ಕಡಬ: ಧರ್ಮಸ್ಥಳದ ಕೆಲ ಸ್ಥಳೀಯರು ಪೊಲೀಸ್ ಠಾಣೆಗೆ ಮನವಿ ನೀಡಿ ಸೌಜನ್ಯಾ ಪೋಷಕರು ಹಾಗೂ ಮಹೇಶ್ ತಿಮರೋಡಿ ಯವರನ್ನು ಧರ್ಮಸ್ಥಳಕ್ಕೆ ಬರದಂತೆ ತಡೆಯುವಂತೆ ಕೇಳಿಕೊಂಡಿದ್ದಾರೆ. ಸ್ಥಳೀಯ ಕೆಲ ಗ್ರಾಮಸ್ಥರ ಈ ನಡೆ ಸರಿಯಲ್ಲ ಎಂದು ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ ನಡೆದು 11 ವರ್ಷಗಳ ನಂತರ ಜೂನ್ 16, 2023 ರಂದು ಸಿಬಿಐ ಕೋರ್ಟ್ ನಿಂದ ಬಂಧಿತನಾಗಿದ್ದ ಸಂತೋಷ್ ರಾವ್ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿ ಬಳಿಕ ರಾಜ್ಯದಾದ್ಯಂತ ಹಲವು ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇವೆ. ಇದೆಲ್ಲದರ ನಡುವೆ ಸಿ.ಎಂ ಅವರಿಂದ ಜವಾಬ್ದಾರಿಯುತ ಹೇಳಿಕೆ ನ್ಯಾಯದ ಮೇಲೆ ಭರವಸೆ ಮೂಡಿದೆಯಾದರೂ ಗೃಹ ಮಂತ್ರಿಗಳ ಮಾತಿನಿಂದ ಸೌಜನ್ಯಾ ಪರ ಹೋರಾಟಗಾರರನ್ನು ಇನ್ನಷ್ಟು ಕೆರಳಿಸುವಂತೆ ಮಾಡಿದೆ ಎಂದರು.
ಕೇವಲ ಸೌಜನ್ಯಾ, ಪೋಷಕರು ಹಾಗೂ ಮಹೇಶ್ ತಿಮರೋಡಿ ಯವರನ್ನು ಧರ್ಮಸ್ಥಳಕ್ಕೆ ಬಾರದಂತೆ ನಿರ್ಬಂಧ ಹೇರುವ ಬದಲು ಇಡೀ ಸೌಜನ್ಯಾ ಪರ ನ್ಯಾಯಕ್ಕಾಗಿ ಹೋರಾಟ ಮಾಡುವ ಪ್ರತಿಯೊಬ್ಬರನ್ನು ನಿರ್ಬಂಧ ಹೇರಲು ತಮಗೆ ಊರಿನ ಗಣ್ಯ ವ್ಯಕ್ತಿಗಳಿಂದ ಆದೇಶ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಮಹೇಶ್ ತಿಮರೋಡಿ ಅವರನ್ನ ರೌಡಿ ಎಂದು ಹೇಳುತ್ತೀರಿ, ಅವರು ಹಿಂದೂ ಪರ ಹೋರಾಟದಲ್ಲಿ ಸಕ್ರಿಯವಾಗಿದ್ದ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಬೆನ್ನೆಲಬಾಗಿ ನಿಂತಿದಕ್ಕೆ ರೌಡಿ ಅನ್ನೋ ಪದವಿ ಬಂತೆ ಹೊರತು ಯಾರನ್ನೋ ಕೊಲೆ ಮಾಡಿ ಬಂದಿರುವುದಲ್ಲ. ಸೌಜನ್ಯಳ ಪರ ಎಂದು ಮುಖವಾಡ ಹಾಕಿಕೊಂಡು ನಿಂತಿರುವವರು ನಾವು ಎಲ್ಲದಕ್ಕೂ ಸಿದ್ಧ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಇದ್ದಾರೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಅನ್ನೋವರ ಬಾಯಲ್ಲಿ ಈಗ ನನ್ನ ಅಭಿಮಾನಿಗಳು ಇದ್ದಾರೆ ಅವರೆಲ್ಲ ನೋಡಿಕೊಳ್ಳುತ್ತಾರೆ ಅನ್ನೋ ಹೇಳಿಕೆ ಸೌಜನ್ಯಾ ನ್ಯಾಯದ ಪರ ಇರೋರಿಗೆ ಬೆದರಿಕೆ ನೀಡುವಂತಿದೆ.
