ಪುತ್ತೂರು :ಇರಿತಕ್ಕೊಳಗಾದ ಯುವತಿ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಮೃತ್ಯು

0

*ಮಹಿಳಾ ಪೊಲೀಸ್ ಸ್ಟೇಷನ್ ಬಳಿಯೇ ಚೂರಿಯಿರಿದು ಯುವತಿಯ ಕೊಲೆ
*ಪರಾರಿಯಾಗಿದ್ದ ಆರೋಪಿಯನ್ನು ಗಂಟೆಯೊಳಗೆ ಬಂಧಿಸಿದ ಪೊಲೀಸರು
*ಮುಂದೆ ಕೆಲಸಕ್ಕೆ ಬರೋದಿಲ್ಲ ಎಂದು ಅಂಗಡಿಯಿಂದ ಹೊರಟು ಬಂದಿದ್ದ ಗೌರಿ
*ಪದ್ಮರಾಜು ತೊಂದರೆ ಕೊಡುತ್ತಿದ್ದಾನೆಂದು ತಾಯಿಗೆ ಕರೆ ಮಾಡಿ ತಿಳಿಸಿದ್ದ ಯುವತಿ
*ಯುವತಿಯೊಂದಿಗೆ ಮಾತನಾಡಲೆಂದು ಬಂದು ಠಾಣೆಯ ಗೋಡೆಗೊತ್ತಿ ಹಿಡಿದು ಕತ್ತಿಗೆ ಚೂರಿಯಿರಿದ ಆರೋಪಿ
*ಪ್ರೀತಿ ಮಾಡುವಂತೆ 4 ವರ್ಷಗಳಿಂದ ಮಗಳನ್ನು ಪೀಡಿಸುತ್ತಿದ್ದ ಆರೋಪಿ -ಮೃತ ಯುವತಿಯ ತಾಯಿ ದೂರು

ಮೃತಪಟ್ಟ ಗೌರಿ

ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿಯೇ ಯುವಕನೋರ್ವ ಯುವತಿಯ ಕತ್ತಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಆ.24ರಂದು ಮಧ್ಯಾಹ್ನ ನಡೆದಿದ್ದು,ಘಟನೆ ನಡೆದ ಕೆಲವೇ ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಳಿಕೆ ಗ್ರಾಮದ ಕುದ್ದುಪದವು ಆದಾಳ ನಿವಾಸಿಗಳಾಗಿರುವ ಬಡ ಕುಟುಂಬದ ವಿಜಯನ್ ಮತ್ತು ಸೀತಾ ದಂಪತಿಯ ಹಿರಿಯ ಪುತ್ರಿ ಗೌರಿ(18ವ.) ಕೊಲೆಯಾದವರು. ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನೈಬೇಲು ನಿವಾಸಿ ಪದ್ಮರಾಜು(24ವ.)ಕೃತ್ಯ ಎಸಗಿದ ಆರೋಪಿ. ಕೃತ್ಯವೆಸಗಿ ಬೈಕ್‌ನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಟ್ವಾಳ ಮಾವಿನಕಟ್ಟೆಯ ಬಳಿ ಬಂಧಿಸಿದ್ದಾರೆ.

ಮನೆಗೆ ಹೋಗುವುದಾಗಿ ಅಂಗಡಿಯಿಂದ ಬಂದಿದ್ದ ಗೌರಿ: ಮೃತ ಗೌರಿ ಅವರು ಕಳೆದ ಕೆಲವು ದಿನಗಳಿಂದ ಪುತ್ತೂರು ಕೋಟಿಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿರುವ ಮಹಾಲಕ್ಷ್ಮೀ ಥ್ರೆಡ್ ಆಂಡ್ ಮ್ಯಾಚಿಂಗ್ ಸೆಂಟರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದರು.ಆ.24ರಂದು ಮಧ್ಯಾಹ್ನ ಮನೆಗೆ ಹೋಗುವುದಾಗಿ ಹೇಳಿ ಅಂಗಡಿಯಿಂದ ಹೊರಟು ಹೋಗಿದ್ದ ಗೌರಿಯವರು ಪುತ್ತೂರು ಮಹಿಳಾ ಪೊಲೀಸ್ ಸ್ಟೇಷನ್ ಬಳಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದರು. ಅಲ್ಲಿಂದ ಮಹಿಳಾ ಠಾಣೆಯ ಪೊಲೀಸರೇ ಆಕೆಯನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ವಿಶ್ವಹಿಂದು ಪರಿಷತ್, ಬಜರಂಗದಳದವರು ಮಂಗಳೂರು ಆಸ್ಪತ್ರೆಗೆ ಕರೆದೊಯ್ದುರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ದ.ಕ.ಜಿಲ್ಲಾ ಎಸ್ಪಿ ಸಿಬಿ.ರಿಷ್ಯಂತ್, ಅಡಿಷನಲ್ ಎಸ್ಪಿ ಧರ್ಮಪ್ಪ ಎಮ್, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್, ಎಸ್.ಐ ರಾಮನಾಯ್ಕ್, ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಮ್.ಎನ್.ರಾವ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಉದಯ ರವಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಆರೋಪಿ ಪದ್ಮರಾಜ್‌

