ಒಂದೇ ಅಂಗಣದಲ್ಲಿ ಎರಡು ಶಿವನ ಗರ್ಭಗುಡಿ ಇರುವುದು ಇಲ್ಲಿನ ವೈಶಿಷ್ಟ್ಯ..
ಶ್ರಾವಣ ಶನಿವಾರ ವಿಶೇಷ ತೀರ್ಥ ಸ್ನಾನ ಇಲ್ಲಿನ ವಿಶೇಷತೆ..
ಬರಹ: ಸುಧಾಕರ್ ಕಾಣಿಯೂರು
ಕಾಣಿಯೂರು : ಇತಿಹಾಸ ಪ್ರಸಿದ್ದ, ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಮೂಲಕ ಚಾಲನೆಯೂ ಸಿಕ್ಕಿದೆ. ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವ ಇಲ್ಲಿನ ವೈಶಿಷ್ಟ್ಯ ಒಂದಾದರೆ.. ಪ್ರತಿ ಶ್ರಾವಣ ಶನಿವಾರ ವಿಶೇಷ ತೀರ್ಥ ಸ್ನಾನವು ಇಲ್ಲಿನ ವಿಶೇಷತೆಯನ್ನು ಹೊಂದಿದೆ.
ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವುದು ಇಲ್ಲಿನ ವೈಶಿಷ್ಟ್ಯ:
ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನವಾಗಿರುವ ಕುರಿತು ದೇವಸ್ಥಾನದಲ್ಲಿ ಹಳೆಕನ್ನಡದಲ್ಲಿ ಬರೆದಿರುವ ಶಿಲಾಶಾಸನಗಳಿವೆ. ,ದೇವಸ್ಥಾನ ನಿರ್ಮಾಣವಾಗಿರುವ ಕುರುಹುಗಳನ್ನು ತಜ್ಞರಿಂದ ಓದಿಸಲಾಗಿದ್ದು ಅವುಗಳಲ್ಲಿ ಈ ಮಾಹಿತಿ ಅಡಕವಾಗಿದೆ. ಇನ್ನೊಂದು ಮೂಲದ ಪ್ರಕಾರ ಶ್ರೀ ಕೃಷ್ಣನ ಪರಮಭಕ್ತರಾದ ಪಾಂಡವರು ವನವಾಸದ ವೇಳೆಯಲ್ಲಿ ಈ ಊರಿಗೆ ಬಂದಾಗ ತಮ್ಮ ನಿತ್ಯಾರಾಧನೆಗೆ ಈ ಐದು ಲಿಂಗಗಳ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯದ ಒಂದೇ ಅಂಗಣದಲ್ಲಿ ಎರಡು ದೇವಾಲಯಗಳು ಇವೆ. ಒಂದು ಪಂಚಲಿಂಗೇಶ್ವರ ದೇವಾಲಯ, ಇನ್ನೊಂದು ಕೇಪುಳೇಶ್ವರ ದೇವಾಲಯವಿದೆ.ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವ ಶಿವನ ದೇವಸ್ಥಾನ ಇರುವುದು ಇಲ್ಲಿನ ವೈಶಿಷ್ಟ್ಯ. ದೇವರಿಗೆ ನಿತ್ಯ ಪೂಜೆ ನಡೆಯುತ್ತಿದ್ದು, ದೇವಸ್ಥಾನದ ಅನುವಂಶೀಯ ಮೊಕ್ತೇಸರರು, ಪ್ರಧಾನ ಅರ್ಚಕರು ಆಗಿರುವ ಜನೇಶ್ ಭಟ್ ಬರೆಪ್ಪಾಡಿ ಅವರು ಪೂಜೆ ನಡೆಸುತ್ತಿದ್ದಾರೆ. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಸದಸ್ಯರು, ಊರವರು ನಿತ್ಯ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ರೂ 10 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣದ ಚಿಂತನೆ :
ಹೀಗೆ ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನದ ಸುತ್ತುಪೌಳಿ, ನಮಸ್ಕಾರ ಮಂಟಪ, ಎರಡೂ ದೇವರ ಗರ್ಭಗುಡಿಯು ಅಂದಾಜು ರೂ 10 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಕುರಿತು ಸಮಿತಿಯವರು ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ಬೈಲುವಾರು ಸಮಿತಿಗಳನ್ನು ರಚಿಸಿಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರಾವಣ ಶನಿವಾರದಂದು ವಿಶೇಷ ತೀರ್ಥ ಸ್ನಾನ: ಕ್ಷೇತ್ರದ ಮುಂಭಾಗದಲ್ಲಿ ತೀರ್ಥ ಬಾವಿಯಿದೆ. ಈ ತೀರ್ಥಬಾವಿಯ ಹಿಂದೆಯೂ ಇನ್ನೊಂದು ಐತಿಹ್ಯವಿದೆ. ಶ್ರಾವಣ ಶನಿವಾರದಂದು ವಿಶೇಷ ತೀರ್ಥ ಸ್ನಾನ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಲ್ಲಿನ ತೀರ್ಥ ಬಾವಿಯನ್ನು ಭೀಮಸೇನ ತನ್ನ ಕಿರು ಬೆರಳೂರಿ ನಿರ್ಮಿಸಿದನೆಂದು ಪ್ರತೀತಿ ಇರುವುದರಿಂದ ಇದು ಗಂಗೆಯಷ್ಟೆ ಪಾವಿತ್ರ್ಯತೆಯನ್ನು ಹೊಂದಿದೆ. ಬೇರೆ ಬೇರೆ ಕಡೆಗಳಿಂದ ಹಲವಾರು ಮಂದಿ ಭಕ್ತರು ಇಲ್ಲಿಗೆ ಬಂದು ತೀರ್ಥ ಸ್ನಾನ ಮಾಡಿಕೊಂಡು ಹೋಗುವುದು ಇಲ್ಲಿನ ವಿಶೇಷತೆ. ಈ ಬಾವಿಯ ತೀರ್ಥ ಸ್ನಾನ ಮಾಡಿದರೆ ಕುದಿಜ್ವರ, ಕೆಡುಗಳು ಗುಣವಾಗುವುದೆಂದೂ ನಂಬಿಕೆ ಇದೆ. ಮಕ್ಕಳಿಲ್ಲದವರು ರಂಗಪೂಜೆ ಹರಕೆ ಹೇಳಿ ಸಂತಾನ ಪ್ರಾಪ್ತಿಯಾದ ನಿದರ್ಶನಗಳಿವೆ. ಶ್ರಾವಣ ಶನಿವಾರ ಪ್ರತಿದಿನ ಬೆಳಿಗ್ಗೆ ಗಂಟೆ 7ರಿಂದ ತೀರ್ಥ ಸ್ನಾನ ಪ್ರಾರಂಭವಾಗುತ್ತದೆ.
ನಿತ್ಯ ದೇಗುಲದಲ್ಲಿ ಕರಸೇವೆ:
ಐತಿಹಾಸಿಕ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸ್ವಾಮೀಜಿಯವರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನಡೆದಿದ್ದು, ಬಳಿಕ ನಿತ್ಯ ಊರ, ಪರವೂರ ಹಲವಾರು ಭಕ್ತರು ದೇಗುಲದಲ್ಲಿ ಕರಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ವಿಠಲ ಗೌಡ ಬರೆಪ್ಪಾಡಿ, ಸದಸ್ಯರಾಗಿ ಐತ್ತಪ್ಪ ಗೌಡ ಕುವೆತ್ತೋಡಿ, ಜತ್ತಪ್ಪ ರೈ ಬರೆಪ್ಪಾಡಿ, ಶ್ರೀಧರ ಗೌಡ ಕೊಯಕ್ಕುಡೆ, ರಮೇಶ್ ಕೆ.ಎನ್ ಕಾರ್ಲಾಡಿ, ನಿರ್ಮಲಾ ಕೇಶವ ಗೌಡ ಅಮೈ, ಪುಷ್ಪಲತಾ ದರ್ಖಾಸು, ಯಶೋಧ ಎರ್ಕಮೆ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಊರವರು ನಿತ್ಯ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಶಕ್ತಿ ಮೀರಿ ಪಾಲ್ಗೊಳ್ಳುತ್ತಿದ್ದಾರೆ.
ಶಿವ ಪಂಚಾಕ್ಷರಿ ಮಂತ್ರ, ಭಜನಾ ಕಾರ್ಯಕ್ರಮ:
ಬರೆಪ್ಪಾಡಿ ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ಪ್ರತಿ ಸೋಮವಾರ ಶಿವ ಪಂಚಾಕ್ಷರಿ ಮಂತ್ರ, ಓಂ ನಮಃ ಶಿವಾಯ ಮತ್ತು ಭಜನಾ ಕಾರ್ಯಕ್ರಮವು ನಡೆಯುತ್ತಿದೆ. ದೇವಸ್ಥಾನಲ್ಲಿ ೨೩ ವರ್ಷಗಳಿಂದ ಸಾಮೂಹಿಕ ಶಿವರಾತ್ರಿ ಉತ್ಸವ ನಡೆಯುತ್ತಿದೆ.
ಸರ್ವರ ಸಹಕಾರದೊಂದಿಗೆ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ
ಅತ್ಯಂತ ಪುರಾತನ ಮತ್ತು ಇತಿಹಾಸವನ್ನು ಹೊಂದಿರುವ ಕ್ಷೇತ್ರವಾದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಸರ್ವರ ಸಹಕಾರದೊಂದಿಗೆ ನಡೆಯುತ್ತಿದ್ದು, ಅಂದಾಜು ರೂ 10ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಚಿಂತಿಸಲಾಗಿದೆ. ಕ್ಷೇತ್ರದಲ್ಲಿ ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವುದು ವೈಶಿಷ್ಟ್ಯವನ್ನು ಹೊಂದಿದೆ. ಅಲ್ಲದೇ ಪ್ರತಿ ಶ್ರಾವಣ ಶನಿವಾರ ವಿಶೇಷ ತೀರ್ಥ ಸ್ನಾನದಲ್ಲಿ ಸಾವಿರಾರು ಮಂದಿ ಭಕ್ತರು ತೀರ್ಥಸ್ನಾನ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.-