ವಿವೇಕಾನಂದ ಕಾಲೇಜಿನಲ್ಲಿ ಪ್ಲಾಸ್ಮಾ ರಾಷ್ಟ್ರೀಯ ವಿಚಾರ ಸಂಕಿರಣ

0

ಜಗತ್ತಿಗೆ ಅಸಂಖ್ಯಾತ ಸಂಶೋಧಕರನ್ನು ಕೊಟ್ಟ ದೇಶ ಭಾರತ : ಡಾ. ಪ್ರಭಾಕರ್ ಭಟ್ ಕಲ್ಲಡ್ಕ


ಪುತ್ತೂರು: ನಮ್ಮ ಹಿರಿಯರಲ್ಲಿ ವೈಜ್ಞಾನಿಕ ಮನೋಭಾವ ಆಗಲೇ ಇತ್ತು. ಅದು ಇಂದು ಸಂಶೋಧನಾ ರೂಪದಲ್ಲಿ ಜಗತ್ತಿನ ವೈಜ್ಞಾನಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಭಾರತೀಯ ವಿಜ್ಞಾನಿಗಳ ವೈಜ್ಞಾನಿಕ ಸಂಶೋಧನೆ ಅದು ಜಗತ್ತಿನ ಹಿತಕ್ಕಾಗಿ ಆಗಿರುತ್ತದೆ. ಅದರಿಂದ ವಿಜ್ಞಾನಿಗಳ ಮನಸ್ಸಿಗೆ ಸಂತೃಪ್ತತೆ ಸಿಗುತ್ತದೆ. ಚಂದ್ರಯಾನ-3 ರ ಯಶಸ್ಸು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಹೊಸ ಆವಿಷ್ಕಾರದ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳುವಲ್ಲಿ ನಾವು ಸಫಲರಾಗಬೇಕು. ವಿದ್ಯಾರ್ಥಿ ಸಮುದಾಯಕ್ಕೆ ಕಲಿಯಲು ಇಂದು ಹಲವಾರು ಅವಕಾಶಗಳಿವೆ. ಇಂದಿನ ಪ್ಲಾಸ್ಮಾ ತಂತ್ರಜ್ಞಾನ ಕುರಿತಾದ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಪ್ಲಾಸ್ಮಾ ಸಂಶೋಧನಾ ಕೇಂದ್ರ, ಅಹಮದಾಬಾದ್ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಐಕ್ಯುಎಸಿ ಮತ್ತು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ಪ್ಲಾಸ್ಮಾ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.


ಜಿ.ಎಮ್.ಆರ್. ಟಿ ವೀಕ್ಷಣಾಲಯ, ಟಾಟಾ ಮೂಲಭೂತ ಸಂಶೋಧನಾ ಕೇಂದ್ರ ಪೂನಾ ಇದರ ಡೀನ್ ಪ್ರೊ| ಈಶ್ವರಚಂದ್ರ ಸಿ.ಎಚ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮಗೆ ಸಂಶೋಧನೆ ನಡೆಸಲು ಹಲವಾರು ಅವಕಾಶಗಳಿವೆ. ನಾವು ಯಾವುದೇ ಸಂಶೋಧನೆಯನ್ನು ಪ್ರಾರಂಭಿಸಬೇಕಾದರೆ ಮೊದಲು ಅದರ ಮೂಲದಿಂದ ಆರಂಭಿಸಬೇಕು. ಹೊಸ ರೀತಿಯಲ್ಲಿ ಆವಿಷ್ಕಾರವನ್ನು ಮಾಡಬೇಕು. ನಮ್ಮಿಂದ ಯಾವ ಕಾರ್ಯ ಸಾಧ್ಯ ಎಂಬುದನ್ನು ನಾವು ಮೊದಲು ಯೋಚಿಸಬೇಕು, ಅದರಲ್ಲಿ ಮುಂದುವರಿಯಬೇಕು ಎಂದರು. ಪ್ಲಾಸ್ಮಾ ತಂತ್ರಜ್ಞಾನದಿಂದ ಹಲವು ಪ್ರಯೋಜನಗಳಿವೆ. ಇದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮವು ಅಭಿನಂದನಾರ್ಹ ಎಂದವರು ಹೇಳಿದರು.


ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್ ಅಹಮದಾಬಾದ್ ಇದರ ಮುಖ್ಯಸ್ಥ ಡಾ| ಎ.ವಿ. ರವಿಕುಮಾರ್ ದಿಕ್ಸೂಚಿ ಭಾಷಣ ಮಾಡಿ, ಒಂದು ವಸ್ತುವನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಕೋನ ನಮಗೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ನಮಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಸುಮ್ಮನೆ ಇರಬಾರದು. ಬದಲಾಗಿ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ವಿಜ್ಞಾನ ಎಂಬುದು ಆಸಕ್ತಿದಾಯಕ ಮತ್ತು ಕುತೂಹಲದಾಯಕವಾದ ಕ್ಷೇತ್ರವಾಗಿದೆ. ನಾವು ವಿಜ್ಞಾನವನ್ನು ಕಲಿತು ಸಮಾಜಕ್ಕೆ ಏನನ್ನು ಮಾಡಬಹುದು ಎಂಬುದನ್ನು ಯೋಚಿಸಬೇಕು. ಪ್ಲಾಸ್ಮಾತಂತ್ರಜ್ಞಾನದ ಕುರಿತಾಗಿ ಹಲವಾರು ಸಂಗತಿಯನ್ನು ಇಂದಿನ ಪ್ರದರ್ಶನದಲ್ಲಿ ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.


ಕುಮಾರಸ್ವಾಮಿ ಪದವಿಪೂರ್ವ ಕಾಲೇಜು ಸುಬ್ರಮಣ್ಯ ಇದರ ಪ್ರಾಂಶುಪಾಲ ಮತ್ತು ಐ.ಐ.ಎಸ್.ಸಿ ನ ಹಿರಿಯ ವಿದ್ಯಾರ್ಥಿ ಮತ್ತು ಬ್ರಿಟನ್ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾನಿಲಯದ ಸಂಶೋಧಕ ಡಾ| ಸಂಕೀರ್ತನ್ ಹೆಬ್ಬಾರ್ ಪ್ಲಾಸ್ಮಾ ವಸ್ತು ಪ್ರದರ್ಶನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್ ಅಹಮದಾಬಾದ್ ಇದರ ಮುಖ್ಯಸ್ಥ ಡಾ. ಎ.ವಿ ರವಿಕುಮಾರ್‌ರವರನ್ನು ಸನ್ಮಾನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ನಂತರ ವಿಚಾರ ಸಂಕಿರಣ ನಡೆಯಿತು. ಮೂರು ದಿನ ನಡೆಯಲಿರುವ ಪ್ಲಾಸ್ಮಾ ಪ್ರದರ್ಶನಕ್ಕೆ 2000 ಹೆಚ್ಚು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.


ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ.ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಮತ್ತು ಹಿರಿಯ ವಿಜ್ಞಾನಿ ಎಮುಂಜ ಶಂಕರ ಜೋಯಿಸ, ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ| ಶ್ರೀಧರ ಎಚ್.ಜಿ, ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಪ್ರಭಾರ ಪ್ರಾಂಶುಪಾಲ ಡಾ| ಶ್ರೀಧರ್ ನ್ಯಾಕ್ ಬಿ, ಐಕ್ಯುಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ| ವಿಜಯ ಸರಸ್ವತಿ ಸ್ವಾಗತಿಸಿ, ಕಲಾ ವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದುರ್ಗಾರತ್ನ.ಸಿ ವಂದಿಸಿ, ಸ್ನಾತಕೋತ್ತರ ವಿಭಾಗದ ಗಣಿತಶಾಸ್ತ್ರ ಉಪನ್ಯಾಸಕಿ ನಮೃತಾ ಕೆ.ಎನ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here