ಪುತ್ತೂರಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಮಾಧ್ಯಮದವರ ಒಗ್ಗಟ್ಟಿನ ಸಹಕಾರ ಅಗತ್ಯ – ಪುತ್ತಿಲ ಪರಿವಾರದ ಶತ ದಿನದ ಸಂಭ್ರಮದಲ್ಲಿ ಭಾಸ್ಕರ್ ಆಚಾರ್ ಹಿಂದಾರ್

0

ಪುತ್ತೂರು:ಪುತ್ತೂರಿಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಏನು ಮಾಡಬಹುದು.ದುಡ್ಡಿಲ್ಲದೆ ಯಾವುದೇ ವ್ಯವಸ್ಥೆ ಆಗುವುದಿಲ್ಲ ಎಂಬುದು ಗೊತ್ತಿದೆ.ಆದರೆ ಒಬ್ಬರಿಗೆ ಅನ್ಯಾಯ ಮಾಡಿ ದುಡ್ಡು ಕಬಳಿಸುವ ಲಂಚವನ್ನು ಕಡಿಮೆ ಮಾಡಲು ಮಾಧ್ಯಮದವರ ಸಹಕಾರ ಬೇಕು ಎಂದು ಪುತ್ತಿಲ ಪರಿವಾರದ ಮಾರ್ಗದರ್ಶಕರಾಗಿರುವ ಭಾಸ್ಕರ್ ಆಚಾರ್ ಹಿಂದಾರ್ ಅವರು ಹೇಳಿದ್ದಾರೆ.

ಪುತ್ತಿಲ ಪರಿವಾರದ ಶತದಿನದ ಅಂಗವಾಗಿ ಮುಂಡೂರು ನೇಸರ ಕಂಪ ಸುಧೀರ್ ಶೆಟ್ಟಿ ನೇಸರ ಅವರ ನಿವಾಸದಲ್ಲಿ ಆ.17ರಂದು ಪುತ್ತೂರಿನ ಮಾಧ್ಯಮ ಮಿತ್ರರಿಗೆ, ಸಾಮಾಜಕ ಜಾಲತಾಣದ ಪ್ರಮುಖರಿಗೆ ಪುತ್ತಿಲ ಪರಿವಾರದಿಂದ ನಡೆದ ಮಿತ್ರಭೋಜನ ಕೂಟದಲ್ಲಿ ಅವರು ಮಾತನಾಡಿದರು.


ಮಾಧ್ಯಮ ದೇಶದ ಶಕ್ತಿಯಾಗಿರುವುದರಿಂದ ಮುಂದೆ ಪುತ್ತೂರಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಏನು ಮಾಡಬಹುದು ಎಂಬುದಕ್ಕೆ ಮಾಧ್ಯಮದ ಸಹಕಾರ ಬೇಕಾಗಿದೆ.ಲಂಚವನ್ನು ಕಡಿಮೆ ಮಾಡಲು ಎಲ್ಲ ಮಾಧ್ಯಮದವರು ಒಟ್ಟಿಗೆ ಸೇರಿ ಪ್ರಯತ್ನ ಮಾಡಿದರೆ ಒಳ್ಳೆಯದು.ನಾನು ಲಂಚ ಕೊಡುತ್ತೇನೆ ಎಂದು ಹೇಳುವುದಿಲ್ಲ.ಆದರೆ ನಮ್ಮ ಕೆಲಸ ಆಗಬೇಕಾದರೆ ಕೊಡಬೇಕಾದ ಪರಿಸ್ಥಿತಿ ಇದೆ.ಇದನ್ನು ತಡೆಯಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇರುವ ಏಜೆಂಟ್‌ಗಳನ್ನು ಕಡಿಮೆ ಮಾಡಲು ಮಾಧ್ಯಮದವರು ಈ ರೀತಿ ಸಂಘಟನೆ ಮಾಡಿದರೆ ಅದು ಸಾರ್ಥಕ ಆಗುತ್ತದೆ.ಜನಸಾಮಾನ್ಯರು ಒಂದು ಕಚೇರಿಗೆ ಮೂರು ನಾಲ್ಕು ಬಾರಿ ಹೋಗುವುದು ಸರಿಯಲ್ಲ. ಇಂತಹ ವ್ಯವಸ್ಥೆಯನ್ನು ಪುತ್ತೂರಿನಲ್ಲಿ ಕಡಿಮೆ ಮಾಡಲು ಮಾಧ್ಯಮದವರು ಒಟ್ಟಾಗಿ ಸಹಕಾರ ಮಾಡಬೇಕು ಎಂದು ಭಾಸ್ಕರ ಆಚಾರ್ ಹೇಳಿದರು.


