ಸವಣೂರು ಗ್ರಾಮ ಸಭೆ – ಸವಣೂರಿನ ಕೆನರಾ ಬ್ಯಾಂಕ್ ಸಮಸ್ಯೆ ಬಗೆಹರಿಯದಿದ್ದರೆ ಆ.25ರಂದು ಪ್ರತಿಭಟನೆ ಗ್ರಾಮಸ್ಥರ ನಿರ್ಧಾರ

0

ಸವಣೂರು: ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆನರಾ ಬ್ಯಾಂಕಿನಲ್ಲಿ ಗ್ರಾಹಕರಿಗೆ ಸರಿಯಾದ ಸೇವೆ ದೊರಕುತ್ತಿಲ್ಲ. ಈ ಕುರಿತಾಗಿ ಬ್ಯಾಂಕಿನ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಫಲಸಿಕ್ಕಿಲ್ಲ. ಇದರಿಂದಾಗಿ ಸಮಸ್ಯೆ ಬಗೆಹರಿಯದಿದ್ದರೆ ಆ.25ರಂದು ಬ್ಯಾಂಕಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸವಣೂರು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ನೀಡಿದ್ದಾರೆ.

ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ಅವರ ಅಧ್ಯಕ್ಷತೆಯಲ್ಲಿ ಪುಣ್ಚಪ್ಪಾಡಿ ನೇರೋಳ್ತಡ್ಕ ವಿನಾಯಕನಗರದ ಗೌರಿಸದನದಲ್ಲಿ ಆ.18ರಂದು ನಡೆಯಿತು. ನೋಡಲ್ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ಕಿರಣ್ ಭಾಗವಹಿಸಿದ್ದರು.
ಈ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ,ಇಲ್ಲಿನ ಬ್ಯಾಂಕಿನಲ್ಲಿ ಸುಮಾರು 16,೦೦೦ಕ್ಕೂ ಅಧಿಕ ಗ್ರಾಹಕರಿದ್ದಾರೆ.ನಿತ್ಯವೂ ಬ್ಯಾಂಕಿನಲ್ಲಿ ಗ್ರಾಹಕರ ಸಾಲು ಕಂಡು ಬರುತ್ತಿದೆ. ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಉಪಯೋಗವಾಗಿಲ್ಲ.ಕೂಡಲೇ ಸಮಸ್ಯೆ ಪರಿಹರಿಸಬೇಕು.ಇಲ್ಲದಿದ್ದಲ್ಲಿ ಆ.25ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೇರೆ ಬ್ಯಾಂಕ್ ತೆರೆಯಲು ಅವಕಾಶ ನೀಡಲಿ
ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಸವಣೂರಿನಲ್ಲಿ ಬೇರೆ ಬ್ಯಾಂಕ್ ತೆರೆಯಲು ಅವಕಾಶವನ್ನಾದರೂ ನೀಡಲಿ. ಬೇರೆ ಬ್ಯಾಂಕ್ ತೆರೆಯಲು ಅವಕಾಶವೂ ನೀಡುತ್ತಿಲ್ಲ, ಇದ್ದ ಬ್ಯಾಂಕಿನ ಅವ್ಯವಸ್ಥೆಯನ್ನೂ ಸರಿಪಡಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಾಲ್ತಾಡಿ ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ ಮಾತನಾಡಿ.,ಪಾಲ್ತಾಡಿ ಶಾಲೆಯ ಅಕ್ಷರದಾಸೋಹ ಕೊಠಡಿ ಕಳೆದ 4 ವರ್ಷಗಳಿಂದ ಸೋರುತ್ತಿದೆ. ಟರ್ಪಾಲ್ ಹಾಕಲಾಗಿದೆ. ಹಲವು ಬಾರಿ ಇಲಾಖೆಗೆ ಬರೆದುಕೊಳ್ಳಲಾಗಿದೆ.ಆದರೂ ಯಾವುದೇ ಪ್ರಯೋಜನವಾಗಿಲ್ಲ.ಅಲ್ಲದೇ ಶಾಲೆಯ ಸಮಸ್ಯೆ ಗಂಭೀರವಾಗಿದ್ದರೂ ಶಿಕ್ಷಣಾಧಿಕಾರಿ ಈವರೆಗೂ ಶಾಲೆಗೆ ಭೇಟಿ ನೀಡಿಲ್ಲ.ಅಧಿಕಾರಿಗಳಿಗೆ ಶಾಲೆಯ ಬಗ್ಗೆ ಯಾಕೆ ಅಸಡ್ಡೆ ಎಂದು ಪ್ರಶ್ನಿಸಿದರು.

