ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ ಯುವತಿಗೆ ಚೂರಿ ಇರಿದ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ

0

ಪುತ್ತೂರು:ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಬಳಿ ಆ.24ರಂದು ಹಾಡಹಗಲೇ ಕೊಲೆಯಾಗಿರುವ ಕುದ್ದುಪದವಿನ ಯುವತಿ ಗೌರಿಯವರು, ತನ್ನ ರಕ್ಷಣೆಗೆಂದು ಇರಿಸಿಕೊಂಡಿದ್ದ ಚೂರಿಯಿಂದಲೇ ಕೊಲೆಯಾಗಿದ್ದಾರೆ ಎನ್ನುವ ಆಘಾತಕಾರಿ ವಿಚಾರ ಬಂಧಿತ ಆರೋಪಿಯ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.ಬಂಧಿತ ಆರೋಪಿ ಪದ್ಮರಾಜುನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಆರೋಪಿ ಪದ್ಮರಾಜುರನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳದ ಮಹಜರು ನಡೆಸಿದ್ದಾರೆ.ಮೃತ ಯುವತಿ ಕೆಲಸ ಮಾಡಿಕೊಂಡಿದ್ದ ಅಂಗಡಿ, ಅಲ್ಲಿ ಮೃತ ಯುವತಿಯೊಂದಿಗೆ ಜಗಳ ಮಾಡಿದ್ದ ಸ್ಥಳ ಹಾಗೂ ಕೃತ್ಯವೆಸಗಿದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದಾರೆ.ಸಂಜೆ ವೇಳೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.ಆರೋಪಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು ಆ.೨೬ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.


ರಕ್ಷಣೆಗಾಗಿ ಇರಿಸಿಕೊಂಡಿದ್ದ ಚೂರಿಯಿಂದಲೇ ಬಲಿಯಾದ ಯುವತಿ?: ಉದ್ಯೋಗಸ್ಥ ಯುವತಿಯರು, ಮಹಿಳೆಯರು ಮುಸ್ಸಂಜೆ ಮನೆಗೆ ಹೋಗುವಾಗ ನಿರ್ಜನ ದಾರಿಯಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಮತ್ತು ಮನೆಗೆ ತಲುಪುವಾಗ ಕತ್ತಲಾಗುವ ಸಾಧ್ಯತೆಗಳು ಇರುವುದರಿಂದ ತಮ್ಮ ಆತ್ಮರಕ್ಷಣೆಗೆಂದು ಸಣ್ಣದಾದ ಆಯುಧವನ್ನು ಬಹುತೇಕ ಮಂದಿ ತಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡಿರುತ್ತಾರೆ.ಕೊಲೆಯಾಗಿರುವ ಗೌರಿಯವರೂ ತನ್ನ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿದ್ದ ಚೂರಿಯಿಂದಲೇ ಕೊಲೆಗೀಡಾಗಿರುವುದು ದುರಂತವಾಗಿದೆ. ಮೃತ ಗೌರಿ ಕುದ್ದಪದವು ಆದಾಳ ನಿವಾಸಿಯಾಗಿದ್ದು, ಸಂಜೆ ಕೆಲಸ ಬಿಟ್ಟು ಮನೆಗೆ ಹೋಗುವಾಗ ಕುದ್ದುಪದವಿನಲ್ಲಿ ಬಸ್‌ನಲ್ಲಿ ಇಳಿದು ಅಲ್ಲಿಂದ ಅದಾಳಕ್ಕೆ ನಿರ್ಜನ ಪ್ರದೇಶ ಸೇರಿದಂತೆ ಸುಮಾರು ಅರ್ಧ ಕಿ.ಮೀ ನಡೆದುಕೊಂಡು ಹೋಗಿ ಮನೆಗೆ ಸೇರಬೇಕಾಗುತ್ತದೆ ಮತ್ತು ಈ ಕತ್ತಲು ಆವರಿಸುವುದರಿಂದ ಆಕೆ ತನ್ನ ಆತ್ಮರಕ್ಷಣೆಗಾಗಿ ಚೂರಿಯೊಂದನ್ನು ತನ್ನ ಪರ್ಸ್‌ನಲ್ಲಿ ಇರಿಸಿಕೊಳ್ಳುತ್ತಿದ್ದರು.ಅದೇ ಚೂರಿಯಿಂದಲೇ ಆಕೆ ಕೊಲೆಗೀಡಾಗಿರುವುದು ಆಘಾತಕಾರಿಯಾಗಿದೆ.