ಪ್ರೀತಿ ಮಾಡುವಂತೆ 4 ವರ್ಷಗಳಿಂದ ಪೀಡಿಸುತ್ತಿದ್ದ: ಘಟನೆ ಕುರಿತು ಮೃತ ಗೌರಿಯವರ ತಾಯಿ ಸೀತಾ ಅವರು ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆ.24ರಂದು ಆರೋಪಿ ಪದ್ಮರಾಜ ನನ್ನ ಮಗಳು ಗೌರಿಯನ್ನು ಪೀಡಿಸಿದ್ದು ಈ ಬಗ್ಗೆ ಮಗಳು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಸಮಯ ಆರೋಪಿಯು ಮಹಿಳಾ ಪೊಲೀಸ್ ಠಾಣೆಯ ಬಳಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡ ಮಗಳು ಗೌರಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿ ಆಕೆ ಸಾಯಂಕಾಲದ ವೇಳೆ ಮೃತಪಟ್ಟಿರುತ್ತಾಳೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.ತನ್ನನ್ನು ಪ್ರೀತಿಸುವಂತೆ ಆರೋಪಿ ಪದ್ಮರಾಜು ಕಳೆದ ನಾಲ್ಕು ವರ್ಷಗಳಿಂದ ನನ್ನ ಮಗಳನ್ನು ಪೀಡಿಸುತ್ತಿದ್ದ. ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ’ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಪದ್ಮರಾಜು ತೊಂದರೆ ಕೊಡುತ್ತಿದ್ದಾನೆಂದು ತಾಯಿಗೆ ಕರೆ ಮಾಡಿ ಠಾಣೆಗೆ ಹೊರಟಿದ್ದ ಯುವತಿ: ಪದ್ಮರಾಜು ನನಗೆ ತೊಂದರೆ ಕೊಡುತ್ತಿದ್ದಾನೆ ಎಂದು ಗೌರಿಯವರು ಮಧ್ಯಾಹ್ನ ತಾಯಿಗೆ ಕರೆ ಮಾಡಿದ್ದರು.ಆ ಬಳಿಕ ಆಕೆ ಇದೇ ವಿಚಾರದಲ್ಲಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲೆಂದು ಹೋಗುತ್ತಿದ್ದ ಗೌರಿಯವರು ದೇವಸ್ಥಾನದ ಬಳಿಯಿಂದ ಬಂದು ಪುಷ್ಕರಣಿಯ ಪಕ್ಕದಿಂದ ಇನ್ನೇನು ಮಹಿಳಾ ಪೊಲೀಸ್ ಠಾಣೆಯ ಸಮೀಪ ತಲುಪಿದಾಗ ಮುಖ್ಯರಸ್ತೆಯಿಂದ ಬೈಕ್‌ನಲ್ಲಿ ಬಂದ ಆರೋಪಿ ಪದ್ಮರಾಜು ಆಕೆಯ ಬಳಿಗೆ ಬಂದು ಮಾತನಾಡುತ್ತಾ ಒಮ್ಮೆಲೇ ಆಕೆಯನ್ನು ಪೊಲೀಸ್ ಠಾಣಾ ಹಿಂಬದಿಯ ಗೋಡೆಗೆ ಒತ್ತಿ ಹಿಡಿದು ನಿಲ್ಲಿಸಿ ಕುತ್ತಿಗೆಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದು ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಿದ್ದ.ಆರೋಪಿ ಪದ್ಮರಾಜು ಮಹಿಳಾ ಪೊಲೀಸ್ ಠಾಣೆಯ ಬಳಿ ಬರುವುದು ಮತ್ತು ಠಾಣೆಯ ಬಳಿಯಿಂದ ಬೈಕ್‌ನಲ್ಲಿ ಹೋಗುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪದ್ಮರಾಜು ಮತ್ತು ಗೌರಿ ಅವರಿಗೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದು ಬಳಿಕ ಅವರು ಪ್ರೀತಿಸುತ್ತಿದ್ದರು.ಈ ನಡುವೆ ಇನ್ನೋರ್ವ ಯುವಕ ಇವರ ಪ್ರೀತಿಯ ನಡುವೆ ಬಂದಿದ್ದ.ಗೌರಿಯವರು ಆತನೊಂದಿಗೆ ಹೆಚ್ಚಾಗಿ ಮಾತನಾಡಿಕೊಂಡಿದ್ದ ವಿಚಾರ ಎರಡು ದಿನಗಳ ಹಿಂದೆಯಷ್ಟೆ ತಿಳಿದುಕೊಂಡಿದ್ದ ಪದ್ಮರಾಜು ಆ.24ರಂದು ಈ ಕುರಿತು ಆಕೆಗೆ ಕರೆ ಮಾಡಿ ವಿಚಾರಿಸಿದ್ದನಲ್ಲದೆ ಇದೇ ವಿಚಾರದಲ್ಲಿ ಮಧ್ಯಾಹ್ನ ಅವರೊಳಗೆ ಫೋನ್ ಸಂಭಾಷಣೆ ವೇಳೆ ಮಾತಿನ ಚಕಮಕಿಯೂ ನಡೆದಿತ್ತು. ನಾನು ನಿನಗೆ ಕೊಟ್ಟ ಹಣ ವಾಪಸ್ ಕೊಡು ಎಂದು ಈ ವೇಳೆ ಪದ್ಮರಾಜು ಪೀಡಿಸಿ ಜೋರು ಮಾಡಿದ್ದಾನೆ. ಈ ನಡುವೆ ಆಕೆ, ನಾನು ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋಗುತ್ತಿರುವುದಾಗಿ ತಿಳಿಸಿದ್ದರು.