ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಫೌಝಿಯಾ ಹೆಸರು ಮುಂಚೂಣಿಯಲ್ಲಿ

0

ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀರಾಂ ಪಕ್ಕಳ; ರಾಮ ಮೇನಾಲ ಹೆಸರು ರೇಸ್‌ನಲ್ಲಿ
ಬಿಜೆಪಿ, ಪುತ್ತಿಲ ಪರಿವಾರದಿಂದಲೂ ಸ್ಪರ್ಧೆಗೆ ಸಿದ್ದತೆ..!

@ಯೂಸುಫ್ ರೆಂಜಲಾಡಿ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದೆ. ಆ.21ರಂದು ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದು ಸದ್ಯದ ಪ್ರಶ್ನೆ. ನೆ.ಮುಡ್ನೂರು ಗ್ರಾ.ಪಂನಲ್ಲಿ ಪ್ರಸ್ತುತ ರಮೇಶ್ ರೈ ಸಾಂತ್ಯ ಅಧ್ಯಕ್ಷರಾಗಿಯೂ, ಫೌಝಿಯಾ ಇಬ್ರಾಹಿಂ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಅಧ್ಯಕ್ಷ ಕುರ್ಚಿ ಯಾರಿಗೆ..?
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಬಂದ ಕಾರಣ ಕೆಲವರ ಹೆಸರು ಕೇಳಿ ಬರುತ್ತಿದೆ. ನೆ.ಮುಡ್ನೂರು ಗ್ರಾ.ಪಂನಲ್ಲಿ ಸದ್ಯ ಕಾಂಗ್ರೆಸ್ ಬೆಂಬಲಿತರು ಬಹುಮತ ಹೊಂದಿದ್ದು ಒಟ್ಟು ಇರುವ 22 ಸದಸ್ಯರ ಪೈಕಿ 12 ಸದಸ್ಯರು ಕಾಂಗ್ರೆಸ್ ಬೆಂಬಲಿತರು. 8 ಸದಸ್ಯರು ಬಿಜೆಪಿ ಬೆಂಬಲಿತರು ಹಾಗೂ ಇಬ್ಬರು ಸದಸ್ಯರು ಎಸ್‌ಡಿಪಿಐ ಬೆಂಬಲಿತರು. ಹಾಗಾಗಿ ಅಧ್ಯಕ್ಷ ಗದ್ದುಗೆ ಏನಿದ್ದರೂ ಅದು ಕಾಂಗ್ರೆಸ್ ಬೆಂಬಲಿತರಿಗೆ ಎನ್ನುವುದು ಬಹುತೇಕ ಖಚಿತ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷೆ ಫೌಝಿಯಾ ಇಬ್ರಾಹಿಂ ಹೆಸರು ಮುಂಚೂಣಿಯಲ್ಲಿದ್ದರೆ ಸದಸ್ಯರಾರ ಇಂದಿರಾ ಮತ್ತು ಲಲಿತಾ ಅವರ ಹೆಸರುಗಳೂ ಕೇಳಿ ಬಂದಿದೆ.

ಫೌಝಿಯಾ ಹೆಸರು ಮುಂಚೂಣಿಯಲ್ಲಿ:
ನೆ.ಮುಡ್ನೂರು ಗ್ರಾ.ಪಂನ ಹಾಲಿ ಉಪಾಧ್ಯಕ್ಷರಾಗಿರುವ ಫೌಝಿಯಾ ಇಬ್ರಾಹಿಂ ಅವರು ಮಾತ್ರ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಅನುಭವ ಮತ್ತು ನಾಯಕತ್ವ ಗುಣದ ಆಧಾರದಲ್ಲಿ ಫೌಝಿಯಾ ಇಬ್ರಾಹಿಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಸದಸ್ಯರು ಒಲವು ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಅಲ್ಲದೇ ಅನೇಕ ಸಂದಿಗ್ದ ಪರಿಸ್ಥಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದ ಫೌಝಿಯಾ ಇಬ್ರಾಹಿಂ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಕೂಡಾ ಒಲವು ಹೊಂದಿದೆ ಎಂಬ ಮಾತುಗಳು ಕೇಳಿ ಬಂದಿದೆ.


