ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾಭಾರತಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟವು ಇದೇ ಆ.25ರಂದು ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ವತಿಯಿಂದ ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ ಕೆ. ಅವರು ಭಾರತವು ಕ್ರೀಡಾಕ್ಷೇತ್ರವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಾ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ. ಸಾಧನೆಗೆ ನಿಯಮಿತವಾದ ಪರಿಶ್ರಮ ಅತೀ ಅಗತ್ಯ ಎಂದು ಕ್ರೀಡಾಳುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ಮಹಿಳಾ ಪೋಲೀಸ್ ಇಲಾಖೆಯ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವಂತಹ ಭವಾನಿಯವರು ಮಾತನಾಡುತ್ತಾ, “ಪ್ರಸ್ತುತ ಕಾಲದಲ್ಲಿ ಶಾಲೆಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದ್ದು, ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದನ್ನು ಸಮಾನವಾಗಿ ಸ್ವೀಕರಿಸಿ, ತನ್ಮೂಲಕ ಮುಂದಿನ ಜೀವನಕ್ಕೆ ದಾರಿ ದೀಪವಾಗಲು ಸಹಕಾರಿಯಾಗಬೇಕು” ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖೇಲ್ ಖುದ್ ಪ್ರಮುಖರಾದ ಕರುಣಾಕರ ಇವರು ಪಾಲ್ಗೊಂಡು, ಸಾಂಕೇತಿಕವಾಗಿ ಗೋಲನ್ನು ಬಾರಿಸುವುದರ ಮೂಲಕ ಈ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು. ಆರು ಶಾಲೆಗಳ ಸುಮಾರು ಹನ್ನೊಂದು ವಿದ್ಯಾರ್ಥಿ ತಂಡಗಳಿಂದ ವಯೋಮಿತಿಗೆ ಅನುಗುಣವಾಗಿ ಪಂದ್ಯಾಟವು ರೋಚಕವಾಗಿ ನಡೆಯಿತು.

ಸಾಯಂಕಾಲದ ಸಮಾರೋಪ ಸಮಾರಂಭದಲ್ಲಿ ಶಾಲಾ ಸಂಚಾಲಕ ಭರತ್ ಪೈ ಅವರು ಪ್ರೋತ್ಸಾಹಕ ನುಡಿಗಳನ್ನಾಡಿ, ಪಂದ್ಯದಲ್ಲಿ ಜಯಶಾಲಿಯಾದ ಮಂಗಳೂರು ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ರಾಷ್ಟ್ರೋತ್ಥಾನ ವಿದ್ಯಾನಿಕೇತನ (ಹುಡುಗಿಯರ ತಂಡ) ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತಂಡಗಳಿಗೆ (ಕ್ರಮವಾಗಿ ಬಾಲವರ್ಗ, ಕಿಶೋರವರ್ಗ) ಬಹುಮಾನವನ್ನು ನೀಡಿ ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸಿಂಧೂ ವಿ. ಜಿ ರವರು ಭಾಗವಹಿಸಿದ್ದರು. ಶಾಲಾ ದೈಹಿಕ ಶಿಕ್ಷಕ ನವೀನ್ ಕೊಡ್ಯಡ್ಕರವರು ಸ್ವಾಗತಿಸಿ, ಶಿಕ್ಷಕಿ ಕುಮಾರಿ ರಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಶಿಕ್ಷಕ, ಶಿಕ್ಷಕೇತರ ವೃಂದದವರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here