ಕೂಡಲೇ ಅಲ್ಲಿಗೆ ಬೈಕಲ್ಲಿ ಬಂದ ಆರೋಪಿಯು ಆಕೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ. ಮೃತ ಗೌರಿಯವರು ತಂದೆ, ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.
ಕೆಲಸಕ್ಕೆ ಸೇರಿ 24 ದಿನ
ಗೌರಿ ಅವರು ಕೋಟಿಚೆನ್ನಯ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದ ಮಹಾಲಕ್ಷ್ಮೀ ತ್ರೆಡ್ ಆಂಡ್ ಮ್ಯಾಚಿಂಗ್ ಕ್ಲೋತ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿ 24 ದಿನಗಳಷ್ಟೆ ಆಗಿತ್ತು. ಆ.24ರಂದು ಆಕೆ,ಮಧ್ಯಾಹ್ನದ ಬಳಿಕದಿಂದ ನಾನು ಬರೋದಿಲ್ಲ. ಕೆಲಸ ಬಿಡುತ್ತೇನೆ ಎಂದು ಹೇಳಿದ್ದು ಆಕೆಯ ಬಾಕಿ ಸಂಬಳವನ್ನು ನೀಡಿದ್ದೆ.ಮಧ್ಯಾಹ್ನ ಸುಮಾರು 12ರಿಂದ 1 ಗಂಟೆ ಒಳಗೆ ಆಕೆ ಅಂಗಡಿಯಿಂದ ತೆರಳಿದ್ದಾರೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ
ಪುತ್ತೂರಿನಲ್ಲಿ ಹಾಡಹಗಲೇ ಯುವತಿಯನ್ನು ಅಮಾನವೀಯವಾಗಿ ಕೊಲೆ ಮಾಡಿದ ಘಟನೆ ಖಂಡನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವತಿಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆಯತ್ನ, ಕೊಲೆ ಪ್ರಕರಣಗಳು ದಿನನಿತ್ಯ ಹೆಚ್ಚಾಗುತ್ತಿದೆ, ಪೊಲೀಸ್ ಇಲಾಖೆ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳಬೇಕು. ಈ ಕೃತ್ಯ ನಡೆಸಿದವನಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ದುರ್ಗಾವಾಹಿನಿ ಪುತ್ತೂರು ಜಿಲ್ಲಾ ಸಂಯೋಜಕಿ ಹೇಮಾ ಸುಭಾಷಿಣಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಗಂಟೆಯೊಳಗೆ ಕೊಲೆ ಆರೋಪಿಯ ಬಂಧನ ಪೊಲೀಸರ ಕಾರ್ಯ ಶ್ಲಾಘನೀಯ-ಶಾಸಕ ರೈ
ಪುತ್ತೂರಿನಲ್ಲಿ ಯುವತಿಯೋರ್ವಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೃತ್ಯ ನಡೆದ ಒಂದೂವರೆಗಂಟೆಯೊಳಗೆ ಪೊಲೀಸರು ಬಂಧಿಸಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ನಗರದಲ್ಲಿ ಹಾಡಹಗಲೇ ನಡೆಯಬಾರದ ಘಟನೆ ನಡೆದಿರುವುದು ಅತ್ಯಂತ ದು:ಖದ ವಿಚಾರವಾಗಿದೆ.ಇಂಥ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರದಿಂದ ಇರಬೇಕಾಗುತ್ತದೆ.ತಮ್ಮ ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ನಾನು ಸಾಂತ್ವನವನ್ನು ಹೇಳುತ್ತಿದ್ದೇನೆ. ಪುತ್ತೂರು ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಅಪರಾಧ ಚಟುವಟಿಕೆ ನಡೆಯದಂತೆ ಪೊಲೀಸ್ ಇಲಾಖೆ ಸದಾ ಎಚ್ಚರದಿಂದ ಇದ್ದರೂ ಈ ಕೃತ್ಯ ನಡೆದಿದೆ.