ಆರ್ಯಾಪು ಗ್ರಾಮ ಸಭೆ – ಶಾಲೆ,ಅಂಗನವಾಡಿಗಳಿಗೂ ಉಚಿತ ವಿದ್ಯುತ್ ನೀಡಲು ಗ್ರಾಮಸ್ಥರ ಆಗ್ರಹ – ಸರಕಾರಕ್ಕೆ ಬರೆಯಲು ನಿರ್ಣಯ

0

ಪುತ್ತೂರು: ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಶಾಲೆಗಳಿಗೂ ಸರಕಾರ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಆರ್ಯಾಪು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಭೆಯು ಅಧ್ಯಕ್ಷೆ ಗೀತಾ ಹೆಚ್.ಅವರ ಅಧ್ಯಕ್ಷತೆಯಲ್ಲಿ ಆ.28ರಂದು ಆರ್ಯಾಪು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.ಸಮೂಹ ಶಿಕ್ಷಣ ಸಂಪನ್ಮೂಲ ಕೇಂದ್ರದ ಓಬಲೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ರಾಜ್ಯ ಸರಕಾರದ ಗ್ಯಾರಂಟಿಯಾಗಿ ಪ್ರತಿ ತಿಂಗಳು 200 ಯೂನಿಟ್ ತನಕ ಗೃಹಬಳಕೆ ವಿದ್ಯುತ್ ಉಚಿತ ನೀಡುತ್ತಿರುವ ಯೋಜನೆ ಕುರಿತು ಸಭೆಯಲ್ಲಿ ಪ್ರಸ್ತಾಪವಾಗಿ, ಸರಕಾರ ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೂ ಉಚಿತ ವಿದ್ಯುತ್ ನೀಡಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ವ್ಯಕ್ತವಾಯಿತು.ಈ ಕುರಿತು ಸರಕಾರಕ್ಕೆ ಬರೆದುಕೊಳ್ಳಲು ನಿರ್ಣಯಿಸಲಾಯಿತು.

ಚಂದ್ರಯಾನ-3 ಯಶಸ್ವಿಯಾದರೂ ನಮ್ಮಲ್ಲಿಗೆ ರಸ್ತೆ ಸಂಪರ್ಕವಿಲ್ಲ:
ಲಕ್ಷಾಂತರ ಕಿ.ಮೀ ದೂರದಲ್ಲಿರುವ ಚಂದ್ರಯಾನ-3 ಯಶಸ್ವಿಯಾಗಿದೆ.ಆದರೆ ಒಳತ್ತಡ್ಕದಲ್ಲಿ ಮುಖ್ಯರಸ್ತೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಅಂಗನವಾಡಿ, ಕಾಲೋನಿಗೆ ರಸ್ತೆ ಸಂಪರ್ಕವಾಗಿಲ್ಲ. ರಸ್ತೆ ಸಂಪರ್ಕ ಕಲ್ಪಿಸಲು ಇಲ್ಲಿಗೆ ಯಾವ ವಿಜ್ಞಾನಿಗಳು ಬರಬೇಕು ಎಂದು ಗ್ರಾಮಸಭೆಯಲ್ಲಿ ಪ್ರಶ್ನಿಸಿದ ಗ್ರಾಮಸ್ಥರೋರ್ವರು,ಮುಂದಿನ ಗ್ರಾಮಸಭೆ ಮುಂಚಿತವಾಗಿ ಸಮಸ್ಯೆ ಪರಿಹರಿಸದಿದ್ದರೆ ಗ್ರಾಮ ಸಭೆಯಲ್ಲಿ ಧರಣಿ ನಡೆಸುವುದಾಗಿ ಗ್ರಾಮಸ್ಥ ರಾಮ್‌ಪ್ರಸಾದ್ ಎಂಬವರು ಎಚ್ಚರಿಸಿದರು.
ಒಳತ್ತಡ್ಕದಲ್ಲಿರುವ ಅಂಗನವಾಡಿ ಹಾಗೂ ಅಲ್ಲಿನ ಕಾಲೊನಿಯ ರಸ್ತೆ ಸಮಸ್ಯೆ ಬಗ್ಗೆ ಈ ಹಿಂದೆ ಹಲವು ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಿ, ಒತ್ತಾಯಿಸಲಾಗಿದ್ದರೂ ಸಮಸ್ಯೆ ಈ ತನಕ ಪರಿಹಾರವಾಗಿಲ್ಲ. ದೂರದ ಚಂದ್ರಯಾನವನ್ನು ಯಶಸಸ್ವಿಯಾಗಿ ಮಾಡಲು ಸಾಧ್ಯವಾಗಿದೆ. ಆದರೂ ಸಣ್ಣ ರಸ್ತೆ ಸಂಪರ್ಕಕ್ಕೆ ಸಾಧ್ಯವಾಗದೇ ಇರುವುದು ದರುಂತ. ಇಲ್ಲಿನ ಜಾಗವು ಖಾಸಗಿಯವರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾಗಿದೆ. ಆದರೆ ಸಾರ್ವಜನಿಕ ರಸ್ತೆಗೆ ಜಾಗ ಬಿಡಬೇಕು ಎಂಬ ನಿಯಮ, ಷರತ್ತುಗಳೊಂದಿಗೆ ಹಕ್ಕುಪತ್ರ ನೀಡಲಾಗಿದ್ದರೂ ಅವರು ರಸ್ತೆಗೆ ಜಾಗ ಬಿಡುತ್ತಿಲ್ಲ. ಇದಕ್ಕೆ ಪರಿಹಾರ ಕಲ್ಪಿಸುವಂತೆ ನಾನು ಹಲವು ಗ್ರಾಮ ಸಭೆಗಳಲ್ಲಿ ಆಗ್ರಹಿಸಿದ್ದೇನೆ.ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ನಾನು ನನ್ನ ಅಪ್ಪನ ಮನೆಗೆ ರಸ್ತೆ ಕೇಳುತ್ತಿಲ್ಲ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದ. ಮುಂದಿನ ಗ್ರಾಮ ಸಭೆಗೆ ಮುಂಚಿತವಾಗಿ ರಸ್ತೆ ನಿರ್ಮಿಸಬೇಕು. ಇದು ಡೆಡ್‌ಲೈನ್. ಆಗದಿದ್ದರೆ ಮುಂದಿನ ಗ್ರಾಮಸಭೆಯಲ್ಲಿ ಚಾಪೆ ಹಾಕಿ ಮಲಗಿ ಧರಣಿ ನಡೆಸುವುದಾಗಿ ರಾಮ್‌ಪ್ರಸಾದ್ ಎಚ್ಚರಿಸಿದರು.ಸದರಿ ಸಮಸ್ಯೆ ಪರಿಹಾರವು ಪಂಚಾಯತ್‌ನ ಹಂತದಲ್ಲಿಲ್ಲ.ಕಂದಾಯ ಇಲಾಖೆಗೆ ಸಂಬಂಧಿಸಿದೆ.ಹೀಗಾಗಿ ತಹಶೀಲ್ದಾರ್‌ಗೆ ಬರೆಯುವುದಾಗಿ ಪಿಡಿಓ ನಾಗೇಶ್‌ರವರು ಸ್ಪಷ್ಟಪಡಿಸಿದರು.