ದಾನಿಗಳ ನೆರವಿನಿಂದ ಶಾಲೆಯಲ್ಲಿ ಹಲವು ಕಾರ್ಯಕ್ರಮ ,ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ. ಆದರೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಸರಿಯಲ್ಲ.ಪ್ರತೀ ಗ್ರಾಮ ಸಭೆಯಲ್ಲೂ ವಿಚಾರ ಪ್ರಸ್ತಾಪಿಸಲಾಗುತ್ತಿದ್ದರೂ,ಸಭೆಗೆ ಬರುವ ಇಲಾಖೆಯ ಪ್ರತಿನಿಧಿಗಳು ಭರವಸೆ ನೀಡುತ್ತಾರೆ. ಆದರೆ ಯಾವುದೇ ಪ್ರಗತಿಯಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಶಿಕ್ಷಣ ಸಂಯೋಜಕ ನವೀನ್ ಅವರು ಮಾತನಾಡಿ, ಮುಂದಿನ ವಾರದಲ್ಲಿ ಶಿಕ್ಷಣಾಧಿಕಾರಿಗಳು ಭೇಟಿ ನೀಡುವಂತೆ ಅವರ ಗಮನಕ್ಕೆ ತರಲಾಗುವುದು ಎಂದರು.
ಪ್ರತಿಕ್ರಿಯಿಸಿದ ಜಯರಾಮ ಗೌಡ ಅವರು, ಶಿಕ್ಷಣಾಧಿಕಾರಿಗಳು ಬಾರದಿದ್ದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದರು.

ಅಧಿಕಾರಿಗಳು ಸಭೆಗೆ ಬಾರದಿದ್ದರೆ ಗ್ರಾಮ ಸಭೆ ಯಾಕೆ?
ಗ್ರಾಮಸಭೆಗೆ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಬಾರದಿದ್ದರೆ ಸಭೆ ನಡೆಸುವುದು ಬೇಡ ಎಂದು ಗ್ರಾಮಸ್ಥರಾದ ಅಶ್ರಫ್ ಜನತಾ,ವಿದ್ಯಾಧರ ಗೌಡ ಪಾರ್ಲ ,ಸತೀಶ್ ಬಲ್ಯಾಯ,ರಾಜೇಂದ್ರ ಇಡ್ಯಾಡಿ, ಜಯರಾಂ, ಹಸೈನಾರ್ ಕಾಯರ್ಗ, ಮೊಹಮ್ಮದ್ ಬಾಬಾ ಹೇಳಿದರು. ಉತ್ತರಿಸಿದ ಅಭಿವೃದ್ದಿ ಅಧಿಕಾರಿ ಕಮಲ್ ರಾಜ್ ಅವರು, ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬರಲೇ ಬೇಕೆಂಬ ನಿಯಮ ಇಲ್ಲ. ಅವರ ಪ್ರತಿನಿಧಿಗಳು ಆಗಮಿಸಿ ಮಾಹಿತಿ ನೀಡಬಹುದು ಎಂದರು.

ಕುಮಾರಮಂಗಲ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಶಾಲಾಭಿವೃದ್ದಿ ಸಮಿತಿ ಸದಸ್ಯ ಜಯಪ್ರಕಾಶ್ ಹೇಳಿದರು.ಮೊಗರು ಶಾಲೆಯಲ್ಲೂ ಶಿಕ್ಷಕರ ಕೊರತೆ ಇದೆ ಎಂದು ಅಶ್ರಫ್ ಹೇಳಿದರು.
ವರ್ಗಾವಣೆಯಿಂದಾಗಿ ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು ಶೀಘ್ರವೇ ಅಗತ್ಯ ಶಿಕ್ಷಕರನ್ನು ನೇಮಿಸುವಂತೆ ಇಂದಿರಾ ಬಿ.ಕೆ.ಹೇಳಿದರು.
ಇದಕ್ಕೆ ಉತ್ತರಿಸಿದ ಬಿ.ಆರ್.ಸಿ.ನವೀನ್ ಅವರು ಆಗಸ್ಟ್ ಅಂತ್ಯದಲ್ಲಿ ಶಿಕ್ಷಕರ ನೇಮಕಾತಿಯಾಗುವ ಸಾಧ್ಯತೆ ಇದೆ.ಅಲ್ಲದೆ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಕುರಿತು ಇಲಾಖೆ ಆದೇಶ ನೀಡಿದೆ ಎಂದರು.

