ಶ್ರೀಜಿತ್ ಸಾವಿನ ಪ್ರಕರಣ – ವೈದ್ಯರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

0

ಪುತ್ತೂರು: ಇತ್ತೀಚಿಗೆ ಪುತ್ತೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ವೈದ್ಯರನ್ನು ತಕ್ಷಣ ಬಂಧಿಸಬೇಕು ಮತ್ತು ಸರಕಾರದ ನೊಂದ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ದ.ಕ.ದಲಿತ್ ಸೇವಾ ಸಮಿತಿಯಿಂದ ಪುತ್ತೂರು ಕಿಲ್ಲೇ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಆ.23ರಂದು ಪ್ರತಿಭಟನೆ ನಡೆಯಿತು.

ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ, 11 ದಿನಗಳ ಹಿಂದೆ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಹೊಟ್ಟೆನೋವೆಂದು ದಾಖಲಾದ ಸುಳ್ಯ ತಾಲೂಕಿನ ಶ್ರೀಜಿತ್ ಎಂಬ ಯುವಕನಿಗೆ ಸರ್ಜರಿ ಮಾಡಿದ ಸಮಯದಲ್ಲಿ ವೆಂಟಿಲೇಟರ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಸಮಯದಲ್ಲಿ ಶ್ರೀಜಿತ್ ಮೃತಪಟ್ಟಿದ್ದರು. ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಯುವಕನ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಬಡ ಯುವಕ ಎಂದು ಗೊತ್ತಿದ್ದರೂ ಚೇತನ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿ ಯುವಕನ ಸಾವಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯ ವಿರುದ್ಧ ಯುವಕನ ಚಿಕ್ಕಪ್ಪ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಮಾಡಬೇಕು ಮತ್ತು ಸರಿಯಾದ ಧಿಕ್ಕಿನಲ್ಲಿ ತನಿಖೆ ಮಾಡಬೇಕು. ಒಂದು ಕಡೆ ಆರೋಗ್ಯ ಇಲಾಖೆಯವರು ತನಿಖೆ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಈ ನಡುವೆ ನಾವು ಯುವಕನ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೇಳಿ ತಹಶೀಲ್ದಾರ್‌ಗೆ ಮನವಿ ಮಾಡಿದ್ದೇವೆ. ತಹಶೀಲ್ದಾರ್ ಅದನ್ನು ಸಹಾಯಕ ಆಯುಕ್ತರಿಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಆದಷ್ಟು ಬೇಗ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆ ಯುವಕನ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದರು.

ರಾಜ್ಯಮಟ್ಟದಲ್ಲೂ ಪ್ರತಿಭಟನೆ ಎಚ್ಚರಿಕೆ:
ಮಾದಿಗ ಸಮಾಜದ ರಾಜ್ಯ ಸಮಿತಿಯ ಖಜಾಂಚಿ ಮುನಿರಾಜು ಅವರು ಮಾತನಾಡಿ, ಇವತ್ತು ಅಸ್ಪತ್ರೆಯಿಂದ ಸಾರ್ವಜನಿಕರಿಗೆ ಆದ ಅನ್ಯಾಯ ಶ್ರೀಜಿತ್ ಅವರ ಸಾವಿನಲ್ಲಿ ಕೊನೆಯಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನ ರಾಜ್ಯದ ಮೂಲೆ ಮೂಲೆಗೂ ಪ್ರತಿಭಟನೆಯ ಕಾವು ಏರಲಿದೆ. ಬೆಂಗಳೂರಿನಲ್ಲೂ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ದಲಿತ್ ಸೇವಾ ಸಮಿತಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಅವರು ಪ್ರತಿಭಟನೆಯಲ್ಲಿ ಮಾತನಾಡಿದರು. ಮೃತ ಶ್ರೀಜಿತ್ ಅವರ ಚಿಕ್ಕಪ್ಪ ಚಂದ್ರಶೇಖರ್, ಸಂಬಂಧಿಕೆ ಸುಮತಿ ಬೆಟ್ಟಂಪಾಡಿ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಸಮಿತಿಯ ಲೋಕೇಶ್ ತೆಂಕಿಲ, ತಾಲೂಕು ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಸಹಿತ ಮಾದಿಗ ಸಮಾಜದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here