ಪುತ್ತೂರು: ದರ್ಬೆ ಸಂತ ಫಿಲೋಮಿನಾ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಎನ್ಸಿಸಿ ಆರ್ಮಿ ಹಾಗೂ ನೇವಿ ಘಟಕಗಳ ವತಿಯಿಂದ ಮೇರಿ ಮಾಟಿ ಮೇರಾ ದೇಶ್ ಕಾರ್ಯಕ್ರಮ ಆಯೋಜಿಸಲಾಯಿತು. ರೈತರಿಗೆ ಗೌರವ ಸೂಚಿಸುವ ಸಲುವಾಗಿ ಕೆಡೆಟ್ಗಳು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡರೆ ಸೈನಿಕರಿಗೆ ಗೌರವ ಸೂಚಕವಾಗಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಇದಲ್ಲದೆ ಪರಿಸರ ಜಾಗೃತಿಗಾಗಿ ಕೆಡೆಟ್ಗಳು ಗಿಡಗಳನ್ನು ನೆಟ್ಟರು.
ಎನ್ಎಸ್ಎಸ್, ರೋವರ್ಸ್-ರೇಂಜರ್ಸ್, ಯುತ್ ರೆಡ್ಕ್ರಾಸ್ ಹಾಗೂ ಲಲಿತಕಲಾ ಘಟಕಗಳ ಸಹಯೋಗದೊಂದಿಗೆ ಎನ್ಸಿಸಿ ಕೆಡೆಟ್ಗಳು ಪರಿಸರ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡರು. ಜಾಥಾಗೆ ಜಾಲನೆ ನೀಡಿದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆಂಟೊನಿ ಪ್ರಕಾಶ್ ಮೊಂತೆರೋ ಮಾತನಾಡಿ ಈ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮ ಪರಿಸರವನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ರಕ್ಷಿಸುವ ಪ್ರಾಮುಖ್ಯತೆಯನ್ನು ಗುರುತಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ. ನಮ್ಮ ದೇಶದಲ್ಲಿ ಹೇರಳವಾಗಿ ದೊರೆಯುವ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಹಸಿರು, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಭಾರತವನ್ನು ರಚಿಸುವ ನಮ್ಮ ಸಂಕಲ್ಪದಿಂದ ನಾವು ಚಿಂತನಶೀಲ ಹಾಗೂ ಬದ್ಧತೆಯ ನಾಗರಿಕರ ತಂಡವಾಗೋಣ ಎಂದು ಹೇಳಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ್ ರಯಾನ್ ಕ್ರಾಸ್ತಾ ಉಪಸ್ಥಿತರಿದ್ದರು.
ಕಾಲೇಜಿನ ಮುಂಭಾಗದಿಂದ ಪ್ರಾರಂಗೊಂಡ ಜಾಥಾವು ಕಾವೇರಿಕಟ್ಟೆ ಮೂಲಕ ದರ್ಬೆ ವೃತ್ತದ ಕಡೆಗೆ ಸಾಗಿ ಫಾ.ಪತ್ರಾವೋ ವೃತ್ತದವರೆಗೆ ಸಾಗಿತು. ಕೊನೆಗೆ ಕಾಲೇಜಿನ ಮುಖ್ಯ ದ್ವಾರದ ಮುಂದೆ ಸಮಾರೋಪಗೊಂಡಿತು. ಜಾಥಾದಲ್ಲಿ ಕೆಡೆಟ್ಗಳು ಮತ್ತು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ಘೋಷಣೆಗಳನ್ನು ಕೂಗಿದರು. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಜಾಥಾದಲ್ಲಿ ಕೆಡೆಟ್ಗಳು ಮತ್ತು 500 ಕ್ಕೂ ಹೆಚ್ಚು NSS ಸ್ವಯಂಸೇವಕರು, ರೋವರ್ಗಳು, ರೇಂಜರ್ಗಳು ಮತ್ತು ವಿದ್ಯಾರ್ಥಿಗಳು ಆಚರಣೆಯಲ್ಲಿ ಭಾಗವಹಿಸಿದರು. ಈ ಜಾಥಾವನ್ನು ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜಾನ್ಸನ್ ಡೇವಿಡ್ ಸಿಕ್ವೇರಾ ಮತ್ತು ನೌಕಾದಳದ ಅಧಿಕಾರಿ ತೇಜಸ್ವಿ ಭಟ್ ಮತ್ತು ಸಂತ ಫಿಲೋಮಿನಾ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಿವಿಧ ಕಾರ್ಯಕಾರಿ ಘಟಕಗಳ ಸಂಚಾಲಕರು ಸಂಯೋಜಿಸಿದರು.