ಅಂಬಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

0

ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು: ಶೇಖರ ರೈ

ಪುತ್ತೂರು: ಕರಾವಳಿ ಭಾಗದ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಇದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ ಹೆಚ್ಚಿನ ಒಲವು ತೋರದೇ ಇರುವುದು ಆಶ್ಚರ್ಯ. ಐಎಎಸ್, ಕೆಎಎಸ್‌ನಂತಹ ಪರೀಕ್ಷೆಗಳನ್ನು ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಕನಸನ್ನು ಹೊಂದಿ ನಿರಂತರ ಪ್ರಯತ್ನ ಮುಂದುವರೆಸಿದಲ್ಲಿ ಅತ್ಯುತ್ಕೃಷ್ಟ ಸರ್ಕಾರಿ ಉದ್ಯೋಗ ನಮ್ಮದಾಗುವುದರಲ್ಲಿ ಸಂದೇಹವಿಲ್ಲ ಎಂದು ಪೆರ್ನೆಯ ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶೇಖರ ರೈ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ 2023-24ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಇಂದು ವಿದ್ಯಾರ್ಥಿಗಳನ್ನು ಹಾದಿತಪ್ಪಿಸುವಂತಹ ಅನೇಕ ಸಂಗತಿಗಳು ಸಮಾಜದಲ್ಲಿವೆ. ಗುಟ್ಕಾ, ಡ್ರಗ್ಸ್ನಂತಹ ನಕಾರಾತ್ಮಕ ವಿಚಾರಗಳ ಬಲೆಯಲ್ಲಿ ನಮ್ಮ ಯುವಶಕ್ತಿ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ. ಈ ನೆಲೆಯಲ್ಲಿ ಸಂಸ್ಕಾರಭರಿತ ಶಿಕ್ಷಣದ ಅಗತ್ಯವಿದೆ ಎಂದರಲ್ಲದೆ ದೊರಕಿದ ನಾಯತಕತ್ವವನ್ನು ಸಮಂಜಸ ರೀತಿಯಲ್ಲಿ ವಿನಿಯೋಗಿಸಿ ಸಂಸ್ಥೆಯ ಹೆಸರನ್ನು ಮತ್ತಷ್ಟು ಉತ್ತುಂಗಕ್ಕೇರಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ನಡೆಯಬೇಕು. ಕೇವಲ ಅಧ್ಯಕ್ಷ, ಕಾರ್ಯದರ್ಶಿಗಳಿಗಷ್ಟೇ ಜವಾಬ್ದಾರಿ ಅನ್ನುವ ಮನೋಭಾವ ಬಿಟ್ಟು ಪ್ರತಿಯೊಬ್ಬನಿಗೂ ಆ ಜವಾಬ್ದಾರಿ ಇದೆ ಎಂಬ ಭಾವನೆಯಿಂದ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಆಡಳಿತ ಮಂಡಳಿ, ಪ್ರಾಚಾರ್ಯರಾದಿಯಾಗಿ ಎಲ್ಲರೂ ವಿದ್ಯಾರ್ಥಿಗಳ ಕ್ಷೇಮ ಹಾಗೂ ಉತ್ಕರ್ಷವನ್ನೇ ಬಯಸುವ ಹಾಗೂ ಯೋಚಿಸುವ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘದ ಅಗತ್ಯವಿಲ್ಲ. ಆದರೆ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ನೆಲೆಯಲ್ಲಿ ಚುನಾವಣೆಯಂತಹ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನಾಯಕರೆನಿಸುವವರು ಹೊಸ ಹೊಸ ಆಲೋಚನೆಗಳೊಂದಿಗೆ ಮುಂದುವರೆದಾಗ ಸಮಾಜ ಅವರನ್ನು ಗುರುತಿಸಲಾರಂಭಿಸುತ್ತದೆ ಎಂದರು.

ಸಮಾಜಕ್ಕೆ ಕೇವಲ ಇಂಜಿನಿಯರ್, ಡಾಕ್ಟರ್‌ಗಳಷ್ಟೇ ಸಾಲದು. ಅತ್ಯುತ್ತಮ ರಾಜಕಾರಣಿಗಳೂ ಬೇಕಾಗಿದ್ದಾರೆ. ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ರಾಜಕೀಯ ನೇತಾರರು ವಿದ್ಯಾರ್ಥಿ ದಿನಗಳಿಂದ ಉದಯಿಸಿಕೊಳ್ಳಬೇಕು. ಮತದಾನದ ದಿನವನ್ನು ರಜಾದಿನವೆಂದು ಭಾವಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ, ಆ ದಿನದಂದು ಮೋಜು, ಪ್ರವಾಸದಲ್ಲಿ ನಿರತರಾಗುವ ಮಂದಿಯೂ ನಮ್ಮ ನಡುವಿನಲ್ಲಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂಬ ಕನಿಷ್ಟ ಪ್ರಜ್ಞೆಯೂ ಅವರಲ್ಲಿಲ್ಲದಿರುವುದು ದುರಂತ. ಮತದಾನ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಮರೆಯಬಾರದು ಮತ್ತು ಅಂತಹ ಕರ್ತವ್ಯ ಪ್ರಜ್ಞೆ ಜಾಗೃತಿಯಲ್ಲಿ ವಿದ್ಯಾರ್ಥಿ ಚುಣಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನುಡಿದರು.

ಕಾಲೇಜಿನ ಮುಖ್ಯ ಚುನಾವಣಾಧಿಕಾರಿ ಚಂದ್ರಕಾಂತ ಗೋರೆ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಯೊಬ್ಬರೂ ಸಂಸ್ಕೃತದಲ್ಲಿ ಪ್ರತಿಜ್ಞೆ ಕೈಗೊಂಡದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ತರಗತಿ ಪ್ರತಿನಿಧಿಗಳಿಗೆ ಬ್ಯಾಜ್ ವಿತರಣೆ ನಡೆಯಿತು. ಕಾಲೇಜಿನ ಧ್ವಜವನ್ನು ವಿದ್ಯಾರ್ಥಿ ನಾಯಕರಿಗೆ ಹಸ್ತಾಂತರಿಸುವ ಮೂಲಕ ಜವಾಬ್ದಾರಿ ನೀಡಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಿಯಾಲ್ ಆಳ್ವ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here