ಪುತ್ತಿಲ, ಪುತ್ತೂರು ಎರಡೂ ರಾಜ್ಯ,ಕೇಂದ್ರದಲ್ಲಿ ಸುದ್ದಿಯಾಗಿದೆ: ಸಿದ್ಧಾಂತ ವ್ಯತ್ಯಾಸ ಆಗುವಾಗ ಎಲ್ಲಾ ಮಾಧ್ಯಮ ಮತ್ತು ಹಿತೈಷಿಗಳು, ಕಾರ್ಯಕರ್ತರು ಸೇರಿ ಸರಿಯಾದ ಕಡೆಗೆ ಹೋಗಬೇಕೆಂಬ ದೃಷ್ಟಿಯಿಂದ ಪ್ರತಿನಿಧಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಆಯ್ಕೆ ಮಾಡಿಕೊಂಡು ಸಂಘಟನಾತ್ಮಕವಾಗಿ ಕೆಲಸ ಮಾಡಿದ ಕಾರಣ ಪುತ್ತಿಲ ಮತ್ತು ಪುತ್ತೂರು ಎರಡೂ ರಾಜ್ಯ ಮತ್ತು ಕೇಂದ್ರದಲ್ಲಿ ಸುದ್ದಿಯಾಗಿದೆ. ರಾಷ್ಟ್ರಮಟ್ಟದ ನಾಯಕರಿಗೂ ಏನೋ ಒಂದು ಆಗಿದೆ.ಯಾಕೆ ಆಗಿದೆ ಎಂಬ ಪ್ರಶ್ನೆ ಅವರಲ್ಲಿ ಉದ್ಭವ ಆಗಿದೆ. ಇದಕ್ಕೆ ಅವರಿಗೆ ಸರಿಯಾದ ಉತ್ತರಗಳು ಸಿಕ್ಕಿದೆ.ಇದಕ್ಕೆಲ್ಲ ಪ್ರಮುಖ ಕಾರಣ ಮಾಧ್ಯಮದವರು.ಜನರಿಗೆ ಎಲ್ಲಾ ವಿಚಾರ ತಿಳಿಸುವಂತೆ ಮಾಡಿದ ಕಾರಣ ಯಾವ ಉದ್ದೇಶವಿತ್ತೋ ಅದು ಗುರಿ ಮುಟ್ಟಿದೆ. ಸಾರ್ಥಕ ಆಗಿದೆ.ಸೋಲು ಗೆಲುವಿನ ಪ್ರಶ್ನೆ ನಾನು ಹೇಳುವುದಿಲ್ಲ. ಸೋತರೂ ಗೆದ್ದ ಹಾಗೆ ಇರುವ ವ್ಯವಸ್ಥೆಗಳು ಎಲ್ಲಾ ರೀತಿಯಲ್ಲಿ ಆದ ಕಾರಣ ಮಾಧ್ಯಮದ ಪಾತ್ರ ಮುಖ್ಯವಾಗಿದೆ. ಇವತ್ತು ಅರುಣನ ವ್ಯಕ್ತಿತ್ವ ಮೇಲ್ಮಟ್ಟಕ್ಕೆ ಹೋಗಿದೆ.ಇದೆಲ್ಲ ಭಗವಂತನ ಇಚ್ಚೆ ಎಂದವರು ಹೇಳಿದರು.


