ಸಂಸ್ಕೃತಿ ಜಾಗೃತಿ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ: ಒಡಿಯೂರು ಶ್ರೀ
ವಿಟ್ಲ: ಲಕ್ಷ್ಮಿ ಸಂಪತ್ತಿನ ಅಧಿಪತಿ ದೇವತೆ. ಲಕ್ಷ್ಮೀ ಹಾಗೂ ನಾರಾಯಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮೊಳಗೆ ಶಾಂತಿ ನೆಮ್ಮದಿಯನ್ನು ಹುಡುಕುವ ಕೆಲಸವಾಗಬೇಕು. ಒಳಿತಿನ ಕಡೆಗೆ ಸಾಗಲು ಒಳ್ಳೆತನದ ಅರಿವಿರಬೇಕು. ಅರ್ಪಣಾ ಭಾವದ ಸೇವೆ ನಮ್ಮಲ್ಲಿರಬೇಕು. ಬದುಕು ಸಾರ್ಥಕ್ಯ ಪಡೆಯಲು ಉತ್ತಮ ನಡತೆ ನಮ್ಮದಾಗಬೇಕು. ಸಂಸ್ಕೃತಿ ಜಾಗೃತಿ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಆ.25ರಂದು ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ನಡೆದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ವೃತಪೂಜೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ಲಕ್ಷ್ಮಿ ಹಾಗೂ ಹನುಮಂತನಲ್ಲಿ ಪರಿಪೂರ್ಣತೆ ಪಡೆಯಲು ಸಾಧ್ಯ. ಪರಿಪಾಲನೆ ಇಲ್ಲದಿದ್ದರೆ ಯಾವುದೂ ನಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಇಚ್ಚಾ ಶಕ್ತಿ, ಕ್ರೀಯಾ ಶಕ್ತಿ, ಜ್ಞಾನ ಶಕ್ತಿ ಒಟ್ಟಾದರೆ ಮಾತ್ರ ಬದುಕು ಬದುಕಾಗಲು ಸಾಧ್ಯ. ಸನಾತನ ಸಂಸ್ಕೃತಿಯ ನೆಲೆಗಟ್ಟಿಗೆ ಇಂತಹ ನಿಷ್ಟೆ, ಅನುಷ್ಠಾನ, ವೃತಾಚರಣೆ ಅಗತ್ಯ. ಅತಿಯಾದ ಆಸೆ ಬೇಡ, ಆಸೆಗಳೆಲ್ಲವೂ ಮಿತಿಯಲ್ಲಿದ್ದರೆ ಜೀವನ ಚಂದ ಎಂದರು. ಸಾದ್ವಿ ಶ್ರೀ ಮಾತಾನಂದಮಯಿ ದಿವ್ಯಸಾನಿಧ್ಯ ವಹಿಸಿದ್ದರು.
ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಂದನ ಭಟ್ ಹಾಗೂ ಪ್ರವೀಣ್ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀವರಮಹಾಲಕ್ಷ್ಮೀವೃತಪೂಜೆಯ ವಿಧಿವಿಧಾನ ನೆರವೇರಿತು.