ಸೌಜನ್ಯ ಹಂತಕರಿಗೆ ಗಲ್ಲು ಶಿಕ್ಷಯಾಗಬೇಕು:
ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆಯಾಗಿ 11 ವರ್ಷ ಕಳೆದರೂ ಇನ್ನೂ ನೈಜ ಆರೋಪಿಗಳ ಪತ್ತೆಯಾಗಿಲ್ಲ. ಅಮಾಯಕಿಯ ಕೊಲೆ ನಡೆದರೂ ಇಲಾಖೆ ದೊಡ್ಡ ಲಾಭಿಗೆ ಮಣಿಯುವುದಾದರೆ ಅದು ನಮ್ಮ ದುರಂತವಾಗಿದೆ. ನೈಜ ಆರೋಪಿಗಳನ್ನು ಪತ್ತೆ ಮಾಡಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥ ರಾಮ್‌ಪ್ರಸಾದ್ ಆಗ್ರಹಿಸಿದರು. ಪುತ್ತೂರಿನಲ್ಲಿ ಸೌಮ್ಯ ಭಟ್ ಕೊಲೆಯಾಗಿಯೂ ಹಲವು ವರ್ಷಗಳು ಕಳೆದಿದೆ. ಅವರ ಸಾವಿಗೂ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥ ಸನತ್ ರೈ ಆಗ್ರಹಿಸಿದರು. ಇವರಷ್ಟೇ ಅಲ್ಲದೆ ಹಲವು ಮಹಿಳೆಯರ ಸಾವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಯಾಗುವ ಅವಶ್ಯಕತೆಯಿದೆ ಎಂದು ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.