ನಮ್ಮ ಭಾವನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಮಾಧ್ಯಮದಿಂದಾಯಿತು: ಪುತ್ತಿಲ ಪರಿವಾರದ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಮಾತನಾಡಿ ನಮಗೆ ಇವತ್ತು ಶತದಿನದ ಸಂಭ್ರಮ.ಒಂದು ತಂಡ ನಿರಂತರವಾಗಿ ಪುತ್ತಿಲ ಪರಿವಾರದಲ್ಲಿ ನೂರು ದಿನಗಳನ್ನು ಪೂರೈಸಿದೆ.ಇದರ ಜೊತೆಗೆ ನಮ್ಮ ಭಾವನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸವನ್ನು ಮಾಧ್ಯಮದ ಮೂಲಕ ಮಾಡಲು ಆಗಿದೆ.ಇಲ್ಲವಾದರೆ ಪುತ್ತೂರು ವಿಧಾನಸಭಾ ಕ್ಷೇತ್ರದ ೬೫ ಸಾವಿರ ಮತದಾರರನ್ನು ತಲುಪುವುದು ನಮ್ಮಿಂದ ಅಸಾಧ್ಯವಾದ ವಿಚಾರವಾಗಿತ್ತು.ಮಾಧ್ಯಮದವರ ಸಹಕಾರದಿಂದ ಪುತ್ತೂರು ಕ್ಷೇತ್ರ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಾಮ ಬೀರಿದೆ.ಮುಂದಿನ ದಿನವೂ ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ನೀವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು.ನಾವು ದಾರಿ ತಪ್ಪುವ ಸನ್ನಿವೇಶ ಎಲ್ಲಿಯಾದರೂ ಇದ್ದರೆ ಮೊದಲೇ ನಮಗೆ ಎಚ್ಚರಿಕೆ ಸೂಚನೆ ನೀಡಬೇಕೆಂದು ವಿನಂತಿಸಿದರು.ಪುತ್ತಿಲ ಪರಿವಾರದ ತಾಲೂಕು ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಭೀಮ್ ಭಟ್, ಶ್ರೀಕಾಂತ್, ಸದಾಶಿವ ಶೆಟ್ಟಿ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.


ತುರ್ತು ಕಾರ್ಯದ ನಿಮಿತ್ತ ತೆರಳಿದ ಪುತ್ತಿಲ: ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತುರ್ತು ಕರೆಯ ನಿಮಿತ್ತ ತುರ್ತಾಗಿ ಸಭೆಯಿಂದ ತೆರಳಿದ ಅವರು ಸಭೆ ಮುಗಿದು ಮಾಧ್ಯಮದವರು ಭೋಜನ ಮಾಡುತ್ತಿದ್ದ ವೇಳೆಗೆ ಬಂದು ಸಹ ಭೋಜನ ಸ್ವೀಕರಿಸಿದರು.

ಆ.20ಕ್ಕೆ ಪುತ್ತಿಲ ಪರಿವಾರ ಸಮಾಗಮ: ಆ.20ರಂದು ಮಧ್ಯಾಹ್ನ ಪುತ್ತೂರುನಲ್ಲಿ ಪುತ್ತಿಲ ಪರಿವಾರದ ಸಮಾಗಮ ನಡೆಯಲಿದೆ.ಪುತ್ತೂರು ತಾಲೂಕಿನ ಎಲ್ಲಾ ಪರಿವಾರದ ಪದಾಧಿಕಾರಿಗಳು, ಗ್ರಾಮ ಸಮಿತಿ ಗೌರವ ಸಲಹೆಗಾರರು, ಅಧ್ಯಕ್ಷರು, ಕಾರ್ಯದರ್ಶಿಗಳು, 220 ಬೂತ್ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಸನ್ನ ಕುಮಾರ್ ಮಾರ್ತ ಹೇಳಿದರು.

LEAVE A REPLY

Please enter your comment!
Please enter your name here