ಸವಣೂರಿನಲ್ಲಿ ರಿಕ್ಷಾ ನಿಲ್ದಾಣಕ್ಕೆ ಸಭೆಯಲ್ಲಿ ಆಗ್ರಹ:
ಸವಣೂರಿನಲ್ಲಿ ಆದಷ್ಟು ಬೇಗದಲ್ಲಿ ರಿಕ್ಷಾ ನಿಲ್ದಾಣ ನಿರ್ಮಾಣವಾಗ ಬೇಕಿದೆ. ಸ್ಥಗಿತಗೊಂಡ ಕೆಲಸ ಹಾಗೇ ಉಳಿದುಕೊಂಡಿದೆ ಎಂದು ರಿಕ್ಷಾ ಚಾಲಕರಾದ ದಿಲೀಪ್ ,ಹಸೈನಾರ್,ಮೊಹಮ್ಮದ್ ಬಾಬಾ ಸಭೆಯ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಗ್ರಾ.ಪಂ. ಲೆಕ್ಕಸಹಾಯಕ ಎ.ಮನ್ಮಥ ಅವರು,ರಿಕ್ಷಾ ನಿಲ್ದಾಣ ಕಾಮಗಾರಿ ಆರಂಭಿಸುವಾಗ ಸ್ಥಳೀಯ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಜಾಗದ ಸರ್ವೆ ಮಾಡಲು ಕಂದಾಯ ಇಲಾಖೆಗೆ ಬರೆದುಕೊಳ್ಳಲಾಗಿದೆ ಎಂದರು.

ಭರತ್ ರೈ ಸೂಡಿಮುಳ್ಳು ಮಾತನಾಡಿ, ನಡುಮನೆ ಮಕ್ಕಳ ಪಾರ್ಕ್ ಬಳಿ ರಸ್ತೆಯ ಅಂಚಿನಲ್ಲೇ ಬೋರ್ ವೆಲ್ ಕೊರೆಯಲಾಗಿದೆ.‌ ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದರು.
ಪ್ರತಿಕ್ರಿಯಿಸಿದ ಲೆಕ್ಕಸಹಾಯಕ ಎ.ಮನ್ಮಥ ಮಾತನಾಡಿ, ಅಂತರ್ಜಲ ಪರಿಶೋಧಕರು ನೀರು ಲಭ್ಯವಿರುವ ಗುರುತು ಮಾಡಿದ ಸ್ಥಳದಲ್ಲಿ ಬೋರ್ ವೆಲ್ ಕೊರೆಯಲಾಗಿದೆ ಎಂದರು.ಸಾರ್ವಜನಿಕ ಕುಡಿಯುವ ನೀರಿಗಾಗಿ ರಸ್ತೆ ಬದಿಯಲ್ಲೇ ಬೋರ್ ಕೊರೆಯುವ ಅನಿವರ್ಯತೆ ಸೃಷ್ಟಿಯಾಗಿದೆ.ರಸ್ತೆಯಿಂದ ದೂರ ಸ್ಥಳ ಗುರುತಿಸಿದರೆ ಖಾಸಗಿ ಜಾಗವೆಂಬ ಆಕ್ಷೇಪ ಬರುತ್ತದೆ ಎಂದರು. ಯಾರಿಗೂ ಸಮಸ್ಯೆಯಾಗದ ರೀತಿಯಲ್ಲಿ ಅಂಡರ್ ಗ್ರೌಂಡ್ನಲ್ಲಿ ಬೋರ್ ಹಾಗೂ ಪಂಪ್ ಹಾಕಲು ಕ್ರಮವಹಿಸುತ್ತೇವೆ ಎಂದರು.
ಪೆರಿಯಡ್ಕ ಅಂಗನವಾಡಿ ಕೇಂದ್ರದ ಕಟ್ಟಡ ತೀರಾ ಹಳೆಯದಾಗಿದ್ದು,ಹೊಸ ಕಟ್ಟಡ ಮಂಜೂರು ಮಾಡುವಂತೆ ಜಗದೀಶ್ ಇಡ್ಯಾಡಿ ಹೇಳಿದರು.
ಸವಣೂರು ಅಂಗನವಾಡಿ ಕೇಂದ್ರಕ್ಕೆ ಶೌಚಾಲಯದ ಅಗತ್ಯವಿದ್ದು,ಈ ಕುರಿತು ಕ್ರಮ ಕೈಗೊಳ್ಳುವಂತೆ ,ಸವಣೂರು ಶಾಲೆಯನ್ನು ಪಿಎಂ ಶ್ರೀ ಯೋಜನೆಗೆ ಸೇರ್ಪಡೆ ಮಾಡುವಂತೆ ಸತೀಶ್ ಬಲ್ಯಾಯ ಹೇಳಿದರು.

