ರೂ.2.18 ಲಕ್ಷ ಲಾಭ, ಶೇ.25 ಡಿವಿಡೆಂಡ್, 53 ಪೈಸೆ ಬೋನಸ್
ಪುತ್ತೂರು: ಪಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.31ರಂದು ಸಂಘದ ಆವರಣದಲ್ಲಿ ಉಪಾಧ್ಯಕ್ಷ ಸುರೇಂದ್ರ ಆಟಿಕ್ಕುರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘವು ವರದಿ ವರ್ಷದಲ್ಲಿ 1,93,611.20ಲೀ ಹಾಲನ್ನು ರೈತರಿಂದ ಸಂಗ್ರಹಿಸಿದೆ. ಇದರಲ್ಲಿ 8093.50 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದ್ದು 3,56,417.20 ಆದಾಯ ಬಂದಿರುತ್ತದೆ. ಒಟ್ಟು ಹಾಲು ವ್ಯಾಪಾರದಿಂದ ರೂ.6,72,412.12 ಆದಾಯ ಬಂದಿರುತ್ತದೆ. ಇತರ ಮೂಲಗಳಿಂದ ರೂ.93,066.94 ಆದಾಯ ಬಂದಿರುತ್ತದೆ. ಆಡಳಿತಾತ್ಮಕ ವೆಚ್ಚಗಳನ್ನು ಕಳೆದು ರೂ.2,18,080.73 ನಿವ್ವಳ ಲಾಭ ಗಳಿಸಿದೆ. ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ. ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲಿಟರ್ ಹಾಲಿಗೆ 53 ಪೈಸೆ ಬೋನಸ್ ನೀಡಲಾಗವುದು ಎಂದು ಕಾರ್ಯದರ್ಶಿ ಚಂದ್ರಾವತಿ ಮಾಹಿತಿ ನೀಡಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಒಕ್ಕೂಟದಿಂದ ಹೈನಗಾರರಿಗೆ ದೊರೆಯುವ ಸೌಲಭ್ಯಗಳು ರಾಸುಗಳ ಪಾಲ, ಪೋಷಣೆಯ ಬಗ್ಗೆ ಮಾಹಿತಿ ನೀಡಿದರು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಪ್ರೇಮ(ಪ್ರ), ಸುಶೀಲಾ(ದ್ವಿ), ರಾಮಣ್ಣ ಗೌಡ(ತೃ) ಬಹುಮಾನ ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.
ನಿರ್ದೇಶಕರಾದ ನಾರಾಯಣ ಗೌಡ ಕೆ., ಹೊನ್ನಪ್ಪ ಗೌಡ ಕೆ., ಗೋಪಾಲಕೃಷ್ಣ ಕುಂಬಾಡಿ, ಸುಧಾಕರ ದೇಂತಡ್ಕ, ಹೇಮಲತಾ ಎಸ್., ಹರಿಣಾಕ್ಷಿ, ಲೀಲಾವತಿ ಬೇರಿಕೆ ಹಾಗೂ ಪ್ರೇಮ ಕೊಡಂಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಲು ಪರೀಕ್ಷಕಿ ಲತಾ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.