ಭಕ್ತಕೋಡಿಯಲ್ಲಿ 22ನೇ ವರ್ಷದ ಮೊಸರು ಕುಡಿಕೆ ಉತ್ಸವ – ಆಕರ್ಷಕ ಭಜನಾ ಮೆರವಣಿಗೆ, ವಿವಿಧ ಸ್ಪರ್ಧೆ, ಗೀತಾ ಸಾಹಿತ್ಯ ಸಂಭ್ರಮ

0

ಪುತ್ತೂರು: ಯುವ ಸಮೂಹದ ವ್ಯಕ್ತಿತ್ವ ವಿಕಸನಕ್ಕೆ ಯುವಕ ಮಂಡಲಗಳ ಕೊಡುಗೆ ಅಪಾರ ಎಂದು ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇದರ ಪ್ರ.ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಮತ್ತು ಶ್ರೀ ಗೌರಿ ಮಹಿಳಾ ಮಂಡಲ ಸರ್ವೆ ಇದರ ಆಶ್ರಯದಲ್ಲಿ ಭಕ್ತಕೋಡಿ ಭಜನಾ ಮಂದಿರದ ಆವರಣದಲ್ಲಿ ಸೆ.6ರಂದು ನಡೆದ 22ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಭಾಗದ ಯುವಕ ಮಂಡಲಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಕ್ರಿಯವಾಗಿ ಸಮಾಜದಲ್ಲಿ ತೊಡಗಿಸಿಕೊಂಡಿದೆ. ವೈಯಕ್ತಿಕವಾಗಿ ನನ್ನ ಬೆಳವಣಿಗೆಯಲ್ಲಿ ಸರ್ವೆ ಷಣ್ಮುಖ ಯುವಕ ಮಂಡಲದ ಕೊಡುಗೆ ಇದೆ ಎಂದು ಅವರು ಹೇಳಿದರು.

ಯುವಜನ ಒಕ್ಕೂಟ ಪುತ್ತೂರು ತಾಲೂಕು ಅಧ್ಯಕ್ಷ ದಿನೇಶ್ ಸಾಲ್ಯಾನ್ ಮಾತನಾಡಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಗಳಿಗೆ ದೇವರ ಅನುಗ್ರಹ ಇದೆ, ಕೆಲವು ಯುವಕ ಮಂಡಲಗಳು ವರ್ಷದಲ್ಲಿ ಒಂದು ಕಾರ್ಯಕ್ರಮ ಮಾಡಿ ಮುಗಿಸುತ್ತದೆ, ಆದರೆ ಸರ್ವೆ ಷಣ್ಮುಖ ಯುವಕ ಮಂಡಲ ನಿರಂತರವಾಗಿ ಕಾರ್ಯಕ್ರಮ ಆಯೋಜಿಸುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲವಾಗಿದ್ದು ಮುಂದಕ್ಕೆ ರಾಷ್ಟ್ರ ಪ್ರಶಸ್ತಿ ಬರುವ ಸಂದರ್ಭ ಒದಗಿ ಬರಲಿ ಎಂದು ಹಾರೈಸಿದರು.

ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಮಾತನಾಡಿ ಯುವಕರ ಸಬಲೀಕರಣಕ್ಕೆ ಯುವಕ ಮಂಡಲಗಳು ಕಾರಣವಾಗುತ್ತಿದ್ದು ಸರ್ವೆ ಷಣ್ಮುಖ ಯುವಕ ಮಂಡಲ ಅತೀ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇನೆ. ನಿಮ್ಮಲ್ಲಿ ಸಮಾನತೆ ಇರುವುದೇ ನಿಮ್ಮ ಯಶಸ್ಸಿಗೆ ಕಾರಣ ಎಂದು ಅವರು ಹೇಳಿದರು.

