ಪುತ್ತೂರು: ಕೊರೋನಾದ ಬಳಿಕ ನಿಂತು ಹೋಗಿದ್ದ ಕುಂಬ್ರ-ಪುತ್ತೂರು ಸರಕಾರಿ ಸಿಟಿ ಬಸ್ಸು ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷ ಕುಂಬ್ರ ವರ್ತಕರ ಸಂಘವು ಪುತ್ತೂರು ಡಿಫೋ ಮ್ಯಾನೇಜರ್‌ರವರಿಗೆ ಮನವಿಯೊಂದನ್ನು ಸಲ್ಲಿಸಿತ್ತು ಮನವಿಗೆ ಸ್ಪಂದನೆ ನೀಡಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕುಂಬ್ರಕ್ಕೆ ಸಿಟಿ ಬಸ್ಸು ವ್ಯವಸ್ಥೆ ಮಾಡಿದ್ದರು. ಕುಂಬ್ರಕ್ಕೆ ಬರುತ್ತಿದ್ದ ಸಿಟಿ ಬಸ್ಸು ಸಂಚಾರವನ್ನು ಜನರ ಬೇಡಿಕೆಗೆ ಅನುಗುಣವಾಗಿ ಕೌಡಿಚ್ಚಾರ್‌ಗೆ ವಿಸ್ತರಿಸಲಾಗಿತ್ತು. ಅದರಂತೆ ಒಂದಷ್ಟು ದಿನ ಪುತ್ತೂರಿನಿಂದ ಕೌಡಿಚ್ಚಾರ್ ತನಕ ಸಿಟಿ ಬಸ್ಸು ಓಡಾಟ ನಡೆಸಿತ್ತು. ಆ ಬಳಿಕ ಬಸ್ಸು ಸಂಚಾರ ನಿಲ್ಲಿಸಿತ್ತು. ಸಿಟಿ ಬಸ್ಸು ಇಲ್ಲದೆ ಕುಂಬ್ರ ಪರಿಸರ ಸೇರಿದಂತೆ ಕುಂಬ್ರದಿಂದ ಸಂಪ್ಯ ತನಕದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ಹೋಗಲು ಬಹಳಷ್ಟು ಕಷ್ಟವಾಗುತ್ತಿದ್ದು ಈ ನಿಟ್ಟಿನಲ್ಲಿ ಮತ್ತೆ ಸಿಟಿ ಬಸ್ಸು ಸಂಚಾರವನ್ನು ಆರಂಭಿಸಬೇಕು ಎಂದು ಕುಂಬ್ರ ವರ್ತಕರ ಸಂಘದ ವತಿಯಿಂದ ಡಿಫೋ ಅಧಿಕಾರಿಗಳಿಗೆ ಜು.5 ರಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಿಫೋ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು, ಕೋರೋನಾ ಹಿಂದೆ ಕುಂಬ್ರಕ್ಕೆ ಸಿಟಿ ಬಸ್ಸು ಬರುತ್ತಿತ್ತು ಆ ಬಳಿಕ ಬಸ್ಸು ಸಂಚಾರ ನಿಂತಿದೆ. ಇದರಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು.ಆ ಬಳಿಕ ಕಳೆದ ವರ್ಷ ನಾವು ವರ್ತಕರ ಸಂಘದ ವತಿಯಿಂದ ಮನವಿಯೊಂದನ್ನು ಕೊಟ್ಟು ಬಸ್ಸು ಬರುವಂತೆ ವಿನಂತಿಸಿಕೊಂಡಿದ್ದೆವು ಅದಕ್ಕೆ ಸ್ಪಂದನೆ ನೀಡಿದ ಕೆಎಸ್‌ಆರ್‌ಟಿಸಿ ಬಸ್ಸು ಸಂಚಾರವನ್ನು ಆರಂಭಿಸಿತ್ತು. ಇದೀಗ ಸಿಟಿ ಬಸ್ಸು ಇಲ್ಲದೆ ಕುಂಬ್ರ, ಕೊಲತ್ತಡ್ಕ, ಪರ್ಪುಂಜ, ಸಂಟ್ಯಾರು, ಸಂಪ್ಯ ಈ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಬಸ್ಸು ಸಂಚಾರ ಆರಂಭಿಸುವಂತೆ ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿ ವ್ಯವಸ್ಥೆ ಮಾಡಿಕೊಡುವಂತೆ ಭರವಸೆ ನೀಡಿದ್ದಾರೆ. ತಂಡದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭವ್ಯ ರೈ ಉಪಸ್ಥಿತರಿದ್ದರು.
‘ ಈ ಹಿಂದೆ ಕುಂಬ್ರಕ್ಕೆ ಬರುತ್ತಿದ್ದ ಸಿಟಿ ಬಸ್ಸು ಮತ್ತೆ ಎಂದಿನಂತೆ ಕುಂಬ್ರಕ್ಕೆ ಬೆಳಗ್ಗೆ 8 ಗಂಟೆಗೆ ಬಂದು ತಿರುಗಿ ಹೋಗುವಂತೆ ಆದರೆ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಪ್ರಸ್ತುತ ಈ ಭಾಗದಿಂದ ತೆರಳುವ ಎಲ್ಲಾ ಬಸ್ಸುಗಳು ರಷ್ ಇರುವುದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಡಿಫೋ ಅಧಿಕಾರಿಗಳು ಗಮನ ಹರಿಸಿ ಸಹಕರಿಸಬೇಕಾಗಿದೆ.’
ಶ್ಯಾಮ್‌ಸುಂದರ ರೈ ಕೊಪ್ಪಳ, ಸ್ಥಾಪಕ ಅಧ್ಯಕ್ಷರು, ವರ್ತಕರ ಸಂಘ ಕುಂಬ್ರ