ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ಸತತ 4ನೇ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ

0

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಜಿಲ್ಲೆಗಳಿಗೆ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ದ.ಕ ಸಂಘದ ಸಾಧನೆಗೆ ಸತತ 4 ನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ಅಗಸ್ಟ್ 19 ರಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.


ಸುಧೀರ್ಘ 65 ವರ್ಷಗಳ ಇತಿಹಾಸ ಹೊಂದಿರುವ ಗ್ರಾಮೀಣ ಗುಡಿ ಕೈಗಾರಿಕೆಯಾದ ಕುಂಬಾರಿಕೆಯ ಅಭಿವೃದ್ದಿಗಾಗಿ ಸಹಕಾರಿ ಕ್ಷೇತ್ರದಲ್ಲಿ ತನ್ನ ಕಾರ್ಯ ಯೋಜನೆಯನ್ನು ರೂಪಿಸಿ ಬೆಳೆಸುತ್ತಿರುವ ಸಹಕಾರ ಸಂಘವು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 14 ಶಾಖೆಗಳನ್ನು ಹೊಂದಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಕುಂಬಾರಿಕಾ ಉತ್ಪಾದನಾ ತರಬೇತಿ ಕೇಂದ್ರವನ್ನು ಹೊಂದಿದ್ದು, ಈ ಭಾಗದ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸುತ್ತಿದೆ. ಸಹಕಾರ ಸಂಘವು ಎಲ್ಲ ವರ್ಗದ ಸದಸ್ಯರಿಗೆ ನೆರವನ್ನು ನೀಡುತ್ತಿದ್ದು 5055 ಎ ದರ್ಜೆ ಸದಸ್ಯರು 28837 ಡಿ ದರ್ಜೆ ಸದಸ್ಯ ಬಲವನ್ನು ಹೊಂದಿದ್ದು 2022-23 ನೇ ಸಾಲಿನಲ್ಲಿ ರೂ. 348.64 ಕೋಟಿ ವ್ಯವಹಾರವನ್ನು ದಾಖಲಿಸಿ ರೂ.1.55 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಮಾಣಿ ಶಾಖೆಗೆ ರೂ.1.40 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ರಚಿಸಲಾಗಿದೆ. ರೂ. 75.46 ಕೋಟಿ ಠೇವಣಿ, 62.46 ಕೋಟಿ ಹೊರಬಾಕಿ ಸಾಲ ಇರುತ್ತದೆ. ಲೆಕ್ಕ ಪರಿಶೋಧನೆಯಲ್ಲಿ ನಿರಂತರವಾಗಿ ಎ ದರ್ಜೆಯನ್ನು ಕಾಯ್ದುಕೊಂಡಿರುತ್ತದೆ. ಸಹಕಾರ ಸಂಘದ ಹೆಚ್ಚಿನ ಶಾಖೆಗಳನ್ನು ಹವಾನಿಯಂತ್ರಣಗೊಳಿಸಿ ಸುಸಜ್ಜಿತ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲಾಗುತ್ತಿದೆ. ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡಲಾಗುತ್ತಿದ್ದು, ಸದಸ್ಯರ ಠೇವಣಿಗಳಿಗೆ ಆಕರ್ಷಕ ದರದ ಬಡ್ಡಿಯನ್ನು ನೀಡಲಾಗುತ್ತಿದೆ.
ಗ್ರಾಮೀಣ ಗುಡಿಕೈಗಾರಿಕೆಯ ಅಭಿವೃದ್ದಿಗಾಗಿ ಸಹಕಾರ ಸಂಘದ ಸಾಧನೆಯನ್ನು ಕೇಂದ್ರ ಸರಕಾರ ಪರಿಗಣಿಸಿ ದೆಹಲಿಯಲ್ಲಿ ನಡೆದ 77 ನೇ ವರ್ಷದ ಸ್ವಾತಂತ್ಯ ಮಹೋತ್ಸವ ಕಾರ್ಯಕ್ರಮಕ್ಕೆ ಸಹಕಾರ ಸಂಘದ ಅಧ್ಯಕ್ಷರನ್ನು ವಿಷೇಶ ಗೌರವ ಆಹ್ವಾನಿತರಾಗಿ ಭಾಗವಹಿಸಿರುತ್ತಾರೆ. ಅಲ್ಲದೆ ರಾಜ್ಯ ಸರಕಾರದಿಂದ 2021-22 ನೇ ಸಾಲಿನ ವಿಶೇಷ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಸಹಕಾರ ಸಂಘದ ಸಾಧನೆಯನ್ನು ಪರಿಗಣಿಸಿ ಪ್ರೋತ್ಸಾಹ ನೀಡುತ್ತಿರುವ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಿಗೆ ಹಾಗೊ ಆಡಳಿತ ಮಂಡಳಿಗೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಪರವಾಗಿ ಕೃತಜ್ಞತೆಗಳನ್ನು ಸಮರ್ಪಿಸುತ್ತದೆ ಎಂದು ಅಧ್ಯಕ್ಷರಾಗಿರುವ ವಕೀಲ ಭಾಸ್ಕರ ಎಂ ಪೆರುವಾಯಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here