ಪುತ್ತೂರು: ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡುವುದಾಗಿ ಹೇಳಿ ಮಹಿಳೆಯಿಂದ ಪಡೆದ ಲಂಚದ ಹಣವನ್ನು ಹಿಂತಿರುಗಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಗ್ರಾಮವೊಂದರ ಉಗ್ರಾಣಿಗೆ ಸೂಚನೆ ನೀಡಿದ್ದಾರೆ.
ಕುಂಡಡ್ಕದಲ್ಲಿ ಶ್ರೀ ಕೃಷ್ಣಾಅಷ್ಟಮಿ ಕಾರ್ಯಕ್ರಮಕ್ಕೆ ತೆರಳಿದ ಶಾಸಕರ ಬಳಿ ಬಂದ ಚಂದ್ರಾವತಿ ಎಂಬ ಮಹಿಳೆ ʼನಾನು ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದೆ. ನನ್ನ ಮನೆ ಸರಕಾರಿ ಜಾಗದಲ್ಲಿದೆ. ನನ್ನ ಮನೆ ಇರುವ ಜಾಗವನ್ನು ಸಕ್ರಮ ಮಾಡಿಕೊಡಬೇಕೆಂದು ಅರ್ಜಿ ಸಲ್ಲಿಸಿದ್ದೇನೆ. ಸಲ್ಲಿಸಿದ ಅರ್ಜಿಯ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ . ನಾನು ಅರ್ಜಿ ಕೊಟ್ಟಾಗ ನನ್ನಿಂದ ನನ್ನ ಗ್ರಾಮದ ಉಗ್ರಾಣಿ ಒಟ್ಟು 30 ಸಾವಿರ ಹಣವನ್ನು ಲಂಚವಾಗಿ ಪಡೆದುಕೊಂಡಿದ್ದಾರೆ. ಏಳು ವರ್ಷ ಕಳೆದರೂ ನನಗೆ ಅಕ್ರಮ ಸಕ್ರಮದಲ್ಲಿ ಜಾಗ ರೆಕಾರ್ಡ್ ಆಗಲಿಲ್ಲ, ನಾನು ಬಡವೆ, ನನ್ನಲ್ಲಿ ಏನೂ ಇಲ್ಲ, ನಾನು ಬೀಡಿಕಟ್ಟಿ ಜೀವನ ಮಾಡುವುದು, ಆದರೂ ನನ್ನಿಂದ ಹಣ ಪಡೆದುಕೊಂಡಿದ್ದಾರೆ. ಹಣ ಕೊಟ್ಟರೂ ಕೆಲಸ ಮಾಡಿಲ್ಲ ನನಗೆ ನ್ಯಾಯ ಕೊಡಿʼ ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಕೂಡಲೇ ಹಣ ಪಡೆದುಕೊಂಡ ಉಗ್ರಾಣಿಗೆ ಕರೆ ಮಾಡಿದ ಶಾಸಕರು ಬಡ ಮಹಿಳೆಯಿಂದ ಲಂಚವಾಗಿ ಪಡೆದುಕೊಂಡ 30 ಸಾವಿರ ಹಣವನ್ನು ವಾರದೊಳಗೆ ಮಹಿಳೆಗೆ ಪಾವತಿಸಿಬೇಕು ಇಲ್ಲವಾದರೆ ಕೆಲಸದಿಂದ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಗೆ ಸಾಂತ್ವನ ಹೇಳಿದ ಶಾಸಕರು ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚನೆ ಕೊಡುತ್ತೇನೆ. ಅಕ್ರಮ ಸಕ್ರಮ ಸಮಿತಿಯಾದ ತಕ್ಷಣವೇ ನಿಮ್ಮ ಜಾಗ ನಿಮಗೆ ರೆಕಾರ್ಡ್ ಆಗಲಿದೆ ಎಂದು ಹೇಳಿದಾಗ ಮಹಿಳೆ ಶಾಸಕರಿಗೆ ನಮಸ್ಕರಿಸಿದರು.