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಎಸ್.ಡಿ ಮಾತನಾಡಿ ನಮ್ಮೂರಿನ ಅನೇಕ ಯುವಕರಿಗೆ ಬೇರೆ-ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಯುವಕ ಮಂಡಲದ ಪ್ರೇರಣೆಯೇ ಕಾರಣವಾಗಿದೆ ಎಂದು ಹೇಳಿದರು.
ಶ್ರೀ.ಕ್ಷೇ.ಧ.ಗ್ರಾ.ಯೋ.ಸರ್ವೆ ಬಿ ಒಕ್ಕೂಟದ ಅಧ್ಯಕ್ಷ ಶಶಿಧರ್ ಎಸ್.ಡಿ ಮಾತನಾಡಿ ಸಂಘಟನೆ ಮಾಡಲು ಬಹಳ ಕಷ್ಟವಿದೆ, ಆದರೆ ನಮ್ಮಲ್ಲಿ ಒಗ್ಗಟ್ಟು ಇರುವ ಕಾರಣದಿಂದ ಯುವಕ ಮಂಡಲದ ಯಶಸ್ವಿಯಾಗಿ ನಡೆಯುತ್ತದೆ ಎಂದರು. ಭಕ್ತಕೋಡಿ ಸ.ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸೀತಾ ಸರ್ವೆ ಮಾತನಾಡಿ ಒಗ್ಗಟ್ಟು ಇರುವಲ್ಲಿ ಯಶಸ್ಸು ಸಿಗುತ್ತದೆ ಇದಕ್ಕೆ ಷಣ್ಮುಖ ಯುವಕ ಮಂಡಲ ಸಾಕ್ಷಿ ಎಂದರು. ಸರ್ವೆ ಎಸ್‌ಜಿಎಂ ಪ್ರೌಢಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶೋಕ್ ಎಸ್.ಡಿ ಮಾತನಾಡಿ ನಮ್ಮ ಬೆಳವಣಿಗೆಗೆ ಸಂಘ ಸಂಸ್ಥೆ ಅಗತ್ಯ, ಈ ನಿಟ್ಟಿನಲ್ಲಿ ಯುವಕ ಮಂಡಲದ ಪಾತ್ರ ಪ್ರಮುಖ ಎಂದರು.

ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರು, ನಿವೃತ್ತ ಮುಖ್ಯ ಶಿಕ್ಷಕರೂ ಆದ ಶ್ರೀನಿವಾಸ್ ಹೆಚ್.ಬಿ ಮಾತನಾಡಿ ಷಣ್ಮುಖ ಯುವಕ ಮಂಡಲದವರು ಕರ್ಣಾಟಕದ ಮ್ಯಾಪ್‌ನಲ್ಲಿ ಸರ್ವೆಯನ್ನು ಗುರುತಿಸುವಂತೆ ಮಾಡಿದ್ದು ವ್ಯವಸ್ಥಿತವಾಗಿ ಕಾರ್ಯಾಚರಣೆ ಮೂಲಕ ಯುವಕ ಮಂಡಲ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಹೇಳಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಷಣ್ಮುಖ ಯುವಕ ಮಂಡಲದ ಗೌರವಾಧ್ಯಕ್ಷ ವಸಂತ ಎಸ್.ಡಿ ಮಾತನಾಡಿ ಊರಿನ ಅಭಿವೃದ್ಧಿಯಲ್ಲಿ ಯುವಕ, ಯುವತಿ ಮಂಡಲಗಳ ಪಾತ್ರ ಅಪಾರವಾಗಿದ್ದು ಈ ಮಣ್ಣಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳ ಸಹಿತ ಊರಿನವರಿಗೆ ತಿಳಿಯಪಡಿಸುವ ಕಾರ್ಯ ಮೊಸರು ಕುಡಿಕೆ ಉತ್ಸವ ಮೂಲಕ ಆಗುತ್ತಿರುವುದು ಶ್ಲಾಘನೀಯ, ಶ್ರೀಕೃಷ್ಣ ಪರಮಾತ್ಮನ ಆದರ್ಶ ಪಾಲಿಸಿದರೆ ಈ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ನಿರಂತರವಾಗಿ ನೆಲೆಗೊಳ್ಳಲಿದೆ ಎಂದು ಅವರು ಹೇಳಿದರು.

ಜಿ.ಕೆ ಪ್ರಸನ್ನರಿಗೆ ಸನ್ಮಾನ:
ಊರಿನ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ಜಿ.ಕೆ ಪ್ರಸನ್ನ ಅವರನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಜಿ.ಕೆ ಪ್ರಸನ್ನ ಮಾತನಾಡಿ ನಾನು ಸನ್ಮಾನಕ್ಕೆ ಅರ್ಹ ವ್ಯಕ್ತಿ ಎಂದು ನಾನು ಹೇಳಲಾರೆ, ಆದರೆ ನಿಮ್ಮ ಪ್ರೀತಿಗೆ ತಲೆ ಬಾಗುತ್ತೇನೆ ಎಂದು ಹೇಳಿದರು. ನಾವು ದುಡಿದದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ ಮೀಸಲಿಡಬೇಕು ಎಂದ ಅವರು ಷಣ್ಮುಖ ಯುವಕ ಮಂಡಲಕ್ಕೆ ರಾಷ್ಟ್ರ ಪ್ರಶಸ್ತಿ ಬರಲಿ ಎಂದು ಆಶಿಸಿದರು.

