವು ಮಕ್ಕಳಲ್ಲಿ ಮೂಡಿಸಿ, ಮಾದಕ ಸೇವನೆ ಮತ್ತು ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿದ ಪೋಲೀಸ್ ಇನ್ಸ್ಪೆಕ್ಟರ್ ಮಧುಸೂಧನ್ ರಾವ್ ಹಾಗೂ ಸಬ್ ಇನ್ಸ್ಪೆಕ್ಟರ್ ಭವಾನಿಯವರನ್ನು ಅಭಿನಂದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ, ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಲಕ್ಷ್ಮಿ ಬಾಯ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಪಿ ಶೆಟ್ಟಿ ಸ್ವಾಗತಿಸಿ ವಂದಿಸಿದರು.