ಒಂದು ಬಾರಿ ತಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಫೌಝಿಯಾ ಇಬ್ರಾಹಿಂ ಅವರು ಮೂರು ಬಾರಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಗೊಂಡಿದ್ದು ಒಂದು ಬಾರಿ ಅಧ್ಯಕ್ಷರಾಗಿ ಮತ್ತು ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಅಪಾರ ಅನುಭವ ಮತ್ತು ನಾಯಕತ್ವ ಗುಣ ಹೊಂದಿರುವ ಫೌಝಿಯಾ ಇಬ್ರಾಹಿಂ ಈ ಬಾರಿಯೂ ನೆ.ಮುಡ್ನೂರು ಗ್ರಾ.ಪಂನ ಅಧ್ಯಕ್ಷ ಕುರ್ಚಿ ಏರಲಿದ್ದಾರೆ ಎನ್ನುವ ಮಾತುಗಳು ಪ್ರಬಲವಾಗಿ ಕೇಳಿ ಬಂದಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರ ಹೆಸರು ರೇಸ್‌ನಲ್ಲಿ:
ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರ ಹೆಸರು ಕೇಳಿ ಬರುತ್ತಿದೆ. ಹಾಲಿ ಸದಸ್ಯರುಗಳಾದ ಶ್ರೀರಾಂ ಪಕ್ಕಳ ಮತ್ತು ರಾಮ ಮೇನಾಲ ಅವರ ಹೆಸರು ಮುನ್ನಲೆಗೆ ಬಂದಿದೆ. ಇಬ್ಬರೂ ಕೂಡಾ ಗ್ರಾ.ಪಂ ಸಭೆಗಳಲ್ಲಿ ವಿವಿಧ ವಿಚಾರಗಳನ್ನು ಪ್ರಬಲವಾಗಿ ಮಂಡಿಸುವವರಾಗಿದ್ದು ಕಾಂಗ್ರೆಸ್ ಪಕ್ಷದ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಕೂಡಾ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ತಿಳಿಸಿದ್ದಾರೆ.

ಬಿಜೆಪಿ, ಪುತ್ತಿಲ ಪರಿವಾರದಿಂದಲೂ ಸಿದ್ದತೆ:
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಸದಸ್ಯರೂ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾ ಅಥವಾ ಪ್ರಫುಲ್ಲ ರೈಯವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತಿದ್ದು ಯಾರನ್ನು ಅಂತಿಮ ಮಾಡುತ್ತಾರೆ ಎನ್ನುವುದು ಖಚಿತಗೊಂಡಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರದೀಪ್ ಕುಮಾರ್ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಅತ್ತ ಪುತ್ತಿಲ ಪರಿವಾದವರೂ ಬ್ಯಾಟ್ ಬೀಸಲು ಸನ್ನದ್ದರಾಗಿದ್ದಾರೆನ್ನುವ ಸುದ್ದಿ ಕೂಡಾ ಇದೆ. ಪುತ್ತಿಲ ಪರಿವಾರದಿಂದ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಅವರು ಸ್ಪರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪುತ್ತಿಲ ಪರಿವಾರದ ಮುಖಂಡ ಚಂದ್ರಹಾಸ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾಹಿತಿ ಇದೆ.
ಒಟ್ಟಿನಲ್ಲಿ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಕದನ ಕುತೂಹಲ ಮೂಡಿಸಿದ್ದು ಆ.21ರಂದು ಸ್ಪಷ್ಟ ಉತ್ತರ ದೊರೆಯಲಿದೆ.