ಅಕ್ರಮ-ಸಕ್ರಮದಲ್ಲೂ ಅಕ್ರಮ-ತನಿಖೆಗೆ ಒತ್ತಾಯ:
ನಗರ ಸಭಾ ವ್ಯಾಪ್ತಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮಕ್ಕೆ ಅವಕಾಶವಿಲ್ಲದೇ ಇದ್ದರೂ ಆರ್ಯಾಪುನಲ್ಲಿ ಅಕ್ರಮವಾಗಿ ಹಕ್ಕು ಪತ್ರ ನೀಡಲಾಗಿದೆ.ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ಒತ್ತಾಯಿಸಿದರು.ಇಂತಹ ಯಾವುದೇ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ.ನಿರ್ಧಿಷ್ಟ ಪ್ರಕರಣಗಳಿದ್ದರೆ ಮಾಹಿತಿ ನೀಡಿದರೆ ಅವುಗಳನ್ನು ತನಖೆ ನಡೆಸಲಾಗವುದು ಎಂದು ಗ್ರಾಮ ಆಡಳಿತಾಧಿಕಾರಿ ಅಶ್ವಿನಿಯವರು ತಿಳಿಸಿದರು.ಅಕ್ರಮ ಸಕ್ರಮದಲ್ಲಿ ಅಕ್ರಮವಾಗಿದ್ದರೆ ಅವುಗಳ ಕುರಿತು ತನಿಖೆ ನಡೆಸುವಂತೆ ನಿರ್ಣಯಕೈಗೊಳ್ಳಲಾಯಿತು.

ಒಳತ್ತಡ್ಕ-ಸಂಪ್ಯ ರಸ್ತೆ ಡಾಮರ್ ಡಮಾರ್:
ಪಂಚಾಯತ್ ವ್ಯಾಪ್ತಿಯ ಒಳತ್ತಡ್ಕ-ಸಂಪ್ಯ ಸಂಪರ್ಕ ರಸ್ತೆಗೆ ರೂ.50 ಲಕ್ಷ ವೆಚ್ಚದಲ್ಲಿ ಹಾಕಲಾಗಿರುವ ಡಾಮರ್ ಎದ್ದು ಹೋಗಿದ್ದು ಡಾಮರ್ ಡಮಾರ್ ಆಗಿದೆ.ಗುತ್ತಿಗೆದಾರರು ಅದನ್ನು ಸಮಪರ್ಕವಾಗಿ ನಿರ್ವಹಣೆ ಮಾಡಿಲ್ಲ. ಇದರ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು.ಇದರಲ್ಲಿ ಹಣ ತಿಂದವರನ್ನು ವಾಂತಿ ಮಾಡಿಸುವುದಾಗಿ ಗ್ರಾಮಸ್ಥ ರಾಮ್‌ಪ್ರಸಾದ್ ಹೇಳಿದರು.
ಬೇಸಿಗೆಯಲ್ಲಿ ಬೆಂಕಿ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಮೆಸ್ಕಾಂನಿಂದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುವಾಗ ಅದರ ತಳಭಾಗಕ್ಕೆ ಕಾಂಕ್ರೀಟ್ ಅಳವಡಿಸಬೇಕು ಹಾಗೂ ಟ್ರಾನ್ಸ್‌ಫಾರ್ಮರ್‌ನಿಂದ ಕನಿಷ್ಠ ಇಪ್ಪತ್ತು ಮೀಟರ್ ದೂರದ ಮರಗಳನ್ನು ತೆರವುಗೊಳಿಸಬೇಕು ಎಂದು ಸದಸ್ಯ ಪುರುಷೋತ್ತಮ ರೈ ಆಗ್ರಹಿಸಿದರು.

ನೆಟ್‌ವರ್ಕ್ ಸಮಸ್ಯೆ;
ಒಳತ್ತಡ್ಕ ಭಾಗದಲ್ಲಿ ಬಿಎಸ್‌ಎನ್‌ಎಲ್ ಟವರ್ ಮಾತ್ರವೇ ಇದ್ದು ಅದು ವಿದ್ಯುತ್ ಇರುವ ಸಂದರ್ಭದಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದೆ. ವಿದ್ಯುತ್ ಕಡಿತವಾದಾಗ ನಿಷ್ಕ್ರಿಯವಾಗುತ್ತದೆ. ಇದರಿಂದಾಗಿ ಈ ಭಾಗದಲ್ಲಿ ನೆಟ್‌ವರ್ಕ್ ಸಮಸೆಯಿದ್ದು ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕಾಗಿ ಗ್ರಾಮಸ್ಥರು ಬಹಳಷ್ಟು ಸಂಕಷ್ಟ ಅನುಭವಿಸುವಂತಾಗಿದೆ.ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಡಿತ ಅಧಿಕವಾಗುತ್ತಿದ್ದು ಜನ ತೀರಾ ಸಂಕಷ್ಟ ಎದುರಿಸುವಂತಾಗಿದೆ.ಹೀಗಾಗಿ ಇಲ್ಲಿಗೆ ಬದಲಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥ ನವೀನ್‌ರವರು ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳು:
ಕಲ್ಲರ್ಪೆಯಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿದ್ದು ಅಲ್ಲಿ ಬೀದಿ ದೀಪ, ಸಿಸಿ ಕ್ಯಾಮರಾ ಅಳವಡಿಸಬೇಕು.ಖಾಸಗಿ ಜಾಗ, ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಎಚ್.ಟಿ ಲೈನ್ ಸ್ಥಳಾಂತರಿಸಬೇಕು.ಕುರಿಯಕ್ಕೆ ಮಧ್ಯಾಹ್ನದ ವೇಳೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು.ಹಿಂದೆ ಇದ್ದ ಕಾಲುದಾರಿಗಳನ್ನು ಊರ್ಜಿತಗೊಳಿಸಬೇಕು.ಪ್ಲಾಸ್ಟಿಕ್ ಬಳಕೆ ನಿಷೇಧಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು.