ಇಲ್ಲಿನ ಕೋಟಿ ಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಮಳಿಗೆಯೊಂದರಲ್ಲಿ ಉದ್ಯೋಗದಲ್ಲಿದ್ದ, ವಿಟ್ಲ ಕುದ್ದುಪದವಿನ ಅದಾಳ ನಿವಾಸಿ ಗೌರಿ(೧೮ವ.)ಯವರು ಮಹಾಲಿಂಗೇಶ್ವರ ದೇವಾಲಯದ ದ್ವಾರದ ಬಳಿ ಪುಷ್ಕರಣಿ ಇರುವ ರಸ್ತೆಯಲ್ಲಿ ಆ.೨೪ರಂದು ಮಧ್ಯಾಹ್ನ 1.55ರ ವೇಳೆ ನಡೆದುಕೊಂಡು ಬಂದಿದ್ದರು.ಮಹಿಳಾ ಪೊಲೀಸ್ ಠಾಣೆಯ ಬಳಿಯಿರುವ ದೇವಳದ ಗೋಪುರದ ಆಧಾರ ಸ್ಥಂಭದ ಅಡಿಯಲ್ಲೇ ಪದ್ಮರಾಜು ಆಕೆಯ ಕುತ್ತಿಗೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ.ಇದನ್ನು ಗಮನಿಸಿದ ವ್ಯಕ್ತಿಯೋರ್ವರು ಅಲ್ಲಿಗೆ ಬಂದರಾದರೂ ಆರೋಪಿಯು ಅದೇ ಚೂರಿ ತೋರಿಸಿ ಬೆದರಿಸಿ ಬಳಿಕ ಬೈಕಲ್ಲಿ ಪರಾರಿಯಾಗಿದ್ದ.ಜನನಿಭಿಡ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಘಟನೆ ತತ್‌ಕ್ಷಣ ಪೊಲೀಸರ ಗಮನಕ್ಕೆ ಬಂದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಪೊಲೀಸರೇ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡುಹೋಗುತ್ತಿದ್ದ ವೇಳೆ ಆಕೆ ಮೃತಪಟ್ಟರು.


ಗೌರಿ ಬಳಿಯಲ್ಲಿದ್ದ ಚೂರಿ: ತಾನು ಕೃತ್ಯಕ್ಕೆ ಬಳಸಿದ ಚೂರಿ ಆಕೆಯ ಪರ್ಸ್‌ನಲ್ಲಿ ಇತ್ತು ಎಂದು ಆರೋಪಿ ಪದ್ಮರಾಜು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.ಆದರೆ, ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ ಪದ್ಮರಾಜು ಮೃತ ಗೌರಿಯವರೊಂದಿಗೆ ಮಾತು ಆರಂಭಿಸಿ ಜಗಳಕ್ಕೆ ಮುಂದಾದ ವೇಳೆ ಆಕೆ ಆತನನ್ನು ಹೆದರಿಸಲೆಂದೆ ತನ್ನ ಪರ್ಸಲ್ಲಿದ್ದ ಚೂರಿ ತೆಗೆದಾಗ ಆತನಿಗೆ ಬೆದರಿಸಿದ ವೇಳೆ ಆತ ಚೂರಿಯನ್ನು ಕಸಿದುಕೊಂಡು ಆಕೆಗೆ ತಿವಿದಿರುವ ಸಂಶಯ ವ್ಯಕ್ತವಾಗಿದೆ.