ಪ್ರಸ್ತಾವನೆಗೈದ ಕಾರ್ಯಕ್ರಮದ ಸಂಯೋಜಕ ಸುಬ್ರಹ್ಮಣ್ಯ ಕರುಂಬಾರು ಮಾತನಾಡಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಮದ ನಮ್ಮೂರಿನವರು ವಂಚಿತವಾಗಬಾರದು ಎನ್ನುವ ಉದ್ದೇಶದಿಮದ 22 ವರ್ಷಗಳ ಹಿಂದೆ ಸ್ಥಾಪನೆಗೊಂಡ ಷಣ್ಮುಖ ಯುವಕ ಮಂಡಲಕ್ಕೆ ಎರಡು ಬಾರಿ ಜಿಲ್ಲಾ ಪ್ರಶಸ್ತಿ ಹಾಗೂ ಒಂದು ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ, ಇದು ನಮಗೆ ಹೆಮ್ಮೆಯ ವಿಷಯ ಎಂದರು.

ಸ್ವಾಗತಿಸಿದ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಮಾತನಾಡಿ ಒಗ್ಗಟ್ಟು ನಮ್ಮ ಯುವಕ ಮಂಡಲದ ಯಶಸ್ಸಿನ ಗುಟ್ಟಾಗಿದ್ದು, ಅದುವೇ ನಮ್ಮ ಶಕ್ತಿಯೂ ಆಗಿದೆ. ಸಾಮಾಜಿಕವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ನಮ್ಮ ಯುವಕ ಮಂಡಲ ಸದಾ ಕಾರ್ಯಚಟುವಟಿಕೆ ಮೂಲಕ ಗುರುತಿಸಿಕೊಂಡಿದೆ. ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ನಿರಂತರ ಕಾರ್ಯಕ್ರಮ ಸಂಯೋಜಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಚೋಟಾ ಚಾಂಪಿಯನ್ ಫೈನಲ್ ಸ್ಪರ್ಧಿ ಶಿವಾಂಶ್ ಕಾಮತ್‌ಗೆ ಸನ್ಮಾನ:
ಝೀ ಕನ್ನಡ ಚೋಟಾ ಚಾಂಪಿಯನ್ ಮಕ್ಕಳ ಗೇಮ್ ಶೋನ ಫೈನಲ್ ಸ್ಪರ್ಧಿ ಶಿವಾಂಶ್ ಕಾಮತ್ ಅವರನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಶಿವಾಂಶ್ ಕಾಮತ್ ಅವರ ತಾಯಿ, ಗಾಯಕಿ ಗುರುಪ್ರಿಯಾ ಹಾಗೂ ಅಜ್ಜಿ ವಿದ್ಯಾನಾಯಕ್ ಉಪಸ್ಥಿತರಿದ್ದರು.

ಆಕರ್ಷಕ ಭಜನಾ ಮೆರವಣಿಗೆ:
ಭಕ್ತಕೋಡಿ ಅಂಗನವಾಡಿ ವಠಾರದಿಂದ ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಜೊತೆ ಭಜನಾ ಮೆರವಣಿಗೆ ನಡೆಯಿತು. ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ವೀರಪ್ಪ ಗೌಡ ಕರುಂಬಾರು, ಯುವಕ ಮಂಡಲದ ಪ್ರ.ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ಭಕ್ತಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿನಿ ಭೂಮಿಕ ಇವರು ಪ್ರಾರ್ಥಿಸಿದರು.

ಯುವಕ ಮಂಡಲದ ಪ್ರ.ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಷಣ್ಮುಖ ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ ಶರೀಫ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರು, ಯುವತಿ ಮಂಡಲದ ಸದಸ್ಯರು, ಊರವರ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆ:
ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗೀತಾ ಸಾಹಿತ್ಯ ಸಂಭ್ರಮ:
ಮದ್ಯಾಹ್ನ ವಿಠಲ ನಾಯಕ್ ಕಲ್ಲಡ್ಕ ಸಾರಥ್ಯದಲ್ಲಿ ಗೀತಾ ಸಾಹಿತ್ಯ ಸಂಭ್ರಮ ಸಂದೇಶದ ಸಂತೋಷ ಕಾರ್ಯಕ್ರಮ ನಡೆಯಿತು.


LEAVE A REPLY

Please enter your comment!
Please enter your name here