ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಿಂದ ಜನೋಪಯೋಗಿ ಕಾರ್ಯ – ಕಡಮಜಲು ಸುಭಾಸ್ ರೈ
ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು, ಕೆದಂಬಾಡಿ ಗ್ರಾಮ ಸಮಿತಿ ಮತ್ತು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸನ್ಯಾಸಿಗುಡ್ಡೆ ಇದರ ಆಶ್ರಯದಲ್ಲಿ ಸನ್ಯಾಸಿಗುಡ್ಡೆ ಹಾಲು ಸೊಸೈಟಿಯ ವಠಾರದಲ್ಲಿ ಜಾನುವಾರುಗಳ ಜಂತುಹುಳು ನಿವಾರಣ ಶಿಬಿರ ಮತ್ತು ವನಮಹೋತ್ಸವ ಕಾರ್ಯಕ್ರಮ ಆ. 16 ರಂದು ಜರಗಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯ ಕಡಮಜಲು ಸುಭಾಷ್ ರೈ ಶಿಬಿರ ಉದ್ಘಾಟಿಸಿ ‘ವಿಜಯ ಪ್ರತಿಷ್ಠಾನವು ಬ್ಯಾಂಕ್ ಆಫ್ ಬರೋಡದಿಂದ ಪ್ರವರ್ತಿತವಾದ ಸಂಸ್ಥೆ. ಇದರ ಉದ್ದೇಶ ಕೃಷಿ, ಸ್ವ ಉದ್ಯೋಗ, ಶಿಕ್ಷಣ, ಪರಿಸರ ಮತ್ತು ಗ್ರಾಮೀಣ ಆರೋಗ್ಯದ ಬಗ್ಗೆ ಹೊಸ ತಂತ್ರಜ್ಞಾನ ಮತ್ತು ಹೊಸ ಮಾಹಿತಿಯನ್ನು ಜನರಿಗೆ ನೀಡಿ ಗ್ರಾಮೀಣಾಭಿವೃದ್ಧಿಗೆ ಸಹಕರಿಸುವುದು ಮತ್ತು ಇದರ ಸಂಪೂರ್ಣ ವೆಚ್ಚವನ್ನು ಪ್ರತಿಷ್ಠಾನವು ಭರಿಸುತ್ತದೆ’ ಎಂದು ಹೇಳಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಅಮಿತ ಎ. ರೈ ಮಾತನಾಡಿ ‘ಕಾಲ ಕಾಲಕ್ಕೆ ಜಾನುವಾರುಗಳಿಗೆ ಜಂತುಹುಳ ನಿವಾರಣಾ ಔಷಧಿಯನ್ನು ನೀಡುವುದರಿಂದ ಜಾನುವಾರುಗಳು ನಿಯಮಿತವಾಗಿ ಗರ್ಭಧಾರಣೆಯನ್ನು ಧರಿಸಲು ಅನುಕೂಲವಾಗುವುದು ಮತ್ತು ಜಾನುವಾರುಗಳಲ್ಲಿ ಬಂಜೆತನವನ್ನು ತಡೆಗಟ್ಟಬಹುದು ಮತ್ತು ಜಾನುವಾರುಗಳು ಆರೋಗ್ಯವಾಗಿರಲು ಸಹಕರಿಸುವುದು’ ಎಂದರು. ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವೀಣಾ ಆರ್. ರೈ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಆ ನಂತರ ಸಂಘದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಹಿರಿಯ ಕೃಷಿಕ ಕರುಣಾಕರ ರೈ ಅತ್ರೇಜಾಲು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಅರಣ್ಯ ಸಸಿ ಹಾಗೂ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಕುಮಾರ ರೈ ಕೋರಂಗ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣಕುಮಾರ್ ಇದ್ಯಪೆ ವಂದಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಚೌಟ ನಿರೂಪಿಸಿದರು. ಪ್ರತಿಷ್ಠಾನದ ಸದಸ್ಯರಾದ ರಾಜೀವ ರೈ ಕೋರಂಗ, ದಿನಕರ ರೈ ಮಾನಿಪ್ಪಾಡಿ, ಬಾಬು ಕೋರಂಗ, ವಸಂತ ಮಠಂದೂರು, ಸದಾಶಿವ ರೈ ಪಯಂದೂರು, ನೇಮಣ್ಣ ಗೌಡ, ಸುಮಿತ್ ಕುಮಾರ್ ಪಟ್ಲಮೂಲೆ, ಯಶೋಧರ ಚೌಟ, ಶಾರದ ಕೋಡಿಯಡ್ಕ, ಪುಷ್ಪಾವತಿ ಕೋಡಿಯಡ್ಕ, ಪುಷ್ಪಾವತಿ ಇದ್ಯಪೆ ಉಪಸ್ಥಿತರಿದ್ದರು.