ನೆ.ಮುಡ್ನೂರು ಗ್ರಾ.ಪಂ ಸದಸ್ಯಳಾಗಿ ಆಯ್ಕೆಯಾದ ಬಳಿಕ ಇಲ್ಲಿಯವರೆಗೆ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಗ್ರಾ.ಪಂಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲು ಬಂದಿದ್ದು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೌದು. ಸದಸ್ಯರ ಸಹಕಾರ ಅಗತ್ಯ. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ನಾನು ಬದ್ದ.
-ಫೌಝಿಯಾ ಇಬ್ರಾಹಿಂ, ಕಾಂಗ್ರೆಸ್ ಬೆಂಬಲಿತ ಸದಸ್ಯರು

ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಬಂದ ಕಾರಣ ಅವಕಾಶ ಇದೆ. ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದರೆ ನಾನು ಸ್ವೀಕರಿಸುವೆ. ಯಾವುದಕ್ಕೂ ನಮ್ಮ ಪಕ್ಷದ ತೀರ್ಮಾನಕ್ಕೆ ನಾನು ಬದ್ದ. ಪಕ್ಷ ಬೇರೆಯವರನ್ನು ಸೂಚಿಸಿದರೆ ಅದಕ್ಕೂ ನಾನು ಬದ್ದ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲಾ ಅನ್ಯೋನ್ಯತೆಯಲ್ಲಿದ್ದೇವೆ. ನನಗೆ ಅಧಿಕಾರ ಮುಖ್ಯವಲ್ಲ, ಊರು ಅಭಿವೃದ್ಧಿ ಆಗಬೇಕೆನ್ನುವುದು ಮುಖ್ಯ.
-ಶ್ರೀರಾಂ ಪಕ್ಕಳ, ಕಾಂಗ್ರೆಸ್ ಬೆಂಬಲಿತ ಸದಸ್ಯರು

ನಾನು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಹೌದು. ನಾಲ್ಕು ಬಾರಿ ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ, ಈ ಬಾರಿ ಸಾಮಾನ್ಯ ಸ್ಥಾನಕ್ಕೆ ಮೀಸಲು ಬಂದ ಕಾರಣ ನನಗೆ ಅವಕಾಶ ಇದೆ, ಹಾಗಾಗಿ ಎಲ್ಲರು ಒಮ್ಮತದಿಂದ ನನ್ನನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆನ್ನುವ ನಿರೀಕ್ಷೆ ಇದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ.
-ರಾಮ ಮೇನಾಲ, ಕಾಂಗ್ರೆಸ್ ಬೆಂಬಲಿತ ಸದಸ್ಯರು

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಶಶಿಕಲಾ ಅಥವಾ ಪ್ರಫುಲ್ಲ ರೈಯವರ ಹೆಸರು ಇದ್ದು ಅದರಲ್ಲಿ ಒಬ್ಬರು ಸ್ಪರ್ಧೆ ಮಾಡಲಿದ್ದಾರೆ. ಸ್ಪರ್ಧೆ ಮಾಡುವವರು ಯಾರೆಂದು ಕೊನೆಯ ಕ್ಷಣದಲ್ಲಿ ಗೊತ್ತಾಗಲಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದು ಖಚಿತ.
-ಪ್ರದೀಪ್ ಕುಮಾರ್, ಬಿಜೆಪಿ ಬೆಂಬಲಿತ ಸದಸ್ಯ

ಪುತ್ತಿಲ ಪರಿವಾರದಿಂದ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಅವರು ಸ್ಪರ್ಧೆ ಮಾಡಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುತ್ತೇನೆ. ನಮಗೆ ಸೋಲು-ಗೆಲುವಿಗಿಂತಲೂ ಹೆಚ್ಚಾಗಿ ನಮ್ಮ ಅಸ್ತಿತ್ವ ಏನೆಂದು ತೋರ್ಪಡಿಸಬೇಕು. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ.
-ಚಂದ್ರಹಾಸ, ಪುತ್ತಿಲ ಪರಿವಾರದ ಸದಸ್ಯ

LEAVE A REPLY

Please enter your comment!
Please enter your name here