ಈಶ್ವರಮಂಗಲ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆಯ ದಶಸಂಭ್ರಮ-ಸಾಧಕರಿಗೆ ಸನ್ಮಾನ

0

ಧರ್ಮಯುಕ್ತವಾದ ಸಂಪತ್ತು ಗಳಿಸಬೇಕು-ಒಡಿಯೂರು ಸ್ವಾಮೀಜಿ


ಪುತ್ತೂರು: ಧರ್ಮಯುಕ್ತವಾದ ಸಂಪತ್ತು ಗಳಿಸಬೇಕು. ಧರ್ಮ ಮೀರಿ ಬದುಕು ನಡೆಸಬಾರದು. ಬೆರಳ ತುದಿ ಮತ್ತು ನಾಲಗೆಯ ತುದಿಯಲ್ಲಿ ಲಕ್ಷ್ಮೀ ಇರುತ್ತಾಳೆ. ಲಕ್ಷ್ಮೀಚಲನಶೀಲೆ. ಬದುಕು ನಡೆಯಲು ಲಕ್ಷ್ಮೀ ಮತ್ತು ನಾರಾಯಣ ಇಬ್ಬರೂ ಬೇಕು. ಇಬ್ಬರೂ ಇದ್ದಲ್ಲಿ ಬದುಕು ಚೆನ್ನಾಗಿ ನಡೆಯುತ್ತದೆ. ಶ್ರಾವಣ ಮಾಸದ ಎರಡನೇ ಶುಕ್ರವಾರ ನಡೆಯುವ ಈ ವರಮಹಾಲಕ್ಷ್ಮೀ ಪೂಜೆಯನ್ನು ಮಹಿಳೆಯರು ಸೇರಿ ಉತ್ತಮವಾಗಿ ಮಾಡಿದ್ದೀರಿ. ದಶಮಾನೋತ್ಸವ ಕಾರ್ಯಕ್ರಮಕ್ಕೆ ಧರ್ಮದ ಹತ್ತು ಲಕ್ಷಣಗಳಿವೆ. ಈ ದಶಸಂಭ್ರಮ ಕಾರ್ಯಕ್ರಮದಲ್ಲಿ ನಿಜವಾದ ಸಾಧಕರನ್ನು ಗುರುತಿಸಿದ್ದು ಹೆಮ್ಮೆಯ ಸಂಗತಿ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ನುಡಿದರು. ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯದ ಸಭಾಭವವನದಲ್ಲಿ ನಡೆದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆಯ ದಶಮಾನೋತ್ಸವದ ದಶಸಂಭ್ರಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಸಂಜೆಯ ಹೊತ್ತು ಲಕ್ಷ್ಮೀ ಮನೆಗೆ ಬರುವ ಹೊತ್ತು. ಮನೆಯ ಬಾಗಿಲು ತೆರೆದಿಡುವ ಸಮಯ. ವರಮಹಾಲಕ್ಷ್ಮೀಯ ಪೂಜೆಯ ದಶಸಂಭ್ರಮದ ಈ ಸಂಧ್ಯಾ ಸಮಯದಲ್ಲಿ ನಾವು ಇzವೆ. ಇದು ನಮಗೆಲ್ಲರಿಗೂ ಸಂಭ್ರಮದ ಸಮಯ ಎಂದು ಶ್ರೀಗಳು ಹೇಳಿದರು.


ನೀವೆಲ್ಲರೂ ನನಗೆ ವರ ನೀಡಿದ್ದೀರಿ- ಭಾಗೀರಥಿ ಮುರುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಶ್ರಾವಣ ಮಾಸದ ಸಮಯದಲ್ಲಿ ನಡೆಯುವ ಈ ಪೂಜೆ ದೇವರಲ್ಲಿ ಏನು ಬೇಕಾದರೂ ಕೇಳುವ ಪೂಜೆಯಾಗಿದೆ. ಧಾರ್ಮಿಕ ದಶಸಂಭ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ. ನೀವೆಲ್ಲರೂ ಸೇರಿ ನನ್ನನ್ನು ಸನ್ಮಾನಿಸಿ ವರ ಕೊಟ್ಟಿದ್ದೀರಿ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಎಲ್ಲರಿಗೂ ಮಹಾಲಕ್ಷ್ಮೀ ಅನುಗ್ರಹಿಸಲಿ ಎಂದು ಹೇಳಿದರು.