ಆರಂಭದಲ್ಲಿ ಉಜಿರೆಯಲ್ಲಿ ಕೆಲಸಕ್ಕಿದ್ದರು: ಗೌರಿಯವರು ಪುತ್ತೂರು ಬಸ್‌ನಿಲ್ದಾಣದ ತ್ರೆಡ್ ಆಂಡ್ ಮ್ಯಾಚಿಂಗ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರುವ ಮೊದಲು ಉಜಿರೆಯಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು.ಆ ಸಂದರ್ಭವೂ ಪದ್ಮರಾಜ್ ಆಕೆಯನ್ನು ಭೇಟಿಯಾಗುತ್ತಿರುವ ಮಾಹಿತಿ ಲಭ್ಯವಾಗಿದೆ.ಪದ್ಮರಾಜ್ ಮೂಲತಃ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಲಿ ನಿವಾಸಿಯಾಗಿದ್ದು ಆತನ ಕುಟುಂಬ ಅಲ್ಲಿನ ಜಾಗ ಮಾರಾಟ ಮಾಡಿ ಕಳೆದ ಮೂರು ವರ್ಷಗಳಿಂದ ವೇಣೂರಿನ ತಾಯಿಯ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರು.ಹೀಗೆ ವೇಣೂರಿನಲ್ಲಿ ಗೌರಿ ಮತ್ತು ಪದ್ಮರಾಜ್ ಅವರಿಗೆ ಪರಿಚಯವಾಗಿ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.


ಇನ್ನೊಬ್ಬನ ಸಂಪರ್ಕ ಕೊಲೆಗೆ ಕಾರಣವಾಯಿತೇ ?: ನಾಲ್ಕೈದು ವರ್ಷಗಳಿಂದ ಗೌರಿ ಮತ್ತು ಪದ್ಮರಾಜ್ ನಡುವೆ ಅನ್ಯೋನ್ಯತೆ ಬೆಳೆದಿತ್ತು.ತನ್ನನ್ನು ಪ್ರೀತಿ ಮಾಡುವಂತೆ ಆರೋಪಿ ಪದ್ಮರಾಜ್ ಆಕೆಯನ್ನು ಪೀಡಿಸುತ್ತಿದ್ದ.ಆದರೆ ಆಕೆ ಆತನ ಪ್ರೀತಿಯ ಕೋರಿಕೆಯನ್ನು ನಿರಾಕರಿಸುತ್ತಿದ್ದರು.ಈ ನಡುವೆ ಆಕೆಗೆ ಕೌಶಿಕ್ ಎಂಬ ಯುವಕನ ಪರಿಚಯವಾಗಿ ಆತನ ಜೊತೆಯೂ ಗೌರಿಯವರು ಅನ್ಯೋನ್ಯತೆಯಿಂದಿದ್ದರು.ಆತನ ಜೊತೆಗಿನ ನಂಟೇ ಕೊಲೆಗೆ ಹೇತುವಾಯಿತೇ ಎನ್ನುವ ಸಂಶಯದ ಮಾತುಗಳು ಕೇಳಿ ಬರುತ್ತಿವೆ.


