ʼಮಾಡ್ನೂರು’ ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆಗೆ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಗ್ರಹ

0

ಪುತ್ತೂರು: ಮಾಡ್ನೂರು ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ರಚನೆ ಮಾಡಬೇಕೆಂಬ ಆಗ್ರಹ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು. ಸಭೆ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಸೆ.13ರಂದು ನಡೆಯಿತು.

ಸದಸ್ಯ ಲೋಕೇಶ್ ಚಾಕೋಟೆ ಮಾತನಾಡಿ ಅರಿಯಡ್ಕ ಗ್ರಾ.ಪಂ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ತಾಲೂಕಿನಲ್ಲೇ ಮೂರನೇ ಅತಿ ದೊಡ್ಡ ಪಂಚಾಯತ್ ಆಗಿದೆ. 12 ಸಾವಿರ ಜನ ಸಂಖ್ಯೆಯನ್ನು ಹೊಂದಿರುವ ಪಂಚಾಯತ್ 7 ವಾರ್ಡ್ ಗಳನ್ನು ಒಳಗೊಂಡಿದೆ. ಹಿಂದೆ ಶಶಿಕಲಾ ಚೌಟ ಅವರು ಗ್ರಾ.ಪಂ ಅಧ್ಯಕ್ಷೆ ಆಗಿದ್ದ ಸಂದರ್ಭದಲ್ಲಿ ಮಾಡ್ನೂರು ಪ್ರತ್ಯೇಕ ಪಂಚಾಯತ್ ಮಾಡುವ ಬಗ್ಗೆ ಪ್ರಯತ್ನ ನಡೆದಿತ್ತಾರೂ ಆ ಬಳಿಕ ಅದು ಸಾಧ್ಯವಾಗಿರಲಿಲ್ಲ, ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯಲ್ಲಿ ಜನ ಸಂಖ್ಯೆ ಹೆಚ್ಚಿರುವುದರಿಂದ, ಸರಕಾರದ ಸೌಲಭ್ಯವನ್ನು ಜನರಿಗೆ ತಲುಪಿಸಲು ಮತ್ತು ಅಭಿವೃದ್ಧಿ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಮಾಡ್ನೂರು ಪ್ರತ್ಯೇಕ ಗ್ರಾ.ಪಂ ಆಗಲೇಬೇಕು ಎಂದು ಅವರು ಹೇಳಿದರು. ಸದಸ್ಯರು ಧ್ವನಿಗೂಡಿಸಿದರು. ಎಷ್ಟೇ ಕಷ್ಟ ಆದರೂ ಈ ಬಾರಿ ಪ್ರತ್ಯೇಕ ಪಂಚಾಯತ್‌ಗಾಗಿ ನಾವು ಹೋರಾಟ ಮಾಡಬೇಕು ಮತ್ತು ಅದರಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದು ಲೋಕೇಶ್ ಚಾಕೋಟೆ ಅವರು ಹೇಳಿದರು.

ವಿದ್ಯುತ್ ಕಂಬ, ತಂತಿ ಬೀಳುವ ಸ್ಥಿತಿಯಲ್ಲಿ:
ಮಾಡ್ನೂರು ಕಾಲನಿಯಲ್ಲಿ ವಿದ್ಯುತ್ ಕಂಬ ಮತ್ತು ತಂತಿ ಬೀಳುವ ಸ್ಥಿತಿಯಲ್ಲಿದ್ದು ಅದನ್ನು ತೆರವುಗೊಳಿಸಬೇಕು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಎಂದು ಗ್ರಾ.ಪಂಗೆ ಬಂದಿರುವ ಮನವಿಯ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಮೆಸ್ಕಾಂಗೆ ಬರೆಯುವುದಾಗಿ ನಿರ್ಣಯಿಸಲಾಯಿತು.

