ಅಧ್ಯಯನಶೀಲತೆ ಶಿಕ್ಷಕರಿಗೆ ಅತ್ಯಗತ್ಯ- ಡಾ. ಎಚ್. ಜಿ. ಶ್ರೀಧರ್
ಪುತ್ತೂರು, ಸೆ.5: ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿಸಬಲ್ಲ ಮಹಾನ್ ಅದಮ್ಯ ಚೇತನ ಶಿಕ್ಷಕ. ಆತ ಕೇವಲ ಬಾಹ್ಯ ಪ್ರಪಂಚಕ್ಕೆ ತನ್ನ ವಿದ್ಯಾರ್ಥಿಯನ್ನು ಪರಿಚಯಿಸುವುದಲ್ಲದೇ ವಿದ್ಯಾರ್ಥಿಯ ಅಂತರಂಗದ ಶಕ್ತಿಯನ್ನು ಅವರಿಗೆ ಪರಿಚಯಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾನೆ. ಕೇವಲ ವಿದ್ಯೆ ಕಲಿಸುವುದರಿಂದ ಒಬ್ಬ ಒಳ್ಳೆಯ ಶಿಕ್ಷಕನಾಗಲಾರ. ಮಗುವಿನ ಮನಸ್ಸು, ಆಸಕ್ತಿ, ಪ್ರತಿಭೆ ಅರಿತವ ಮಾತ್ರ ಒಳ್ಳೆಯ ಶಿಕ್ಷಕನಾಗಲು ಸಾಧ್ಯ ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಜಿ.ಶ್ರೀಧರ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆದ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತಗೊಂಡು ಅವರು ಮಾತನಾಡಿದರು.
ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ. ಅಧ್ಯಯನಶೀಲತೆ ಅಧ್ಯಾಪಕನಿಗೆ ಅತ್ಯಗತ್ಯ. ವಿದ್ಯಾರ್ಥಿಗಳಲ್ಲಿ ಹುದುಗಿದ ಸುಪ್ತ ಪ್ರತಿಭೆಯನ್ನು ನನಗರಿವಿಲ್ಲದಂತೆ ವೇದಿಕೆ ಮುಂದೆ ಸಾದರಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಶಿಕ್ಷಕರು ವಹಿಸುತ್ತಾರೆ. ಪ್ರತೀ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿ ನಿಂತು ಭರವಸೆಯ ಬದುಕಿಗೆ ದಾರಿ ಮಾಡಿಕೊಡುತ್ತಾರೆ. ಭಯ ಪಟ್ಟು ನಿಂತಾಗ ಆತ್ಮ ಸ್ಥೈರ್ಯ ತುಂಬಿ, ಕೈ ಚೆಲ್ಲಿ ಕೂತಾಗ ಸಾಧಿಸುವ ಮಾರ್ಗ ತೋರಿಸಿ, ಅರಿವಿಲ್ಲದ ವಿಷಯಗಳ ಕುರಿತು ಅರಿವು ಮೂಡಿಸಿ, ಅತ್ತಾಗ ಕಣ್ಣೋರೆಸಿ, ಹಲವು ಬಾರಿ ವಿದ್ಯಾರ್ಥಿಗಳ ನಗುವಿಗೆ ಕಾರಣವಾಗಿ, ನಿರರ್ಗಳವಾಗಿ ಮಾತನಾಡುವ ಕಲೆಯ ಕಾರಣಿಕರ್ತರಾಗಿ, ಮಕ್ಕಳ ಆಸೆ ಕನಸಿಗೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಗುರುಗಳನ್ನು ಪೂಜಿಸುವ ಈ ಸಂಪ್ರದಾಯವು ನಮ್ಮ ದೇಶದಲ್ಲಿ ಯುಗಾಂತರಗಳಿಂದ ಮುಂದುವರೆದಿದ್ದರೂ, ಪ್ರಸ್ತುತ ರಾಜಕೀಯ ಮತ್ತು ತಂತ್ರಜ್ಞಾನದ ಪ್ರಾಬಲ್ಯದ ಇಂದಿನ ಆಧುನಿಕ ಯುಗದಲ್ಲಿ, ಸಮಾಜಕ್ಕೆ ಶಿಕ್ಷಕರ ಕೊಡುಗೆಗಳನ್ನು ಒತ್ತಿಹೇಳುವುದು ನಿರ್ಣಾಯಕವಾಗಿವೆ ಎಂದರು.
ಹಾಗೆಯೇ ವಿಶೇಷ ಸನ್ಮಾನಿತಗೊಂಡ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪೌಢಶಾಲೆಯ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್ ಮಾತನಾಡಿ ವಸ್ತುವನ್ನು ನೋಡಲು ಹೇಗೆ ಬೆಳಕಿನ ಅಗತ್ಯವಿದೆಯೋ ಹಾಗೆಯೇ ವಿದ್ಯಾರ್ಥಿಗಳ ಜೀವನದಲ್ಲಿ ಅಂಧಕಾರವನ್ನು ದೂರ ಮಾಡುವವನೇ ನಿಜವಾದ ಗುರು. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಜೀವನದ ಪ್ರತಿಯೊಂದು ಅಂಶಗಳನ್ನು ತಿದ್ದಿ ತೀಡಿ ಮತ್ತು ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾರೆ. ಈ ಮೂಲಕ ಶಿಕ್ಷಣ ಮತ್ತು ಶಿಕ್ಷಕರು ದೇಶದ ಅತ್ಯಂತ ಅಮೂಲ್ಯವಾದ ಆಸ್ತಿಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೆ.ಎನ್. ಸುಬ್ರಹ್ಮಣ್ಯ ಮಾತನಾಡಿ ಪ್ರತೀ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡುತ್ತಾರೆ.ಶಿಕ್ಷಣದ ಮೂಲ ಅರ್ಥವನ್ನು ತಿಳಿಸಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೆಯೇ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ರತ್ನಾವತಿ ನಿರೂಪಿಸಿ ಶೀತಲಾ ವಂದಿಸಿದರು.
ಶಿಕ್ಷಕ ದಿನಾಚರಣೆಯ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಮಹತ್ವವನ್ನು ಉಪನ್ಯಾಸಕ ಹರೀಶ ಶಾಸ್ತ್ರೀ ತಿಳಿಸಿದರು. ಈ ದಿನಾಚರಣೆಯನ್ನು ಅರ್ಥವತ್ತಾಗಿಸುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರೆಲ್ಲರೂ ಸೇರಿಕೊಂಡು ಇಬ್ಬರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಿರುವ ಹಣಕಾಸಿನ ನೆರವನ್ನು ಒದಗಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಂತರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಗೋಪಾಲಕೃಷ್ಣ ಭಟ್, ಸದಸ್ಯ ಡಾ. ಕೆ.ಎನ್. ಸುಬ್ರಹ್ಮಣ್ಯ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು.