ವಿಟ್ಲ: ಮಾಣಿ ಗ್ರಾಮ ಪಂಚಾಯತ್ ಗೆ ಒಳಪಡುವ ಮಾಣಿ – ಲಕ್ಕಪ್ಪಕೋಡಿ,ಕಡೆಕ್ಕಾನ – ಬಲ್ಯ ಬರಿಮಾರು ಸಂಪರ್ಕದ ರಸ್ತೆಯ ಹೆಸರಿನಲ್ಲಿ ತಂಡವೊಂದು ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದು,ಇದರ ವಿರುದ್ದ ತಹಸೀಲ್ದಾರ್ ಅವರಿಗೆ ದೂರು ನೀಡಿದ್ದೇವೆ ಎಂದು ಪ್ರಸನ್ನ ಕಾಮತ್ ತಿಳಿಸಿದರು.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಅದೇಶವನ್ನು ಧಿಕ್ಕರಿಸಿ ರಸ್ತೆ ನಿರ್ಮಾಣ ಮಾಡಿರುವ ತಂಡ ಸುಳ್ಳು ಹೇಳಿಕೆಯನ್ನು ಕೊಡುವ ಮೂಲಕ ಕುಟುಂಬದ ಮರ್ಯಾದೆಗೂ ಧಕ್ಕೆ ತಂದಿದೆ ಎಂದು ಆರೋಪ ಮಾಡಿದರು.
2023ನೇ ಜು.9ರಂದು ನಮ್ಮ ಸ್ವಾಧೀನ ಅನುಭವದಲ್ಲಿದ್ದ ಆಸ್ತಿಗೆ ಪುಷ್ಪರಾಜ ಚೌಟ, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಸುಬ್ರಹ್ಮಣ್ಯ ಭಟ್, ಗಣೇಶ್ ರೈ ಮಾಣಿ, ನಾರಾಯಣ ಭಟ್, ನಾರಾಯಣ ಶೆಟ್ಟಿ, ಎಡ್ವರ್ಡ್ ಮಾರ್ಟಿಸ್, ವಾಲ್ವರ್ ಮಸ್ಕರೇಂಞಸ್, ಚೆನ್ನಪ್ಪ ಮೂಲ್ಯ, ವಿಷ್ಣು ಭಟ್, ರಾಧ, ಸುಬ್ಬಣ್ಣ ಆಮ್ಲಿ , ಸುರೇಶ್ ಪೂಜಾರಿ, ಹರೀಶ್ ಚಂದ್ರ, ಮಾಧವ, ಶಿವಪ್ಪ ಪೂಜಾರಿ ಮತ್ತಿತರರು ಅಕ್ರಮ ಪ್ರವೇಶ ಮಾಡಿ ಹೊಸ ಮಾರ್ಗವನ್ನು ನಿರ್ಮಿಸುವ ಉದ್ದೇಶದಿಂದ ಜೆ ಸಿ ಬಿ ಯಂತ್ರವನ್ನು ತಂದಿರುತ್ತಾರೆ. ಅವರು ನಿರ್ಮಾಣ ಮಾಡಲು ಇಚ್ಛಿಸುವ ಆಕ್ರಮ ರಸ್ತೆಯು ಸಾರ್ವಜನಿಕರ ಉಪಯೋಗಕ್ಕೆ ಬರುವುದಿಲ್ಲ. ಈ ಜಮೀನಿಗೆ ಸಂಬಂಧಿಸಿದಂತೆ ದಿನಾಂಕ 29-05-2023ರಂದು ಜಿಲ್ಲಾಧಿಕಾರಿ ಅವರು ಅದೇಶ ಮಾಡಿದ್ದು, ಸಂಖ್ಯೆ L.N.D (2) C.R. 246/2023/E-234831/B3 ದಿನಾಂಕ 29-05-2023 ರಲ್ಲಿ ಹೊರಡಿಸಿದ ಆದೇಶದ ಪ್ರಕಾರ ಸಿಎಲ್ / ಮುನ್ಸಿಪ್ ನ್ಯಾಯಾಲಯ ದಲ್ಲಿರುವ ಪ್ರಕರಣವು ಮುಕ್ತಾಯವಾಗುವ ವರೆಗೂ, ಪ್ರಸ್ತಾವಿತ ಜಮೀನು ಪ್ರಸನ್ನ ಕಾಮತ್‌ರವರ ಸೊತ್ತು ಎಂದು ಭಾವಿಸಿ ಸಿವಿಲ್ ನ್ಯಾಯಾಲಯದಲ್ಲಿ ಆಗುವ ತೀರ್ಮಾನಕ್ಕೆ ಒಳಪಟ್ಟು ಕ್ರಮ ವಹಿಸಲು ಆದೇಶವನ್ನು ಹೊರಡಿಸಿರುತ್ತಾರೆ. ಹಾಗೂ ಈ ಆದೇಶವು ಊರ್ಜಿತದಲ್ಲಿರುತ್ತದೆ. ಮೇಲೆ ಹೇಳಿದ ಆದೇಶವಿದ್ದ ವಿಷಯ ಗೊತ್ತಿದ್ದರೂ ಸಹ ಮೇಲೆ ಹೇಳಿದ ವ್ಯಕ್ತಿಗಳು ಆದೇಶವನ್ನು ದಿಕ್ಕರಿಸಿ ವಿವಾದಿತ ಸ್ಥಳದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಪ್ರಯತ್ನ ಪಟ್ಟಾಗ ಪ್ರಸನ್ನ ಕಾಮತ್ ಹಾಗೂ ಅವರ ಕುಟುಂಬಸ್ಥರು ಆಕ್ಷೇಪವನ್ನು ವ್ಯಕ್ತಪಡಿಸಿ ಅಕ್ರಮವಾಗಿ ಮಾರ್ಗವನ್ನು ಮಾಡಬಾರದೆಂದು ತಕರಾರನ್ನು ಎತ್ತಿದ್ದರು. ಅದೂ ಅಲ್ಲದೆ ಪ್ರಸ್ತುತ ಪ್ರಕರಣದ ಬಗ್ಗೆ ವಿಷ್ಣು ಭಟ್‌ರವರು ಉಚ್ಛ ನ್ಯಾಯಾಲಯ ಬೆಂಗಳೂರಿನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿರುತ್ತಾರೆ ಮತ್ತು ರಿಟ್ ಅರ್ಜಿಯು ತನಿಖೆಗೆ ಬಾಕಿ ಇರುತ್ತದೆ. ಆದರೆ ರಿಟ್ ಅರ್ಜಿಯಲ್ಲಿ ಮೇಲೆ ಹೇಳಿದ ಜಿಲ್ಲಾಧಿಕಾರಿಯವರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಿರುವುದಿಲ್ಲ. ಮತ್ತು ‘ರಿಟ್ ಅರ್ಜಿಯಲ್ಲಿ ಯಾವುದೇ ಮದ್ಯಂತರ ಆದೇಶ ಆಗಿರುವುದಿಲ್ಲ. ವಿಷಯ ಹೀಗಿದ್ದ ಮೇಲೆ ಹೆಸರಿಸಲಾದ ವ್ಯಕ್ತಿಗಳ ಕುಕೃತ್ಯವು ಕಾನೂನು ಬಾಹಿರವಾಗಿರುತ್ತದೆ. ಮತ್ತು ಖಂಡನೀಯವಾಗಿರುತ್ತದೆ. ಅದೂ ಅಲ್ಲದೆ ಮೇಲೆ ಹೇಳಿದ ಜಿಲ್ಲಾಧಿಕಾರಿಯವರ ಆದೇಶವನ್ನು ಇವರು ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಕಾಮತ್, ಪುರುಷೋತ್ತಮ ಕಾಮತ್ ಮತ್ತು ಪೃಥ್ವಿ ಕಾಮತ್ ಉಪಸ್ಥಿತರಿದ್ದರು.