ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿಯವರಿಗೆ ನುಡಿನಮನ

0

ಪುತ್ತೂರು:ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ, ನವಚೇತನಾ ಯುವಕ ಮಂಡಲ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇವುಗಳ ಆಶ್ರಯದಲ್ಲಿ ಕೆಲ ದಿನಗಳ ಹಿಂದೆ ನಿಧನರಾದ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರಿಗೆ ನುಡಿನಮನವು ಸೆ.3ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸೀತಾರಾಮ ಶೆಟ್ಟಿಯವರು ಸಣ್ಣ ವಯಸ್ಸಿನಿಂದಲೇ ನಮ್ಮ ಸಂಪರ್ಕವಿದ್ದರು. ನನ್ನನ್ನು ದೇವಸ್ಥಾನದ ವ್ಯವಸ್ಥಾನಾ ಸಮಿತಿ ಸೇರುವಲ್ಲಿ ಅವರೇ ಪ್ರಮುಖರಾಗಿದ್ದರು. ಅವರಿಂದಾಗಿ ದೇವರ ಸೇವೆ ಮಾಡುವ ಅವಕಾಶ ದೊರೆತಿದೆ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಅವರಲ್ಲಿ ಸಾಕಷ್ಟು ಅರಿವಿತ್ತು. ಪ್ರತಿದಿನ ಕರೆಮಾಡಿ ದೇವಸ್ಥಾನದ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯಿಂದ ನಿರ್ವಹಿಸಿದವರು. ತಪ್ಪಿಸಿಕೊಳ್ಳುವ ಜಾಯಮಾನ ಅವರಲ್ಲಿರಲಿಲ್ಲ ಎಂದ ಅವರು ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನವಿರಿಸಿಕೊಳ್ಳಬೇಕು. ಖಾಯಿಲೆ ಬರುವ ಮೊದಲೇ ಜಾಗರೂಕರಾಗಿರಬೇಕು. ವಯಸ್ಸು ಯಾವುದೇ ಇರಲಿ ಒಮ್ಮೆಯಾದರೂ ತಪಾಸಣೆ ಮಾಡಿಸಿಕೊಳ್ಳಬೇಕು. ಶರೀರದಲ್ಲಿನ ಏರುಪೇರುಗಳ ಲಕ್ಷಣಗಳನ್ನು ವೈದ್ಯರಲ್ಲಿ ತಿಳಿಸಿದಾಗ ಅವರಿಂದ ಸೂಕ್ತ ಸಲಹೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.


ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ ಮಾತನಾಡಿ, ಸೀತಾರಾಮ ಶೆಟ್ಟಿಯವರು ಕಳೆದ 29 ವರ್ಷಗಳಿಂದ ಆತ್ಮೀಯ ಮಿತ್ರ. ಅವರು ಸಂಪ್ಯದ ಪುನೀತ್ ರಾಜ್‌ಕುಮಾರ್ ಆಗುತ್ತಾರೆ ಎನ್ನುವುದನ್ನು ಯೋಚಿಸಿರಲಿಲ್ಲ. ದೇವರ ಗ್ರಾಮ ಎಂದೇ ಖ್ಯಾತಿ ಪಡೆದ ಆರ್ಯಾಪುನಲ್ಲಿರುವ ಎಲ್ಲಾ ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಎಲ್ಲಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡವರು. ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ನಿರಂತರ ಕೆಲಸ ಮಾಡಿದವರು. ಅವರು ಇಲ್ಲದ ಸಂಘ ಸಂಸ್ಥೆಗಳಿಲ್ಲ. ಅವರ ಜೀವನೇ ನಗು. ನಗುವಿನೊಂದಿಗೆ ಜೀವನದ ಪಯಣ ಮುಗಿಸಿದವರು ಎಂದರು.


ಸಂಪ್ಯ ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್. ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ನಮ್ಮೊಂದಿಗೆ ಒಡನಾಡಿಯಾಗಿದ್ದವರು. ಸದಾ ನಗುಮೊಗದ ವ್ಯಕ್ತಿತ್ವ ಹೊಂದಿದ್ದ ಅವರು ಯುವಕ ಮಂಡಲದ ಅಧ್ಯಕ್ಷರಾಗಿ ಬಹಳಷ್ಟು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದ ಅವರು ಯುವಕ ಮಂಡಲವನ್ನು ಉತ್ತುಂಗ ಕೊಂಡೊಯ್ಯಲು ಪ್ರಯತ್ನಿಸಿದವರು. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿದ್ದ ಸೀತಾರಾಮರವರ ಹೆಸರು ನನಪು ಅಜರಾಮರವಾಗಿರ ಉಳಿಯಬೇಕೆಂಬ ನಿಟ್ಟಿನಲ್ಲಿ ಯುವಕ ಮಂಡಲದಿಂದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಸೀತಾರಾಮ ಪ್ರತಿಭಾ ಪುರಸ್ಕಾರ ಎಂದು ನಾಮಕರಣ ಮಾಡಲಾಗುವುದು. ಅಲ್ಲದೆ ಯುವಕ ಮಂಡಲದ ನೂತನ ಕಟ್ಟಡಕ್ಕೂ ಸೀತಾರಾಮ ಶೆಟ್ಟಿಯವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದರು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಲಕ್ಷ್ಮಣ್ ಬೈಲಾಡಿ ಮಾತನಾಡಿ, ನಾವಿಬ್ಬರು ಪರಸ್ಪರ ಅನ್ಯೋನ್ಯವಾಗಿದ್ದವರು. ದೇವಸ್ಥಾನದ ಎಲ್ಲಾ ಕಾರ್ಯಗಳಲ್ಲಿಯೂ ನಾವು ರಾಮ ಲಕ್ಷ್ಮಣ ರಂತೆ ಕೆಲಸ ಮಾಡಿದವರು. ಅವರು ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ ಮಾತನಾಡಿ, ಸೀತಾರಾಮ ಶೆಟ್ಟಿಯವರ ಜೀವನವೇ ಒಂದು ಮಾದರಿ. ಎಲ್ಲರೊಂದಿಗೂ ಹತ್ತಿರದ ಬಂಧುವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಬೆರೆಯುವವರು ಎಂದರು.


ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೃಷ್ಣಪ್ಪ ಕೆ., ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ರವಿನಾಥ ಗೌಡ ಬೈಲಾಡಿ ಮಾತನಾಡಿ, ಸೀತಾರಾಮ ಶೆಟ್ಟಿಯವರೊಂದಿಗೆ ಜೀವನದ ನುಡಿ ನಮನ ಸಲ್ಲಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಕುಮಾರ್ ನಾಯರ್, ಪ್ರೇಮ, ವಿನ್ಯಾಸ್ ಸಂಪ್ಯ, ಅರ್ಚಕ ಮೋಹನ ರಾವ್ ಪಜಿಮಣ್ಣು, ಮೊಟ್ಟೆತ್ತಡ್ಕ ಐಕ್ಯ ಕಲಾ ವೇದಿಕೆಯ ಚೇತನ್, ಸೀತಾರಾಮ ಶೆಟ್ಟಿಯವರ ಸಹೋದರ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆರೋಗ್ಯ ರಕ್ಷಾ ಸಮಿತಿಯ ಸಂಚಾಲಕಿ ಹರಿಣಿ ಪುತ್ತೂರಾಯ ಸ್ವಾಗತಿಸಿದರು. ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಎಸ್.ಕೆ ವಂದಿಸಿದರು. ಆರೋಗ್ಯ ರಕ್ಷಾ ಸಮಿತಿ, ನವಚೇತನಾ ಯುವಕ ಮಂಡಲದ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here