ಅಂಗಡಿಗೆ ಬಂದು ಜಗಳ ಮಾಡಿದ್ದ ಆರೋಪಿ: ಗೌರಿ ಅವರು ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.ಹತ್ಯೆಗೆ ಮೊದಲು ಅಲ್ಲಿಗೆ ಆಗಮಿಸಿದ್ದ ಆರೋಪಿ ಪದ್ಮರಾಜ್ ಅಂಗಡಿಯೊಳಗೆ ಬಂದು ಗೌರಿ ಅವರಲ್ಲಿ ಎರಡು ಮೊಬೈಲ್‌ಗಳಿರುವುದನ್ನು ಗಮನಿಸಿ, ಈ ವಿಚಾರದಲ್ಲಿ ಆಕೆಯೊಂದಿಗೆ ಜಗಳವಾಡಿದ್ದ.ನಾನು ನಿನಗಾಗಿ ರೂ.2.5 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದು ಅದನ್ನು ಮರಳಿ ನೀಡುವಂತೆ ಗೌರಿ ಬಳಿ ಒತ್ತಾಯಿಸಿದ್ದ.ಆ ವೇಳೆ ಅಂಗಡಿ ಮಾಲಕರು, ಹೊರಗೆ ಹೋಗಿ ಮಾತನಾಡುವಂತೆ ಅವರಿಬ್ಬರಿಗೂ ಸೂಚಿಸಿದ್ದರು.ಅಂಗಡಿಯೊಳಗಿಂದಲೇ ಗೌರಿಯವರು ತಾಯಿಗೆ ಕರೆಮಾಡಿ ಪದ್ಮರಾಜು ತೊಂದರೆ ನೀಡುತ್ತಿರುವುದಾಗಿ ತಿಳಿಸಿದ್ದರು.ಆ ವೇಳೆ ಆರೋಪಿ ಪದ್ಮರಾಜ್ ಆಕೆಯ ಕೈಯಲ್ಲಿದ್ದ ಮೊಬೈಲ್ ಒಂದನ್ನು ಕಿತ್ತುಕೊಂಡು ಅಲ್ಲಿಂದ ಹೊರಟು ಹೋಗಿದ್ದ.ಗೌರಿ ಅವರು ಬಳಿಕ ಅಂಗಡಿಯೊಳಗಿಂದ ಕಣ್ಣೀರಿಡುತ್ತಾ ಹೊರ ಹೋಗಿದ್ದ ದೃಶ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.


ಮತ್ತೆ ಕರೆ ಮಾಡಿದ್ದ ಗೌರಿ: ಆರೋಪಿಯು ತನ್ನ ಮೊಬೈಲ್ ಫೋನನ್ನು ತೆಗೆದುಕೊಂಡು ಹೋದ ಕೆಲ ಹೊತ್ತಿನ ಬಳಿಕ ಗೌರಿಯವರು ಇನ್ನೊಂದು ಫೋನ್‌ನಲ್ಲಿ ಆತನಿಗೆ ಕರೆ ಮಾಡಿ, ತನ್ನ ಫೋನ್ ವಾಪಸ್ ನೀಡುವಂತೆ ಕೇಳಿಕೊಂಡಿದ್ದರು.ಮಾತ್ರವಲ್ಲದೆ, ಫೋನ್ ಮಾಡುವ ಸಂದರ್ಭ ತನ್ನ ಗೆಳೆಯ ಕೌಶಿಕ್ ಅವರಿಗೂ ಕಾನ್ಫರೆನ್ಸ್ ಕಾಲ್ ಮೂಲಕ ಸಂಪರ್ಕ ಮಾಡಿಸಿದ್ದರು.ಆ ವೇಳೆಗಾಗಲೇ ಪುತ್ತೂರುನಿಂದ ಹೊರಟು ಹೋಗಿ ಮಾಣಿ ಹತ್ತಿರ ತಲುಪಿದ್ದ ಆರೋಪಿಯು ಗೌರಿಯವರು ಕರೆ ಮಾಡಿದ ಬಳಿಕ ಅಲ್ಲಿಂದ ಹಿಂತಿರುಗಿ ಬಂದಿದ್ದ.ಗೌರಿಯವರು ಮಹಿಳಾ ಪೊಲೀಸ್ ಠಾಣೆಯ ಬಳಿಯಿರುವ ಕುರಿತು ಆಕೆಯಿಂದಲೇ ತಿಳಿದುಕೊಂಡಿದ್ದ ಆರೋಪಿಯು ಹಿಂತಿರುಗಿ ಬಂದು ನೇರವಾಗಿ ಆಕೆಯ ಬಳಿ ಬಂದಿದ್ದ.ಈ ವೇಳೆ ಫೋನ್ ವಿಚಾರದಲ್ಲಿ ಮತ್ತೆ ಅವರೊಳಗೆ ಜಗಳ ನಡೆದಾಗ ಗೌರಿಯವರು ಆತನನ್ನು ಹೆದರಿಸಲೆಂದು ತನ್ನ ಪರ್ಸ್‌ನಲ್ಲಿದ್ದ ಚೂರಿಯನ್ನು ತೆಗೆದಾಗ ಆರೋಪಿಯು ಆಕೆಯ ಕೈಯಲ್ಲಿದ್ದ ಚೂರಿಯನ್ನು ಕಿತ್ತುಕೊಂಡು ಠಾಣೆಯ ಗೋಡೆಯ ಬದಿಯ ದ್ವಾರದ ಕಂಬಕ್ಕೆ ಒತ್ತಿ ಹಿಡಿದು ಚೂರಿಯಿಂದ ಕತ್ತು ಸೀಳಿ, ಕುಸಿದು ನೆಲದ ಮೇಲೆ ಬಿದ್ದ ಆಕೆಯ ಹೊಟ್ಟೆಯ ಮೇಲೆ ಕುಳಿತು ಮತ್ತೆ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ತಿವಿದಿದ್ದ ಎಂದು ಆರೋಪಿಸಲಾಗಿದೆ.ಈ ದೃಶ್ಯವನ್ನು ದೇವಳದಿಂದ ಬರುತ್ತಿದ್ದ ಭಕ್ತರೊಬ್ಬರು ನೋಡಿ ಬೊಬ್ಬೆ ಹೊಡೆಯುತ್ತಿದ್ದಂತೆಯೇ ಆರೋಪಿಯು ಅವರಿಗೂ ಚೂರಿ ತೋರಿಸಿ ಬೆದರಿಸಿದ.ಕೃತ್ಯಕ್ಕೆ ಬಳಸಿದ ಚೂರಿಯನ್ನು ಅಲ್ಲೇ ಎಸೆದು ತಾನು ಬಂದಿದ್ದ ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದ ಎಂದು ಹೇಳಲಾಗಿದೆ.