ಪಾಲ್ತಾಡಿ ಶಾಲೆಗೆ ಬರಲು ಮಕ್ಕಳಿಗೆ ಉಂಟಾಗುತ್ತಿರುವ ರಸ್ತೆ ಸಮಸ್ಯೆಯ ಕುರಿತು ಪೋಷಕರು ಗಮನಸೆಳೆದರು.

ವಿದ್ಯುತ್ ಕಂಬದಲ್ಲಿ ಸುತ್ತುವ ಬಳ್ಳಿ
ಮಳೆಗಾಲದಲ್ಲಿ ವಿದ್ಯುತ್ ಕಂಬಗಳಿಗೆ ಗೆಲ್ಲು, ಬಳ್ಳಿಗಳು ಸುತ್ತಿಕೊಳ್ಳುವುದರಿಂದ ವಿದ್ಯುತ್ ಸಮಸ್ಯೆ ತಲೆದೋರುತ್ತದೆ ,ಬಳ್ಳಿ ತೆರವು ಮಾಡಲು ಊರವರು ಸಹಕಾರ ನೀಡುತ್ತೇವೆ ಆದರೆ ಆ ಸಂದರ್ಭದಲ್ಲಿ ಲೈನ್ ಮ್ಯಾನ್ ಅವರನ್ನು ಸ್ಥಳಕ್ಕೆ ಕಳುಹಿಸಿಕೊಡಬೇಕು ಎಂದು ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ ಹೇಳಿದರು.

ಜಯರಾಮ ಗೌಡ ದೊಡ್ಡಮನೆ ಮಾತನಾಡಿ, ಪಾಲ್ತಾಡಿ ಶಾಲಾ ಬಳಿಯಲ್ಲಿರುವ ವಿದ್ಯುತ್ ಕಂಬಗಳಲ್ಲೂ ಬಳ್ಳಿ ಸುತ್ತುವರಿದಿದೆ. ಇದು ಅಪಾಯಕಾರಿಯಾಗಿದೆ. ಇದನ್ನೂ ತೆರವುಗೊಳಿಸಬೇಕು, ಇದಕ್ಕೆ ಊರವರು ಸಹಕಾರ ನೀಡುತ್ತೇವೆ ಎಂದರು.

ಸವಣೂರಿನ ಮಡಕೆಯಲ್ಲಿ ಮನೆ ಮೇಲೆ ಹೆಚ್.ಟಿ.ಲೈನ್ ಹಾದುಹೋಗಿದ್ದು, ಇದು ಅಪಾಯಕಾರಿಯಾಗಿದೆ ಎಂದು ಕೀರ್ತನ್‌ ಕೋಡಿಬೈಲು ಹೇಳಿದರು.
ಪಣೆಮಜಲು ಭಾಗದಲ್ಲಿ ವಿದ್ಯುತ್ ತಂತಿಗಳು ತೀರಾ ಹಳೆಯದಾಗಿದ್ದು ತಂತಿ ತುಂಡಾಗುವ ಅಪಾಯವಿದೆ ಎಂದು ರಾಜೇಂದ್ರ ಇಡ್ಯಾಡಿ ಹೇಳಿದರು.
ಪಾಲ್ತಾಡಿ ಭಾಗದಲ್ಲೂ ಸುಮಾರು 30 ವರ್ಷಗಳ ಹಳೆಯ ತಂತಿಗಳಿದ್ದು, ಅದನ್ನು ಬದಲಾಯಿಸಬೇಕು ಎಂದು ವಿದ್ಯಾಧರ ಗೌಡ ಪಾರ್ಲ ಹೇಳಿದರು.

ಇದಕ್ಕೆ ಉತ್ತರಿಸದ ಸವಣೂರು ಜೆ ಇ ರಾಜೇಶ್ ಅವರು ಈ ಕುರಿತು ಕ್ರಮವಹಿಸುವುದಾಗಿ ಹೇಳಿದರು.

ಸವಣೂರಿನ ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಆರಂಭಿಸುವಂತೆ ಜಗದೀಶ್ ಇಡ್ಯಾಡಿ ಹೇಳಿದರು.
ಉತ್ತರಿಸಿದ ಅಂಚೆ ಇಲಾಖೆಯ ಅಧಿಕಾರಿಗಳು ,ಸವಣೂರಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರ ತೆರೆಯುವುದು ಅಸಾಧ್ಯ. ತಿದ್ದುಪಡಿ ಶಿಬಿರ ನಡೆಸಬಹುದು ಎಂದು ಸ್ಪಷ್ಟನೆ ನೀಡಿದರು..

