ಶ್ವಾನದಳ, ಬೆರಳಚ್ಚು ತಂಡ ಆಗಮನ, ಪರಿಶೀಲನೆ
ಪುತ್ತೂರು: ಕುಂಬ್ರದಲ್ಲಿ ಸೆ.4ರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಇಲ್ಲಿನ ಸರಕಾರಿ ಕಛೇರಿಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು ಗ್ರಾಮ ಪಂಚಾಯತ್ ಕಛೇರಿ, ಗ್ರಾಮ ಆಡಳಿತ ಅಧಿಕಾರಿಯ ಕಛೇರಿ ಹಾಗೂ ಕುಂಬ್ರ ಕೆಪಿಎಸ್ ಸ್ಕೂಲ್‌ನ ಕಛೇರಿಗಳಿಗೆ ಕನ್ನ ಹಾಕಿದ್ದಾರೆ. ಕಛೇರಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಹಣಕ್ಕಾಗಿ ಜಾಲಾಡಿದ್ದು ಹಣ ಸಿಗದೇ ಇದ್ದಾಗ ಸಿಸಿ ಟಿವಿ ಡಿವಿಆರ್‌ಗಳನ್ನೇ ಹೊತ್ತೊಯ್ದಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಛೇರಿಯ ಬೀಗವನ್ನು ಕಬ್ಬಿಣದ ರಾಡ್ ಹಾಕಿ ಒಡೆದಿದ್ದಾರೆ. ಇದೇ ಕಟ್ಟಡದಲ್ಲಿದ್ದ ಅಂಚೆ ಕಛೇರಿಯ ಕಿಟಕಿಗೆ ರಾಡ್ ಹಾಕಿ ಒಡೆಯಲು ನೋಡಿದ್ದಾರೆ. ಪಂಚಾಯತ್ ಕಛೇರಿಯೊಳಗಿದ್ದ ಕಪಾಟುಗಳ ಬಾಗಿಲು ತೆಗೆದು ಹಣಕ್ಕಾಗಿ ಜಾಲಾಡಿದ್ದಾರೆ. ಪಿಡಿಒ ಕಛೇರಿಯ ಒಳನುಗ್ಗಿದ ಕಳ್ಳರು ಅಲ್ಲಿಯೂ ಕಪಾಟುಗಳ ಬಾಗಿಲು ತೆಗೆದು ಜಾಲಾಡಿದ್ದಾರೆ. ಕೊನೆ ಕ್ಷಣದಲ್ಲಿ ಯಾವುದೇ ನಗದು ಸಿಗದೇ ಇದ್ದಾಗ ಕಾರ್ಯದರ್ಶಿ ಕಛೇರಿಯಲ್ಲಿದ್ದ ಸಿಸಿಟಿವಿ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಕಛೇರಿ ರೂಮ್‌ಗಳ ಬೀಗ ಮುರಿದು ಕಳ್ಳರು ಅಲ್ಲಿಯೂ ಹಣಕ್ಕಾಗಿ ಜಾಲಾಡಿದ್ದಾರೆ.
ಶ್ವಾನದಳ, ಬೆರಳಚ್ಚು ತಂಡ ಆಗಮನ
ಘಟನಾ ಸ್ಥಳಕ್ಕೆ ಮಂಗಳೂರಿನ ಸಚಿನ್ ಮತ್ತು ತಂಡದವರ ಬೆರಳಚ್ಚು ತಂಡ ಭೇಟಿ ನೀಡಿದ್ದು ಗ್ರಾಮ ಪಂಚಾಯತ್ ಕಛೇರಿ, ಶಾಲಾ ಕಛೇರಿಗಳಲ್ಲಿ ಕಳ್ಳರ ಬೆರಳಚ್ಚುಗಳನ್ನು ಸಂಗ್ರಹ ಮಾಡಿಕೊಂಡಿದ್ದಾರೆ. ಶ್ವಾನದಳವೂ ಬಂದಿದ್ದು ಗ್ರಾಮ ಪಂಚಾಯತ್ ಕಛೇರಿಗೆ ಬಂದ ಶ್ವಾನವು ಅಲ್ಲಿ ಗ್ರಾಮ ಆಡಳಿತ ಅಧಿಕಾರಿ ಕಛೇರಿ, ಅಂಚೆ ಕಛೇರಿಗೆ ಹೋಗಿ ಅಲ್ಲಿಂದ ನೇರವಾಗಿ ಮುಖ್ಯ ರಸ್ತೆ ತನಕ ಬಂದಿದೆ. ಶಾಲೆಯಲ್ಲಿ ಶಾಲಾ ಮೈದಾನದಲ್ಲಿ ಓಡಾಡಿದ ಶ್ವಾನವು ಅಲ್ಲಿಂದ ನೇರವಾಗಿ ಶಾಲಾ ಹಿಂಬದಿಯಿಂದ ಬೆಳ್ಳಾರೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೂ ಓಡಾಡಿದೆ.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಂದ ಪರಿಶೀಲನೆ
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಸಬ್‌ಇನ್ಸ್‌ಪೆಕ್ಟರ್ ಧನಂಜಯ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.