ಪುತ್ತೂರು:ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವ ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಗ್ಗೆ ಸೆ.5ರಂದು ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಎಂಬಲ್ಲಿ ನಡೆದಿದೆ.
ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಬಾಲ್ಯೊಟ್ಟು ಗುತ್ತು ಸಂಕಯ್ಯ ಆಳ್ವರವರ ಪುತ್ರ ರವಿಂದ್ರನಾಥ ಆಳ್ವ(55ವ.) ಆತ್ಮಹತ್ಯೆ ಮಾಡಿಕೊಂಡವರು. ರವೀಂದ್ರನಾಥ ಆಳ್ವರವರು ಮಾನಸಿಕ ಕಾಯಿಲೆಗೆ ಒಳಗಾಗಿದ್ದು ಅವರ ಪತ್ನಿ ದೀಕ್ಷಾರವರು ಮಕ್ಕಳಿಬ್ಬರೊಂದಿಗೆ ಬೆದ್ರಾಳದಲ್ಲಿರುವ ತನ್ನ ತವರು ಮನೆಯಲ್ಲಿ ವಾಸ್ತವ್ಯವಿದ್ದರು. ಹೀಗಾಗಿ ರವೀಂದ್ರನಾಥ ಆಳ್ವರವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸ್ತವ್ಯವಿದ್ದರು. ಅಲ್ಲಿಯೇ ಸಮೀಪದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಪ್ರತಿ ದಿನ ಊಟ, ಉಪಾಹಾರಗಳನ್ನು ಪಡೆಯುತ್ತಿದ್ದರು. ಸೆ.3ರಂದು ರಾತ್ರಿ ಎಂದಿನಂತೆ ಊಟಕ್ಕೆ ತೆರಳಿದ್ದ ಅವರು ಮನೆಯಲ್ಲಿ ಊಟ ಮಾಡದೇ ತಾನು ಮನೆಯಲ್ಲಿ ಊಟ ಮಾಡುವುದಾಗಿ ತಿಳಿಸಿ ಊಟವನ್ನು ಬುತ್ತಿಯಲ್ಲಿ ತುಂಬಿಸಿ ಅವರ ಮನೆ ಬಂದಿದ್ದರು. ಇದಾದ ಬಳಿಕ ಎರಡು ದಿನಗಳಾದರೂ ಊಟಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಸೆ.5ರಂದು ಸಹೋದರ ಅವರ ಮನೆಗೆ ಹುಡುಕಿಕೊಂಡು ಹೋದಾಗ ಮನೆಯ ಛಾವಣೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಬುತ್ತಿಯಲ್ಲಿ ತುಂಬಿಸಿ ತಂದಿದ್ದ ಊಟ ಹಾಗೇಯ ಇತ್ತು ಎಂದು ತಿಳಿದು ಬಂದಿದೆ. ಮೃತರು ಸಹೋದರರಾದ ದಾಮೋದರ, ರಾಮಕೃಷ್ಣ, ಕಿಟ್ಟಣ್ಣ ರೈ, ಪತ್ನಿ ದೀಕ್ಷಾ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪ್ರಶಂಸೆ ಪಡೆದ ಶೌರ್ಯ ವಿಪತ್ತು ತಂಡ ಕಾರ್ಯ:
ರವೀಂದ್ರನಾಥ ಆಳ್ವರವರು ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆಮಾಡಿಕೊಂಡಿದ್ದು ಮೃತ ದೇಹವು ಕೊಳೆತು ದುರ್ನಾತ ಬೀರುತ್ತಿತ್ತು. ಎಲ್ಲರೂ ಮೃತದೇಹ ಬಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು ಈ ಸಂದರ್ಭದಲ್ಲಿ ಗುಮ್ಮಟೆಗದ್ದೆ ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು ಪೊಲೀಸರು ಮಹಜರು ನಡೆಸಿದ ಬಳಿಕ ಮನೆಯೊಳಗೆ ನೇತಾಡುತ್ತಿದ್ದ ಮೃತದೇಹವನ್ನು ಅಲ್ಲಿಂದ ತೆರವುಗೊಳಿಸಿ ಆಂಬ್ಯುಲೆನ್ಸ್‌ಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.