ಅನುದಾನ ಬಳಕೆ ಮಾಡದ ಸದಸ್ಯರಿಗೆ ಮತ್ತೆ ಅನುದಾನ ಕೊಡಬೇಡಿ:
ಕಳೆದ ವರ್ಷದ ಕ್ರಿಯಾ ಯೋಜನೆಯಲ್ಲಿ ಸಿಕ್ಕಿದ ಅನುದಾನವನ್ನು ವಿನಿಯೋಗ ಮಾಡದ ಸದಸ್ಯರಿಗೆ ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಅನುದಾನ ಕೊಡಬಾರದು ಎಂದು ಸದಸ್ಯ ಹರೀಶ್ ರೈ ಜಾರತ್ತಾರು ಹೇಳಿದರು. ಕೆಲವು ಸದಸ್ಯರು ಧ್ವನಿಗೂಡಿಸಿದರು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಕೆಲವು ಸದಸ್ಯರ ವಾರ್ಡ್ನಲ್ಲಿ ಅನುದಾನ ಬಳಕೆಯಾಗದ ಕಾರಣ ಬ್ಯಾಂಕ್ ಅಕೌಂಟ್‌ನಲ್ಲಿ ಹಾಗೆಯೇ ಇದೆ. ಅನುದಾನ ಸಮರ್ಪಕ ಬಳಕೆ ಆಗದಿದ್ದರೆ ಗ್ರಾ.ಪಂಗೆ ವಿಶೇಷ ಅನುದಾನವೂ ಬರುವುದಿಲ್ಲ ಎಂದು ಹೇಳಿದರು.

ನೀರಿನ ಬಿಲ್ 20 ರೂ ಹೆಚ್ಚಳ:
ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಹೆಚ್ಚಳಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಹಲವರು ನೀರಿನ ಬಿಲ್ ಕಟ್ಟದೇ ಇರುವ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದರು. ಸದಸ್ಯ ದಿವ್ಯನಾಥ ಶೆಟ್ಟಿ ಮಾತನಾಡಿ ನೀರಿನ ಬಿಲ್ ಕಟ್ಟದವರ ಬಗ್ಗೆ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಲೋಕೇಶ್ ಚಾಕೋಟೆ ಮಾತನಾಡಿ ನೀರಿನ ಬಿಲ್ ಕಲೆಕ್ಟ್ ಮಾಡುವ ವಿಚಾರದಲ್ಲಿ ನಮ್ಮದೂ ತಪ್ಪಿದೆ, ಪ್ರತೀ ತಿಂಗಳು ಕ್ರಮಬದ್ದವಾಗಿ ಹೋಗಿ ಬಿಲ್ ಕಲೆಕ್ಟ್ ಮಾಡಬೇಕು ಎಂದು ಹೇಳಿದರು. ನೀರಿನ ಬಿಲ್ ಕಲೆಕ್ಟ್ ಮಾಡಲು ಓರ್ವ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸದಸ್ಯ ದಿವ್ಯನಾಥ ಶೆಟ್ಟಿ ಹೇಳಿದರು. ಪಿಡಿಓ ಪದ್ಮಕುಮಾರಿ ಉತ್ತರಿಸಿ ಸಿಬ್ಬಂದಿ ನೇಮಕಾತಿಗೆ ಗ್ರಾ.ಪಂಗೆ ಅವಕಾಶವಿಲ್ಲ ಎಂದರು. ನಂತರ ಚರ್ಚೆ ಮುಂದುವರಿಯಿತು. ಕೊನೆಗೆ ನೀರಿನ ಬಿಲ್ 20 ರೂ. ಹೆಚ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ್ದ ವಿಚಾರದಲ್ಲಿ ಚರ್ಚೆ:
ಗ್ರಾ.ಪಂನ ಕಾಮಗಾರಿಗೆ ಸಂಬಂಧಪಟ್ಟು ಸದಸ್ಯೆಯೋರ್ವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಕೇಳಿದ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಗ್ರಾ.ಪಂ ಸದಸ್ಯೆ ಜಯಂತಿ ಅವರು ಗ್ರಾ.ಪಂ ನೂತನ ಕಟ್ಟಡದ ಸ್ಥಳದ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೇಳಿದ್ದಾರೆ, ಗ್ರಾಮಸ್ಥರು ಮಾಹಿತಿ ಕೇಳುವುದಕ್ಕೆ ನಮ್ಮ ಅಭ್ಯಂತರವಿಲ್ಲ ಮತ್ತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಕೊಡುತ್ತಾರೆ. ಆದರೆ ಒಬ್ಬ ಗ್ರಾ.ಪಂ ಸದಸ್ಯೆಯಾಗಿ ಮಾಹಿತಿ ಕೇಳಿರುವುದು ಸರಿಯಲ್ಲ, ಇದು ಅವರ ಅಭಿವೃದ್ಧಿ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಸದಸ್ಯೆ ಜಯಂತಿ ಪ್ರತಿಕ್ರಿಯಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವುದು ಅಭಿವೃದ್ಧಿ ವಿರೋಧಿ ಹೇಗಾಗುತ್ತದೆ, ನಿಮ್ಮಲ್ಲಿ ನಾನು ಮಾಹಿತಿ ಕೇಳಿಲ್ಲ, ಯಾವುದೇ ಕಾಮಗಾರಿಗೆ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ, ನನಗೆ ಬೇಕಾಗಿದ್ದ ಮಾಹಿತಿಯನ್ನು ಕಾನನಾತ್ಮಕವಾಗಿ ಪಡೆಯಲು ಪ್ರಯತ್ನಿಸಿದ್ದೇನೆ, ಅದರಲ್ಲಿ ತಪ್ಪೇನು ಎಂದು ಕೇಳಿದರು.
ಸದಸ್ಯ ಮೋನಪ್ಪ ಪುಜಾರಿ ಮಾತನಾಡಿ ಸಾಮಾನ್ಯ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ಬಗ್ಗೆ ಇದುವರೆಗೆ ಚರ್ಚೆ ಆಗಿಲ್ಲ, ಇನ್ನು ಮುಂದಕ್ಕೆ ಎಲ್ಲಾ ಮಾಹಿತಿ ಹಕ್ಕುಗಳ ಅರ್ಜಿಗಳೂ ಸಭೆಯಲ್ಲಿ ಚರ್ಚೆಯಾಗಲಿ ಎಂದು ಹೇಳಿದರು. ಅಧ್ಯಕ್ಷ ಸಂತೋಷ್ ಮಣಿಯಾಣಿ ಉತ್ತರಿಸಿ ಗ್ರಾ.ಪಂ ಸದಸ್ಯರು ಗ್ರಾ.ಪಂ ವಿಚಾರದಲ್ಲಿ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೇಳಿದ್ದಕ್ಕೆ ನಮ್ಮ ಆಕ್ಷೇಪ ಇದೆಯೇ ಹೊರತು ಸಾರ್ವಜನಿಕರು ಕೇಳುವುದರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಹೇಳಿದರು.