ಹೃದಯ ಶ್ರೀಮಂತಿಕೆಯಿದ್ದರೆ ಲಕ್ಷ್ಮಿ ನೆಲೆಸುತ್ತಾಳೆ-ಪಟ್ಲ ಸತೀಶ್ ಶೆಟ್ಟಿ:
ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಹಾಗೂ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಲಕ್ಷ್ಮೀ ಎಂಬುದು ಹೃದಯ ಶ್ರೀಮಂತಿಕೆ. ಹೃದಯ ಶ್ರೀಮಂತಿಕೆಯಿದ್ದರೆ ಲಕ್ಷ್ಮಿ ನೆಲೆಸುತ್ತಾಳೆ. ಮನಸ್ಸು ಮತ್ತು ಬುದ್ಧಿಯಿಂದ ನಮ್ಮ ಜೀವನ ನಡೆಯುತ್ತದೆ. ಮನಸ್ಸು ಚಂಚಲವಾದುದು. ಮನಸ್ಸನ್ನು ನಿಭಾಯಿಸುವ ಶಕ್ತಿ ಬುದ್ಧಿಗಿದೆ. ಸತ್ಕಾರ್ಯಕ್ಕೆ ಲಕ್ಷ್ಮಿಯನ್ನು ಬಳಸಬೇಕು ಸದ್ವಿನಿಯೋಗ ಮಾಡಬೇಕು ಎಂದರು.


ಜನರ ಹಾರೈಕೆಯಿಂದ ನಾನು ಬೆಳೆದೆ-ಶಕುಂತಳಾ ಟಿ. ಶೆಟ್ಟಿ: ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಜನರು ಪ್ರೀತಿಯಿಂದ ನನ್ನನ್ನು ಹರಸಿ ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಇದರಲ್ಲಿ ನನ್ನ ಸಾಧನೆ ಏನಿಲ್ಲ. ನಿಮ್ಮ ಗೌರವಕ್ಕೆ ನನ್ನ ಅಭಿನಂದನೆ ಎಂದು ಹೇಳಿದರು.


ಲಕ್ಷ್ಮೀ ಜೊತೆಗೆ ಸರಸ್ವತಿಯೂ ಬೇಕು-ನಯನಾ ವಿ. ರೈ: ಪದಡ್ಕ ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ ಆಂಡ್ ಕಲ್ಚರ್‌ನ ನಯನಾ ವಿ. ರೈ ಕುದ್ಕಾಡಿ ಮಾತನಾಡಿ ನನ್ನ ಪತಿಯ ಮಾರ್ಗದರ್ಶನ, ತಂದೆ ತಾಯಿಯ ಆಶೀರ್ವಾದ, ನನ್ನ ವಿದ್ಯಾರ್ಥಿ ಸಮೂಹದಿಂದ ನಾನು ಈ ಮಟ್ಟಕ್ಕೆ ಬಂದಿzನೆ. ಕಲಾ ಕ್ಷೇತ್ರದಲ್ಲಿ ಲಕ್ಷ್ಮಿಯ ಜೊತೆಗೆ ಸರಸ್ವತಿಯೂ ಬೇಕು. ಲಕ್ಷಮಿ ಸರಸ್ವತಿ ಜೊತೆಯಾಗಿರಬೇಕು ಎಂದರು.


