ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯು ಗ್ರಾ.ಪಂ.ಸಭಾಮನಗಣದಲ್ಲಿ ನೂತನ ಅಧ್ಯಕ್ಷರಾದ ಮೋಹಿನಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪ.ಜಾತಿ /ಪ.ಪಂಗಡದ ಫಲಾನುಭವಿಗಳು ಸೌಲಭ್ಯಗಾಗಿ ಅರ್ಜಿ ಸಲ್ಲಿಸಿದ್ದು ಎಲ್ಲಾ ಫಲಾನುಭವಿಗಳ ಸಭೆ ಕರೆದು ಅವಶ್ಯಕತೆಗನುಗುಣವಾಗಿ ಅನುದಾನ ಮಂಜೂರು ಮಾಡುವ ಬಗ್ಗೆ ನಿರ್ಣಯಿಸಲಾಯಿತು. ನಿವೇಶನ ಮಂಜೂರಾತಿಗೆ ಕೋರಿ ಈ ಹಿಂದೆ ಬಹಳಷ್ಟು ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಬಗ್ಗೆ ಕುಳ ಮತ್ತು ಇಡ್ಕಿದು ಗ್ರಾಮದಲ್ಲಿ ನಿವೇಶನ ಕಾದಿರಿಸುವಂತೆ ತಹಶೀಲ್ದಾರರಿಗೆ ಕೋರುವ ಬಗ್ಗೆ ನಿರ್ಣಯಿಸಲಾಯಿತು. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈಗಾಗಲೇ ಮಳೆಯ ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತೋರುವ ಸಾಧ್ಯತೆ ಇದ್ದು, ಆದ್ದರಿಂದ ಮಳೆ ನೀರು ಹರಿವು ಇರುವ ತೋಡುಗಳಿಗೆ ಮಣ್ಣಿನ ಒಡ್ಡುಗಳ ನಿರ್ಮಾಣ ಮಾಡುವುದು ಮತ್ತು ಹಲಗೆ ಇರುವ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಇಡ್ಕಿದು ಸೇವಾ ಸಹಕಾರಿ ಸಂಘ, ಸ್ಥಳೀಯ ಯುವಕ ಮಂಡಲ ಗಳನ್ನು ಸೇರಿಸಿ ಸಭೆ ನಡೆಸಿ ಕಾರ್ಯ ರೂಪಕ್ಕೆ ತರುವ ಬಗ್ಗೆ ನಿರ್ಣಯಿಸಲಾಯಿತು. ಜಲ್ ಜೀವನ್ ಮಿಷನ್ ಕಾಮಗಾರಿ ಕುಳ ಗ್ರಾಮದಲ್ಲಿ ಶೇ೮೦ರಷ್ಟು ಕಾರ್ಯಗತವಾಗಿದ್ದು ಇಡ್ಕಿದು ಗ್ರಾಮದಲ್ಲಿ ಪ್ರಗತಿಯಾಗಿರುವುದಿಲ್ಲ. ಗುತ್ತಿಗೆದಾರರಿಗೆ ಕರೆ ಮಾಡಿದಾಗ್ಯೂ ಯಾವುದೇ ರೀತಿಯಲ್ಲಿ ಪ್ರಗತಿಯಾಗಿರುವುದಿಲ್ಲ. ಈ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಟ್ವಾಳ ಇವರಿಗೆ ಪತ್ರಿಸುವುದು ಮತ್ತು ಗುತ್ತಿಗೆದಾರರನ್ನು ಕಪ್ಪ ಪಟ್ಟಿಗೆ ಸೇರ್ಪಡೆ ಮಾಡಲು ಒತ್ತಾಯಿಸುವ ಬಗ್ಗೆ ನಿರ್ಣಯಿಸಲಾಯಿತು.
ತನ್ನ ಹುಟ್ಟೂರಾದ ಭಟ್ಕಳಕ್ಕೆ ವರ್ಗಾವಣೆಗೊಂಡಿರುವ ಸೂರ್ಯ ಸರಕಾರಿ ಸಂಯುಕ್ತ ಫ್ರೌಢ ಶಾಲೆಯಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕನ್ನಡ ಭಾಷ ಸಹಶಿಕ್ಷಕರಾದ ಈಶ್ವರ ನಾಯ್ಕ್ ಹಾಗೂ ಸಹಶಿಕ್ಷಕರಾದ ಶಿವಕುಮಾರ ಹಿಚ್ಚದ್ ರವರನ್ನು ಇಡ್ಕಿದು ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂ.ಉಪಾಧ್ಯಕ್ಷರಾದ ಪದ್ಮನಾಭ, ಪಂ.ಸದಸ್ಯರಾದ ಚಿದಾನಂದ.ಪಿ, ಎಂ.ಸುಧೀರ್ ಕುಮಾರ್ ಶೆಟ್ಟಿ, ರಮೇಶ ಪೂಜಾರಿ, ಸಂಜೀವ, ತಿಲಕ್‌ರಾಜ್ ಶೆಟ್ಟಿ, ಸಿದ್ದಿಕ್ ಆಲಿ, ಪುರುಷೋತ್ತಮ, ಶೋಭಾ, ಭಾಗೀರಥಿ, ಪುಷ್ಪಾ, ಜಯಂತಿ, ಪ್ರಶಾಂತ್, ಲಲಿತಾ, ಮೋಹಿನಿ, ಗೀತಾಂಜಲಿ, ಉಪಸ್ಥಿತರಿದ್ದರು. ಪಂ.ಸಿಬ್ಬಂದಿ ಪೂರ್ಣಿಮಾ, ಭವ್ಯ, ಸಾವಿತ್ರಿ, ಸುನೀತಾ, ಲೆಕ್ಕಸಹಾಯಕಿ ರಾಜೇಶ್ವರಿ ಕಲಾಪದಲ್ಲಿ ಸಹಕರಿಸಿದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ ಸ್ವಾಗತಿಸಿ, ವಂದಿಸಿದರು.