ದೇಶದ ಘನತೆ ಗೌರವವನ್ನು ಸಂಸ್ಕೃತ ಜಗದಗಲ ಪಸರಿಸಿದೆ : ಆದರ್ಶ ಗೋಖಲೆ
ಪುತ್ತೂರು: ಸಾವಿರಾರು ವರ್ಷಗಳಿಂದ ಸಂಸ್ಕೃತ ಭಾರತ ದೇಶದ ಗೌರವ ಘನತೆಗಳನ್ನು ಜಗತ್ತಿನಲ್ಲಿ ಪಸರಿಸಿದೆ. ಸಂಸ್ಕೃತ ಹಾಗೂ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಹಾಗೂ ಜಗತ್ತಿನ ಎಲ್ಲ ಸಾಹಿತ್ಯಗಳ ವಿಚಾರಧಾರೆಗಳೂ ಸಂಸ್ಕೃತದಲ್ಲಿ ಅದಾಗಲೇ ಅಡಗಿರುವ ವಿಚಾರಗಳೇ ಆಗಿವೆ ಎಂಬುದು ಸಂಸ್ಕೃತದ ಹಿರಿಮೆ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಗಣಿತ ಶಾಸ್ತ್ರದಲ್ಲಿ ಬರುವ ಎಲ್ಲಾ ವಿ?ಯಗಳನ್ನು ಪ್ರಾಚೀನ ಭಾರತೀಯರು ಈ ಮೊದಲೇ ಸಂಸ್ಕೃತದಲ್ಲಿ ತಿಳಿಸಿದ್ದಾರೆ. ಭಾಸ್ಕರಾಚಾರ್ಯ, ಆರ್ಯಭಟ ಮೊದಲಾದವರು ಸಂಸ್ಕೃತವನ್ನು ಬಳಸಿ ಖಗೋಳ ಶಾಸ್ತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಭಾರತದ ಪ್ರಾಚೀನ ಗ್ರಂಥಗಳು ಸಂಸ್ಕೃತದಲ್ಲಿ ರಚಿಸಲ್ಪಟ್ಟಿವೆ ಎಂದರಲ್ಲದೆ ಭಾರತದ ಸಂಸ್ಕೃತಿ, ಆಚರಣೆಗಳ ಹಿಂದೆ ವಿಜ್ಞಾನದ ತಳಹದಿಗಳಿವೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸಂಸ್ಕೃತ ಉಪನ್ಯಾಸಕಿ ಸೌಂದರ್ಯ ಲಕ್ಷ್ಮಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಧನ್ವ ಪರಮೇಶ್ವರ ಭಟ್ ಹಾಗೂ ಅಮೋಘ ಕೃಷ್ಣ ಎಂ ಮಂತ್ರಘೋಷ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಪ್ರಣತಿ ಎ ಮತ್ತು ವರ್ಷಿಣಿ ಪಿ ಭಟ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಹರ್ಷಿತ ಇವರು ಸ್ವಾಗತಿಸಿ ವಿದ್ಯಾರ್ಥಿನಿ ವರ್ಣಿಕ ವಂದಿಸಿದರು.