ಮಾಲಿಕರ ಬೈಕ್‌ನಲ್ಲೇ ಬಂದಿದ್ದ !
ಆರೋಪಿ ಪದ್ಮರಾಜ್ ಸರಪಾಡಿಯಲ್ಲಿ ಫೆಲಿಕ್ಸ್ ಎಂಬವರ ಮಾಲಕತ್ವದ ಹಿಟಾಚಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು ತನ್ನ ಮಾಲೀಕರ ಬೈಕ್‌ನಲ್ಲಿಯೇ ಬಂದು ಕೃತ್ಯ ಎಸಗಿದ್ದಾನೆ.ಮಾಲೀಕರ ಬೈಕ್‌ನ್ನು ಸಂಸ್ಥೆಯ ಮ್ಯಾನೇಜರ್ ಸೂಚನೆಯಂತೆ ಬಿ.ಸಿ.ರೋಡ್‌ನ ಶೋ ರೂಮ್‌ಗೆ ಸರ್ವಿಸ್‌ಗೆ ಕೊಂಡುಹೋಗಿದ್ದ.ಬೈಕ್ ಸರ್ವಿಸ್ ಮಾಡಿಸಿದ ಬಳಿಕ ಪದ್ಮರಾಜ್ ನೇರ ಅದೇ ಬೈಕ್‌ನಲ್ಲಿ ಪುತ್ತೂರಿಗೆ ಬಂದಿದ್ದ. ಪದ್ಮರಾಜ್ ಕೃತ್ಯ ಎಸಗಿದ ಬಳಿಕ ಘಟನೆಯ ಬಗ್ಗೆ ತನ್ನ ಪರಿಚಿತರೋರ್ವರಿಗೆ ಕರೆ ಮಾಡಿ ವಿಷಯ ಹೇಳಿ ಕಣ್ಣೀರಿಟ್ಟಿದ್ದ.ಬಳಿಕ ಬಂಟ್ವಾಳ ಮಾವಿನಕಟ್ಟೆಯ ಅಂಗಡಿಯೊಂದರ ಬಳಿ ಬೈಕ್ ನಿಲ್ಲಿಸಿ ಅಲ್ಲಿ ಕುಳಿತುಕೊಂಡಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿ ಬೈಕನ್ನು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here