ಪದ್ಮಾಲತ ಅತ್ಯಾಚಾರ ಕೊಲೆ ಸೇರಿ ಇಲ್ಲಿಯವರೆಗೆ ಧರ್ಮಸ್ಥಳ ಕ್ಷೇತ್ರದ ಆಡಳಿತಕ್ಕೆ ಒಳಪಟ್ಟ ಜನರಿಂದ ಹಾಗೂ ಅವರ ಕುಟುಂಬದವರಿಂದ ಗ್ರಾಮದ ಜನರಿಗೆ ದಬ್ಬಾಳಿಕೆ ಮೂಲಕ ಆಸ್ತಿ ಕಬಳಿಕೆ, 1986 ರಿಂದ ಇಲ್ಲಿವರೆಗೆ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈವಾಡವಿಲ್ಲ ಎಂದು ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಮುಂದೆ ಬಂದು ಕಾಯಿ ಒಡೆದು ಪ್ರಮಾಣ ಮಾಡಿ ಹೇಳಲಿ. ಸೌಜನ್ಯಾ ಪೋಷಕರು ಹಾಗೂ ಸೌಜನ್ಯಾ ಪರ ಹೋರಾಟಗಾರರು ಸೌಜನ್ಯಾ ಅತ್ಯಾಚಾರ, ಕೊಲೆ ಮಾಡಿದ ಆರೋಪಿಗಳನ್ನು ಹಿಡಿಯಲು ಸರಕಾರಕ್ಕೆ ಒತ್ತಡ ಹಾಕಿದ್ರೆ ಯಾವ ರೀತಿ ಕ್ಷೇತ್ರದ ಪ್ರಾವಿತ್ರತೆ ಕಡಿಮೆ ಆಗುತ್ತದೆ ಎಂದು ಗೊತ್ತಿಲ್ಲ. ಇಷ್ಟೆಲ್ಲಾ ಸಂದೇಹಗಳ ನಡುವೆ ಕ್ಷೇತ್ರ ಹಾಗೂ ತಮ್ಮ ಕುಟುಂಬದವರ ಹೆಸರನ್ನು ಮಾದ್ಯಮದವರು ಹೆಸರನ್ನು ಹೇಳಬಾರದು ಅಂತ ಕೋರ್ಟ್‌ನಿಂದ ಸ್ಟೇ ತೆಗೆದುಕೊಂಡು ಬಂದಿದ್ದು ಇರುವ ಸಂದೇಹ ಬಲವಾಗಳು ಇನ್ನಷ್ಟು ಪುಷ್ಟಿ ನೀಡಿದೆ. ಸೌಜನ್ಯಳ ಮರು ತನಿಖೆ ನ್ಯಾಯಯುತವಾಗಿ ದಕ್ಷ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಯಬೇಕು ಎಂದು ಅವರು ಅಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನೀತಿ ತಂಡದ ಪ್ರಮುಖರಾದ ಪ್ರಸಾದ್ ಮೂಜೂರು, ರದೀಶ್ ಕಲ್ಲುಗುಡ್ಡೆ, ಶ್ರೀನಿವಾಸ ಇಚ್ಲಂಪಾಡಿ, ವಿನೋದ್ ಗೋಳಿಯಡ್ಕ, ಹಿರಿಯಣ್ಣ ಬಿಳಿನೆಲೆ ಮತ್ತಿತರರು ಉಪಸ್ಥಿತರಿದ್ದರು.