ಹ್ಯಾಕರ್‌ ಗಳ ಸುಳಿಗೆ ಸಿಲುಕಿದ ಕಡಬದ ಚಂದ್ರಶೇಖರ್‌ – ಕಳೆದ 8 ತಿಂಗಳಿನಿಂದ ಸೌದಿ ಜೈಲಲ್ಲಿ- ಪುತ್ರನ ಬಿಡುಗಡೆಗಾಗಿ ಕಣ್ಣೀರಿಡುತ್ತಿರುವ ಅಮ್ಮ

0

ಪುತ್ತೂರು: ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ ದ.ಕ ಜಿಲ್ಲೆಯ ಕಡಬ ತಾಲೂಕಿನ ವ್ಯಕ್ತಿಯೊಬ್ಬರು ಹ್ಯಾಕರ್‌ ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೊಳಗಾಗಿ ಸೌದಿ ಅರೇಬಿಯಾದ ರಿಯಾದ್‌ ನಲ್ಲಿ ಬಂಭನಕ್ಕೊಳಗಾಗಿದ್ದು, ಕುಟುಂಬ ಸದಸ್ಯರು ಅವರ ಬಿಡುಗಡೆಗಾಗಿ ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ. ಘಟನೆ ಕುರಿತಂತೆ ಕುಟುಂಬದ ಪರ ನಿಕಟವರ್ತಿಯಾದ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ್‌ ಗೌಡ ಮತ್ತು ಮಂಗಳೂರಿನ ಎನ್‌ ಇಸಿಎಫ್‌ ಕಾರ್ಯದರ್ಶಿ ಶಶಿಧರ್‌ ಶೆಟ್ಟಿ ಅ.17ರಂದು ಮಂಗಳೂರಿನಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಚಂದ್ರಶೇಖರ್‌ ಪದೋನ್ನತಿ ಹೊಂದಿ 2022ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅಲ್ಪಾನರ್‌ ಸಿರಮಿಕ್ಸ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಚಂದ್ರಶೇಖರ್ ಕಳೆದ ನವೆಂಬರ್‌ ನಲ್ಲಿ ರಿಯಾದ್‌ ನ ಅಂಗಡಿಯೊಂದರಲ್ಲಿ ಸಿಮ್‌ ಖರೀದಿಸಿದ್ದರು. ಈ ವೇಳೆ ಸಿಮ್‌ ಪಡೆಯಲು ಅರ್ಜಿಯೊಂದಕ್ಕೆ 2 ಬಾರಿ ಹೆಬ್ಬೆಟ್ಟು ನೀಡಿದ್ದರು. ಇದಾದ ವಾರದ ಬಳಿಕ ಅವರ ಮೊಬೈಲ್‌ ಗೆ ಅರೆಬಿಕ್‌ ಭಾಷೆಯಲ್ಲಿ ಸಂದೇಶವೊಂದು ಬಂದಿದ್ದು, ಅದನ್ನು ತೆರೆದು ನೋಡಿದ್ದರು. ಮತ್ತೆರಡು ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ ಬಗ್ಗೆ ಮಾಹಿತೆ ಕೇಳಿ OTP ಸಂಖ್ಯೆ ತಿಳಿಸುವಂತೆ ಸೂಚಿಸಿದ್ದು, OTP ಸಂಖ್ಯೆಯನ್ನೂ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಚಂದ್ರಶೇಖರ್‌ ನನ್ನು ಬಂಧಿಸಿದ್ದರು.

ಚಂದ್ರಶೇಖರ್‌ ಗೆ ತಿಳಿಯದಂತೆ ಸ್ಥಳೀಯ ಬ್ಯಾಂಕೊಂದರಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆದ ಹ್ಯಾಕರ್‌ ಗಳು ಮಹಿಳೆಯೊಬ್ಬರ ಖಾತೆಯಿಂದ ಹ್ಯಾಕ್‌ ಮಾಡಿ 22 ಸಾವಿರ ರಿಯಾಲ್‌ ಹಣವನ್ನು ಚಂದ್ರಶೇಖರ್‌ ಖಾತೆಗೆ ಜಮಾ ಮಾಡಿ ಕೂಡಲೇ ಬೇರೋಂದು ದೇಶದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಹಣ ಕಳೆದು ಕೊಂಡ ಮಹಿಳೆ ಚಂದ್ರಶೇಖರ್‌ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಚಂದ್ರಶೇಖರ್‌ ನನ್ನು ಬಂಧಿಸಿದ್ದಾರೆ. ಸ್ನೇಹಿತರ ಮೂಲಕ ಈ ವಿಷಯ ಮನೆ ಮಂದಿಗೆ ತಲುಪಿದೆ. ಕಳೆದ ಜನವರಿಯಲ್ಲಿ ಚಂದ್ರಶೇಖರ್‌ ಮದುವೆ ನಿಶ್ಚಿತಾರ್ಥ ನಡೆದಿದ್ದು, ಮದುವೆ ದಿನಾಂಕವೂ ಅಂತಿಮವಾಗಿದ್ದು, ಮದುವೆ ಸಿದ್ದತೆಯಲ್ಲಿರುವಾಗಲೇ ಈ ಬಂಧನ ನಡೆದಿದೆ. ಹ್ಯಾಕರ್‌ ಗಳಿಂದಾಗಿ ಚಂದ್ರಶೇಖರ್‌ ಗೆ ಅನ್ಯಾಯವಾಗಿದ್ದು, ಯಾವುದೇ ತಪ್ಪು ಮಾಡದೇ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 8 ತಿಂಗಳಿನಿಂದ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ. ಶ್ರೀಧರ್‌ ಗೌಡ ಮತ್ತವರ ಸ್ನೇಹಿತರು 10 ಲಕ್ಷ ರೂ. ಸಂಗ್ರಹಿಸಿ ಸೌದಿ ಅರೇಬಿಯಾದ ವಕೀಲರಿಗೆ ನೀಡಿದ್ದರೂ ಬಿಡುಗಡೆ ಸಾಧ್ಯವಾಗಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ನಾಗರೀಕರು, ಕೇಂದ್ರ ಸರಕಾರಕ್ಕೆ ಒತ್ತಡ ಹಾಕುವಂತೆ ಶ್ರೀಧರ್‌ ಗೌಡ ಮತ್ತು ಶಶಿಧರ್‌ ಶೆಟ್ಟಿ ಪತ್ರಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here