ಬೀಳ್ಕೊಡುಗೆ ಕಾರ್ಯಕ್ರಮ: ಸದಸ್ಯರಿಗೆ ತಿಳಿಸದ್ದಕ್ಕೆ ಆಕ್ಷೇಪ
ಗ್ರಾ.ಪಂ ಸಾಮಾನ್ಯ ಸಭೆ ಪ್ರಾರಂಭವಾಗುವ ಮೊದಲು ಅರಿಯಡ್ಕ ಗ್ರಾಮದ ಪವರ್‌ಮ್ಯಾನ್‌ರೊಬ್ಬರಿಗೆ ಗ್ರಾ.ಪಂ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಕುರಿತು ಸದಸ್ಯ ಮೋನಪ್ಪ ಪೂಜಾರಿ ಅವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸದಸ್ಯರಿಗೆ ತಿಳಿಸದೇ ಬೀಳ್ಕೊಡುಗೆ ಕಾರ್ಯಕ್ರಮ ಹೇಗೆ ಹಮ್ಮಿಕೊಂಡಿದ್ದೀರಿ ಮತ್ತು ಇದಕ್ಕೆ ತಗಲುವ ಖರ್ಚನ್ನು ಭರಿಸುವುದು ಯಾರು? ಗ್ರಾ.ಪಂ ಖರ್ಚು ಭರಿಸುವುದಾದರೆ ಎಲ್ಲ ಸದಸ್ಯರಿಗೆ ಹೇಳಿ ಕಾರ್ಯಕ್ರಮ ಮಾಡಬೇಕಿತ್ತು ಎಂದು ಹೇಳಿದರು.
ಅಧ್ಯಕ್ಷ ಸಂತೋಷ್ ಮಣಿಯಾಣಿ ಉತ್ತರಿಸಿ ಗ್ರಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಪವರ್‌ಮ್ಯಾನ್ ಅವರು ವರ್ಗಾವಣೆಗೊಂಡಿರುವುದು ಮತ್ತು ಅವರು ಇಲ್ಲಿಂದ ಬೇರೆಡೆಗೆ ತುರ್ತಾಗಿ ಹೋಗುವ ಕಾರಣದಿಂದ ನಾನು ಅಧ್ಯಕ್ಷನ ವಿವೇಚನೆಯ ಮೇರೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ, ಇಂದು ಬೆಳಗ್ಗೆ ತೀರ್ಮಾನಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ನೀವೆಲ್ಲಾ ಸಾಮಾನ್ಯ ಸಭೆಗೆ ಬಂದಾಗ ಎಲ್ಲರೂ ಸೇರಿಕೊಂಡು ಕಾರ್ಯಕ್ರಮ ಮಾಡುವುದು ನನ್ನ ಉದ್ದೇಶವಾಗಿತ್ತು, ನೀವು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು ಎಂದು ಹೇಳಿದರು. ಮೋನಪ್ಪ ಪೂಜಾರಿ ಮಾತನಾಡಿ ಸದಸ್ಯರಿಗೆ ತಿಳಿಸದೇ ಮಾಡಿದ್ದಕ್ಕೆ ನನ್ನ ಖಂಡನೆ ಮತ್ತು ಆಕ್ಷೇಪ ಇದೆ ಎಂದು ಹೇಳಿದರು. ಅಧ್ಯಕ್ಷ ಸಂತೋಷ್ ಮಣಿಯಾಣಿ ಮಾತನಾಡಿ ಕಾರ್ಯಕ್ರಮಕ್ಕೆ ತಗುಲಿದ ವೆಚ್ಚವನ್ನು ಗ್ರಾ.ಪಂ ನಿಂದ ಭರಿಸಬಾರದು ಎಂದು ಸದಸ್ಯರೆಲ್ಲ ಹೇಳಿದರೆ ನಾನು ನನ್ನ ಕೈಯಿಂದ ಆ ಖರ್ಚನ್ನು ಭರಿಸುತ್ತೇನೆ, ಈ ಬಗ್ಗೆ ಸದಸ್ಯರು ಅಭಿಪ್ರಾಯ ತಿಳಿಸಬೇಕು ಎಂದು ಹೇಳಿದರು. ಸದಸ್ಯರಾದ ಸದಾನಂದ, ಹರೀಶ್ ರೈ ಜಾರತ್ತಾರು, ಹೇಮಾವತಿ ಚಾಕೋಟೆ, ವಿನಿತಾ, ಪುಷ್ಪಲತಾ, ಸಾವಿತ್ರಿ, ರಾಜೇಶ್ ಎಚ್, ಉಷಾರೇಖಾ ರೈ, ಭಾರತಿ, ಸೌಮ್ಯಾ ಬಾಲಸುಬ್ರಹ್ಮಣ್ಯ, ಲೋಕೇಶ್ ಚಾಕೋಟೆ ಮೊದಲಾದವರು ಮಾತನಾಡಿ ಕಾರ್ಯಕ್ರಮ ಆಯೋಜನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ಅಧ್ಯಕ್ಷರು ತೆಗೆದುಕೊಂಡ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ, ಖರ್ಚನ್ನು ಗ್ರಾ.ಪಂನಿಂದಲೇ ಭರಿಸಬೇಕೆಂದು ಹೇಳಿದರು. ಸದಸ್ಯರಾದ ಅಬ್ದುಲ್ ರಹಿಮಾನ್ ಮತ್ತು ಶಂಕರ ಅವರು ಕಾರ್ಯಕ್ರಮ ಆಯೋಜನೆ ಮಾಡುವಾಗ ಸದಸ್ಯರಿಗೆ ತಿಳಿಸಿದ್ದರೆ ಇನ್ನಷ್ಟು ಚೆನ್ನಾಗಿತ್ತು ಎಂದು ಹೇಳಿದರು. ನಂತರ ಗ್ರಾ.ಪಂನಿಂದಲೇ ಖರ್ಚು ಭರಿಸುವುದಾಗಿ ತೀರ್ಮಾನಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಶಿವರಾಮ ಕುಲಾಲ್ ಸ್ವಾಗತಿಸಿದರು. ಸಿಬ್ಬಂದಿ ಪ್ರಭಾಕರ ವರದಿ ವಾಚಿಸಿದರು. ಸದಸ್ಯರಾದ ನಾರಾಯಣ ನಾಯ್ಕ, ರೇಣುಕಾ, ಅನಿತಾ ಎ, ಪ್ರವೀಣ್ ಎ.ಜಿ, ಸಲ್ಮಾ, ವಿಜಿತ್ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here