ಶಕ್ತಿ ನಮ್ಮೊಂದಿಗೆ ಸದಾ ಇರುತ್ತದೆ-ಡಾ.ವೀಣಾ ಎನ್.: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ವೀಣಾ ಎನ್. ಮಾತನಾಡಿ ಶಿವ ಮತ್ತು ಶಕ್ತಿ ಎರಡೂ ಜೊತೆಯಾಗಿದ್ದರೆ ಯಾವುದೇ ಕಾರ್ಯ ಮಾಡಲು ಸಾಧ್ಯ. ನಮ್ಮ ದಿನನಿತ್ಯದ ಕರ್ಮಗಳಲ್ಲಿ ಶಕ್ತಿ ನಮ್ಮೊಂದಿಗೆ ಇರುತ್ತದೆ. ಭಗವಂತ ಶಕ್ತಿಯ ಮುಖೇನ ನಮ್ಮನ್ನು ನಿರಂತರವಾಗಿ ಕಾಪಾಡುತ್ತಿರುತ್ತಾನೆ. ಮನಸ್ಸು ಬುದ್ಧಿಗಳನ್ನು ಕೊಡುವುದು ಭಗವಂತ. ಭಗವಂತನ ನಾಮಸ್ಮರಣೆಯಿಂದ ಒಳ್ಳೆಯ ವಿಚಾರಗಳು ಮನಸ್ಸಿಗೆ ಬರುತ್ತದೆ. ಭಗವಂತನ ಚಿಂತೆ ನಮ್ಮ ಮನಸ್ಸಿನಲ್ಲಿರಲಿ ಎಂದರು.


ಪೂಜಾ ಸಮಿತಿಯ ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ ಮಹಿಳೆಯರ ನೇತೃತ್ವದಲ್ಲಿ ನಡೆಯುವ ಶ್ರೀವರಮಹಾಲಕ್ಷ್ಮಿ ಪೂಜೆಗೆ ನಾವು ಪೂರ್ಣ ಸಹಕಾರ ಕೊಟ್ಟಿದ್ದೇವೆ. ದಶ ವರ್ಷಗಳು ಕೂಡ ಉತ್ತಮವಾಗಿ ಕಾರ್ಯಕ್ರಮ ನಡೆದಿದೆ ಎಂದು ಹೇಳಿ ಸಹಕರಿಸಿದ ಭಕ್ತರು, ಊರವರಿಗೆ ಕೃತಜ್ಷತೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಪಂಚಲಿಂಗೇಶ್ವರ
ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಅಮಿತಾ ಸೀತಾರಾಮ ಮನೋಳಿತ್ತಾಯ ಮಾತನಾಡಿ ದಶಸಂಭ್ರಮ ಕಾರ್ಯಕ್ರಮ ಎಲ್ಲರ ಶ್ರಮದಿಂದ ನೆರವೇರಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.


ಸಮಿತಿ ಕಾರ್ಯದರ್ಶಿ ಅರುಣಾ ಸತೀಶ್ ಶೆಟ್ಟಿ ದಂಪತಿ ಒಡಿಯೂರು ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಒಡಿಯೂರು ಘಟಕದ ಪದಾಧಿಕಾರಿಗಳು ಸ್ವಾಮೀಜಿಯವರನ್ನು ಅಭಿನಂದಿಸಿದರು. ಪೂಜಾ ಸಮಿತಿಯ ಅಧ್ಯಕ್ಷೆ ಅಮಿತಾ ಸೀತಾರಾಮ ಮನೋಳಿತ್ತಾಯ, ಕಾರ್ಯಕಾರಿ ಸಮಿತಿಯ ರವಿಕಿರಣ್ ಶೆಟ್ಟಿ ಬೆದ್ರಾಡಿ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರಾಮ ಮೇನಾಲರವರನ್ನು ಒಡಿಯೂರು ಸ್ವಾಮೀಜಿಯವರು ಶಾಲು ಹಾರ ಸ್ಮರಣಿಕೆ ನೀಡಿ ಸನ್ಮಾನಿಸಿದರು.