ಸಭೆಯಲ್ಲಿ ಕೊಳ್ತಿಗೆ ಆರೋಗ್ಯ ಕೇಂದ್ರದ ಡಾ.ಅಮಿತ್ ,ಉದ್ಯೋಗ ಖಾತರಿಯೋಜನೆಯ ಬಗ್ಗೆ ಭರತ್ ರಾಜ್ ಕೆ.,ಸಹಕಾರ ಇಲಾಖೆಯ ಪರವಾಗಿ ಸವಣೂರು ಸಿಎ ಬ್ಯಾಂಕ್ ಸಿಇಓ ಚಂದ್ರಶೇಖರ್ ಪಿ.,ಜಲಜೀವನ್ ಯೋಜನೆಯ ಈಶ್ವರ್,ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಸಾಮಾಜಿಕ ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮಸ್ಥರಾದ ಮಹೇಶ್ ಕೆ.ಸವಣೂರು, ಶ್ರೀಧರ್ ಗೌಡ ಅಂಗಡಿಹಿತ್ಲು,ಜಗದೀಶ್ ಗೌಡ ಪಾಲ್ತಾಡಿ ,ಚಂದ್ರಶೇಖರ್,ಸೇಸಮ್ಮ ,ಜಯಪ್ರಕಾಶ್ ,ಸಚಿನ್ ಭಂಡಾರಿ ,ಪ್ರಕಾಶ್ ಮೊದಲಾದವರು ವಿವಿಧ ವಿಚಾರಗಳ ಕುರಿತು ಪ್ರಸ್ತಾಪ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ, ನಿಕಟಪೂರ್ವ ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ, ನಿಕಟ ಪೂರ್ವ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಅಭಿವೃದ್ದಿ ಅಧಿಕಾರಿ ಕಮಲ್ ರಾಜ್ ಸದಸ್ಯರಾದ ಗಿರಿಶಂಕರ ಸುಲಾಯ,ಅಬ್ದುಲ್ ರಝಾಕ್,ಚೆನ್ನು ಮಾಂತೂರು,ಸತೀಶ್ ಅಂಗಡಿಮೂಲೆ,ರಫೀಕ್ ಎಂ.ಎ,ಬಾಬು ಎನ್, ತೀರ್ಥರಾಮ ಕೆಡೆಂಜಿ, ಭರತ್ ರೈ, ತಾರಾನಾಥ ಬೊಳಿಯಾಲ,ಚೇತನಾ ಪಾಲ್ತಾಡಿ, ಹರಿಕಲಾ ರೈ,ಇಂದಿರಾ ಬೇರಿಕೆ, ಸಬೀನಾ,ಚಂದ್ರಾವತಿ ಸುಣ್ಣಾಜೆ, ಯಶೋಧಾ ಉಪಸ್ಥಿತರಿದ್ದರು. ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ ಸ್ವಾಗತಿಸಿ, ಸಿಬ್ಬಂದಿ ಪ್ರಮೋದ್ ಕುಮಾರ್ ವಂದಿಸಿದರು. ಸಿಬ್ಬಂದಿಗಳಾದ ದಯಾನಂದ ಮಾಲೆತ್ತಾರು,ಜಯಾ ಕೆ.,ಜಯಶ್ರೀ ,ಶಾರದಾ,ಯತೀಶ್ ಕುಮಾರ್ ಸಹಕರಿಸಿದರು.

ಅಡುಗೆ ತಯಾರಿಸಿದ ಗ್ರಾ.ಪಂ.ಸದಸ್ಯರು
ಗ್ರಾಮ ಸಭೆಗೆ ಆಗಮಿಸಿದ ಗ್ರಾಮಸ್ಥರಿಗೆ,ಅಧಿಕಾರಿಗಳಿಗೆ ಸೇರಿದಂತೆ ಎಲ್ಲರಿಗೂ ಬೆಳಿಗ್ಗೆ ಚಹಾ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.ಗ್ರಾ.ಪಂ.ಸದಸ್ಯರು ಅಡುಗೆ ತಯಾರಿಸುವ ಕೆಲಸದಲ್ಲಿ ಪಾಲ್ಗೊಂಡು ಗಮನ ಸೆಳೆದರು.

LEAVE A REPLY

Please enter your comment!
Please enter your name here