ಆರೋಪಿಯನ್ನು ಬಂಧಿಸುವಲ್ಲಿ ಮುತುವರ್ಜಿವಹಿಸಿದ ಜಿಲ್ಲಾ ಎಸ್‌ಪಿ ಸಿ.ಬಿ ರಿಷ್ಯಂತ್ ಹಾಗೂ ಡಿವೈಎಸ್‌ಪಿ ಡಾ.ಗಾನಾ ಪಿ ಕುಮಾರ್ ಹಾಗೂ ಪೊಲೀಸ್ ಇಲಾಖೆಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಗೆ ಅಭಿನಂದನೆ ಗಸ್ತು ವ್ಯವಸ್ಥೆಗೆ ಇನ್ನಷ್ಟು ಶಕ್ತಿ ಕೊಡಬೇಕು-ಪುತ್ತಿಲ
ಯುವತಿ ಕೊಲೆಗೆ ಸಂಬಂಧಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ದ.ಕ.ಜಿಲ್ಲಾ ಎಸ್ಪಿಯವರನ್ನು ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ಶಾಂತಿ ಸುವ್ಯವಸ್ಥೆ ಮತ್ತು ಇವತ್ತು ಮಹಿಳೆಯರ ಮೇಲೆ ನಡೆದಿರುವ ಎರಡು ಮೂರು ಆತಂಕಕಾರಿ ಬೆಳವಣಿಗೆಗಳಿಂದಾಗಿ ನಾಗರಿಕ ಸಮುದಾಯ ಆತಂಕದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಆರೋಪಿಯನ್ನು ಒಂದು ಗಂಟೆಯೊಳಗೆ ಪೊಲೀಸರು ಬಂಧಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಮುಂದಿನ ದಿನ ವಿಶೇಷವಾಗಿ ಮಹಿಳೆಯರಿಗೆ ರಕ್ಷಣೆ ಕೊಡುವ ಯೋಚನೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಗಸ್ತು ತಿರುಗುವ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ಕೊಡಬೇಕು.ಗಾಂಜಾ ಸೇವನೆಯ ಮೂಲಕ ಸಮಾಜಘಾತುಕ ಸಂಗತಿಗಳು ಅನೇಕ ಕಡೆ ನಡೆಯತ್ತಿದೆ.ಈ ಕುರಿತು ಎಸ್ಪಿಯವರ ಗಮನಕ್ಕೆ ತಂದಿದ್ದೇನೆ.ಮುಂದಿನ ದಿವಸದಲ್ಲಿ ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಶೇಷವಾಗಿ ನೆಮ್ಮದಿಯನ್ನು ಕಾಣುವಲ್ಲಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ.ಈ ರೀತಿಯ ಘಟನೆ ನಡೆದಾಗ ಸಾರ್ವಜನಿಕರು ಕೂಡಾ ಇಲಾಖೆಯ ಜೊತೆ ಸಂಪರ್ಕ ಮಾಡಿ ಸಹಕಾರ ನೀಡುವಂತೆ ವಿನಂತಿಸುವುದಾಗಿ ಹೇಳಿದರು.
ಪೊಲೀಸ್ ಟೀಮ್ ವರ್ಕ್‌ಗೆ ಅಭಿನಂದನೆ – ಪಿ.ಜಿ.ಜಗನ್ನಿವಾಸ ರಾವ್ ಬನ್ನೂರು
ಯುವತಿಗೆ ಚೂರಿ ಇರಿತವಾದ ಕ್ಷಣದಲ್ಲೇ ಗಾಯಾಳು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವಲ್ಲಿ ಪೊಲೀಸರು ನಡೆದರೆ ಮತ್ತೊಂದು ಕಡೆ ಆರೋಪಿಯನ್ನು ಗಂಟೆಯೊಳಗೆ ಬಂದಿಸುವಲ್ಲೂ ಕಾರ್ಯ ಸಾಧನೆ ಮಾಡಿದ್ದಾರೆ. ಪೊಲೀಸ್ ಟೀಮ್ ವರ್ಕ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ.ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.ಹಾಡಹಗಲೇ ಈ ಕೃತ್ಯ ನಡೆದಿದ್ದು ನಾಗರಿಕ ಸಮಾಜ ಭಯಭೀತವಾಗುವಂತೆ ಮಾಡಿದೆ. ಈ ಘಟನೆಯಲ್ಲಿ ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಹೇಳಿದ್ದಾರೆ.

LEAVE A REPLY

Please enter your comment!
Please enter your name here