ಸಮಿತಿ ಉಪಾಧ್ಯಕ್ಷೆ ಮೋಹನಾಂಗಿ ಬೀಜಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯಗುರು ಹಾಗೂ ಪೂಜಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ವಿ. ನಾಗಪ್ಪಯ್ಯ ಪ್ರಾಸ್ತಾವಿಕ ಮತನಾಡಿದರು. ಪೂಜಾ ಸಮಿತಿಯ ಸದಸ್ಯ ರಾಮ ಮೇನಾಲ ಸ್ವಾಗತಿಸಿದರು. ಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ರತಿರಮೇಶ್ ಪೂಜಾರಿ ವಂದಿಸಿದರು. ಅರ್ಚನಾ ರವಿಕಿರಣ್ ಶೆಟ್ಟಿ, ಸುಮತಿ ಗಣೇಶ್ ರೈ, ಶೇಖರ ಪೂಜಾರಿ ಮುಂಡ್ಯ, ಕಸ್ತೂರಿ ರೈ ಮೇನಾಲ, ವಸಂತಿ ಪಟ್ರೋಡಿ ಅತಿಥಿಗಳನ್ನು ಗೌರವಿಸಿದರು.

ಲಕ್ಷ್ಮೀಕಟಾಕ್ಷ ಅದೃಷ್ಟ ಚೀಟಿ ಡ್ರಾ: ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆಯ ಕಾರ್ಯಕ್ರಮದ ಪ್ರಯುಕ್ತ ಪ್ರತೀ ವರ್ಷ ನಡೆಸಲಾಗುತ್ತಿರುವ ಲಕ್ಷ್ಮೀಕಟಾಕ್ಷ ಅದೃಷ್ಟ ಚೀಟಿಯನ್ನು ಡ್ರಾ ಮಾಡುವ ಮೂಲಕ ನೆರವೇರಿಸಲಾಯಿತು. ಡ್ರಾ ವಿಜೇತರಾಗಿ ಪ್ರಥಮ ಬಹುಮಾನವನ್ನು ಸುಮಿತ್ರಾ ಮೈರೋಳು ಹಾಗೂ ದ್ವಿತೀಯ ಬಹುಮಾನವನ್ನು ಉಷಾ ಕಲ್ಲಾಜೆ ಪಡೆದುಕೊಂಡರು. ಪ್ರಥಮ ಬಹುಮಾನವಾಗಿ ಚಿನ್ನದ ಉಂಗುರ, ರೇಷ್ಮೆ ಸೀರೆ ಹಾಗೂ ಬಾಗೀನ ನೀಡಲಾಯಿತು. ದ್ವಿತೀಯ ಬಹುಮಾನವಾಗಿ ಬೆಳ್ಳಿಯ ಕಾಲುಂಗುರ, ರೇಷ್ಮೆ ಸೀರೆ ಹಾಗೂ ಬಾಗೀನ ನೀಡಿ ಗೌರವಿಸಲಾಯಿತು.

ಸಾಧಕರಿಗೆ ಸನ್ಮಾನ, ಆರತಿ ದಶಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪಾವಂಜೆ ಮೇಳದ ಯಜಮಾನ ಪಟ್ಲ ಸತೀಶ್ ಶೆಟ್ಟಿ, ವಿದುಷಿ ನಯನಾ ವಿ. ರೈ ಕುದ್ಕಾಡಿ ಹಾಗೂ ಸ್ತ್ರೀರೋಗ ಪ್ರಸೂತಿ ತಜ್ಞೆ ಡಾ.ವೀಣಾ ಎನ್.ರವರನ್ನು ಸ್ವಾಮೀಜಿಯವರು ಹಾಗೂ ಗಣ್ಯರು ಸೇರಿ ಸನ್ಮಾನಿಸಿದರು. ಸಾಧಕರಿಗೆ ದೇವರ ವಿಗ್ರಹ, ಶಾಲು, ಹಾರ, ಹಣ್ಣುಹಂಪಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಬಳಿಕ ಸುಮಂಗಲೆಯರು ಸಾಧಕರಿಗೆ ಆರತಿ ಬೆಳಗಿ ಅಕ್ಷತೆ ಹಾಕಿ ಗೌರವಿಸಿದರು.

LEAVE A REPLY

Please enter your comment!
Please enter your name here