ರೂ.1,77,67,340.60 ವ್ಯವಹಾರ ,ರೂ.2,22,662.70 ನಿವ್ವಳ ಲಾಭ – 69 ಪೈಸೆ ಬೋನಸ್ ,ಶೇ.10 ಡಿವಿಡೆಂಡ್
ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಆ.31ರಂದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಅಭಿವೃದ್ಧಿ ಕುರಿತಾಗಿ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಮಾತನಾಡಿ, ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಕುರಿತಂತೆ ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಸಂಘದ ಕಟ್ಟಡ ನಿರ್ಮಾಣಕ್ಕೆ ಮಿತ್ರಾ ಜೈನ್ ಅವರು ಪರಣೆಯಲ್ಲಿ ಜಾಗ ನೀಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಸಭೆಯ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡರು. ಸದಸ್ಯ ವಸಂತ ಗೌಡ ಮಾತನಾಡಿ, ಸಂಘದ ಹೆಸರಿನಲ್ಲಿ ಆರ್.ಟಿ.ಸಿ.ಆಗುವುದಾದರೆ ಮುಂದುವರಿಯಬಹುದು. ಇಲ್ಲದಿದ್ದಲ್ಲಿ ಸಮಸ್ಯೆಯಾಗಬಹುದು.ಕಟ್ಟಡ ನಿರ್ಮಾಣ ಕುರಿತಂತೆ ಅನುದಾನ ಬಾರದಿದ್ದರೆ ಕಷ್ಟ ಎಂದರು. ಸದಸ್ಯ ಕೇಶವ ಗೌಡ ಅಮೈ ಮಾತನಾಡಿ, ಪಶು ಆಹಾರಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೂ ಈಗಿನ ಪಶು ಆಹಾರದಲ್ಲಿ ಗುಣಮಟ್ಟ ಇಲ್ಲ. ಜಾನುವಾರುಗಳು ತಿನ್ನುತ್ತಿಲ್ಲ ಎಂದರು. ಈಗಿರುವ ಹಾಲಿನ ಬೆಲೆಯಲ್ಲಿ ಹೈನುಗಾರಿಕೆ ಕಷ್ಟಕರ.ಈ ನಿಟ್ಟಿನಲ್ಲಿ ಬೆಲೆ ಏರಿಸಬೇಕು ಎಂದರು. ಉತ್ತರಿಸಿದ ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಕೆ. ಮಾತನಾಡಿ, ಪಶು ಆಹಾರದಲ್ಲಿ ಗುಣಮಟ್ಟ ಕೊರತೆ ಇದ್ದರೆ ದೂರು ನೀಡಬಹುದು. ಹಾಲಿನ ಬೆಲೆ ಏರಿಕೆ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವುದು ಎಂದರು.
ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಚರಣ್ ಅವರು, ಜಾನುವಾರುಗಳ ಆರೈಕೆ ಹಾಗೂ ಜಾನುವಾರುಗಳಿಗೆ ಬರುವ ರೋಗಗಳ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು. ಎಲ್ಲಾ ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಶ್ರಯದಲ್ಲಿ ಜಾನುವಾರುಗಳಿಗೆ ವಿಮಾ ಯೋಜನೆ ಇದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅವರು ವರದಿ ಸಾಲಿನಲ್ಲಿ ಸಂಘವು ರೂ.1,77,67,340.60 ವ್ಯವಹಾರ ಮಾಡಿದ್ದು ,ರೂ.2,22,662.70 ನಿವ್ವಳ ಲಾಭ ಗಳಿಸಿದೆ.ಲೀಟರ್‌ಗೆ 69 ಪೈಸೆ ಬೋನಸ್ ನೀಡಲಾಗುವುದು, ಶೇ.10 ಡಿವಿಡೆಂಡ್ ನೀಡಲಾಗುವುದು.ಸಂಘದ ಬೆಳವಣಿಗೆಗಾಗಿ ಗುಣಮಟ್ಟದ ಹಾಲು ಪೂರೈಸಬೇಕು. ಹೆಚ್ಚು ಹಾಲು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಪ್ರಥಮ ಸ್ಥಾನ ಪಡೆದ ಪ್ರಕಾಶ್ ಪೂಜಾರಿ, ದ್ವಿತೀಯ ಸುರೇಶ್ ಬಂಬಿಲದೋಳ,ಜಯಪ್ರಕಾಶ್ ಎನ್.ಆರ್.ತೃತೀಯ ಬಹುಮಾನ ಪಡೆದು ಕೊಂಡರು. ವರದಿ ವರ್ಷದಲ್ಲಿ ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಸ್ಟೀಲ್ ಪಾತ್ರೆ ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ, ನಿರ್ದೇಶಕರಾದ ಅನ್ನಪೂರ್ಣ ಪ್ರಸಾದ್ ರೈ ,ಶ್ರೀಮತಿ ಕುಸುಮಾ ಎ.,ಗಣೇಶ್ ನಾಯ್ಕ, ವಿಠಲ ಶೆಟ್ಟಿ, ಭಾಸ್ಕರ ರೈ ಕುಂಜಾಡಿ,ಶ್ರೀಮತಿ ಇಂದಿರಾ ಬಿ.ಕೆ ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಕೋಮಲ ಅವರು ವರದಿ ವಾಚಿಸಿದರು.ಹಾಲು ಪರೀಕ್ಷಕಿ ವಿಮಲ ಸಹಕರಿಸಿದರು.ಸಂಘದ ನಿರ್ದೇಶಕಿ ಇಂದಿರಾ ಬಿ.ಕೆ.ಸ್ವಾಗತಿಸಿ ,ಉಪಾಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ವಂದಿಸಿದರು. ನಿರ್ದೇಶಕ ಅನ್ನಪೂರ್ಣ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.