ಸನ್ಮಾನ, ಗೌರವ ಗ್ರಾಮ ಪುರಸ್ಕಾರ:
ಸಭೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಬಾಲ ಯೋಗ ಸಾಧಕಿ ಆರಾಧ್ಯ ಎ.ರೈಯವರಿಗೆ ಗೌರವ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಯಿತು.ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ಕೆ ಹಾಗೂ ಉಪಾಧ್ಯಕ್ಷೆ ಪೂರ್ಣಿಮಾ ರೈಯವರನ್ನು ಸನ್ಮಾನಿಸಲಾಯಿತು.ಉಪಾಧ್ಯಕ್ಷ ಅಶೋಕ್ ಕುಮಾರ್ ಎನ್., ಸದಸ್ಯರಾದ ಸರಸ್ವತಿ ಕೆ., ಪೂರ್ಣಿಮಾ ರೈ, ವಸಂತ ಶ್ರೀದುರ್ಗಾ, ದೇವಕಿ, ಸುಬ್ರಹ್ಮಣ್ಯ ಬಲ್ಯಾಯ, ಶ್ರೀನಿವಾಸ ರೈ, ರತ್ನಾವತಿ, ಹರೀಶ್ ನಾಯಕ್, ಯತೀಶ್ ದೇವ, ನಳಿನಿ ಕುಮಾರಿ, ರಶೀದಾ ಬಿ., ರಕ್ಷಿತಾ, ನಾಗೇಶ, ಕಲಾವತಿ, ಯಾಕೂಬ್, ಸುಲೈಮಾನ್, ಚೇತನ್, ಕಸ್ತೂರಿ, ಪವಿತ್ರ ರೈ ಬಿ. ಹಾಗೂ ರೇವತಿ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಓ ನಾಗೇಶ್ ಎಂ ಸ್ವಾಗತಿಸಿದರು, ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಕವನದ ಮೂಲಕ ಆಡಳಿತವನ್ನು ಕೊಂಡಾಡಿದ ಮಾರ್ಗದರ್ಶಿ ಅಧಿಕಾರಿ ಗ್ರಾಮಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿಯಾಗಿದ್ದ ಓಬಲೇಶ್‌ರವರು, ತನ್ನ ಭಾಷಣದ ವೇಳೆಗೆ ಪಂಚಾಯತ್‌ನ ಆಡಳಿತ, ಅಭಿವೃದ್ಧಿ ಕಾರ್ಯಗಳು, ಗ್ರಾಮ ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಗ್ರಾಮಸ್ಥರ ಪ್ರಶ್ನೆಗಳು, ಅದಕ್ಕೆ ಸಮರ್ಪಕವಾದ ಉತ್ತರ ನೀಡುವ ಆಡಳಿತ ವರ್ಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿಯೇ ಕವನವೊಂದನ್ನು ರಚಿಸಿ ಅದನ್ನು ಹಾಡುವ ಮೂಲಕ ಗ್ರಾಮ ಪಂಚಾಯತ್‌ನ ಆಡಳಿತ ವೈಖರಿಯನ್ನು ಅವರು ಹಾಡಿ ಕೊಂಡಾಡಿದರು. ಅವರ ಹಾಡಿನ ತಾಳಕ್ಕೆ ಸರಿಯಾಗಿ ಗ್ರಾಮಸ್ಥರೂ ಚಪ್ಪಾಳೆ ತಟ್ಟಿ ಸಾಥ್ ನೀಡಿದರು. ಅವಕಾಶ ದೊರೆತರೆ ಮುಂದಿನ ಗ್ರಾಮ ಸಭೆಗೂ ಮಾರ್ಗದರ್ಶಿ ಅಧಿಕಾರಿಯಾಗಿ ತಾನೇ ಬರುವುದಾಗಿ ಓಬಲೇಶ್ ತಿಳಿಸಿದರು.

LEAVE A REPLY

Please enter your comment!
Please enter your name here