ಮುಂಡೂರು ಶಾಲೆಯಲ್ಲಿ ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಿದಾಗ ಅವರು ಯಶಸ್ಸು ಸಾಧಿಸುತ್ತಾರೆ-ಚಂದ್ರಶೇಖರ್ ಎನ್‌ಎಸ್‌ಡಿ

ಪುತ್ತೂರು: ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ‘ಕಲಾತರಂಗ’ ಸೆ.15ರಂದು ಮುಂಡೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಭಾರ ಸಮನ್ವಯಾಧಿಕಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ನವೀನ್ ವೇಗಸ್ ಮಾತನಾಡಿ ಪ್ರಶಸ್ತಿ ಪಡೆಯುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಯಾವುದೇ ಕಾರಣಕ್ಕೂ ಇನ್ನೊಂದು ಮಕ್ಕಳ ಜೊತೆ ಹೋಲಿಕೆ ಮಾಡಬಾರದು ಎಂದು ಹೇಳಿದರು.
ಶಾಲಾ ದಾನಿ, ಮುಂಡೂರು ಸಿಎ ಬ್ಯಾಂಕ್ ನಿರ್ದೇಶಕಿ ಗುಲಾಬಿ ಎನ್ ಶೆಟ್ಟಿ ಕಂಪ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ತನುಜಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪುತ್ತೂರು ಇದರ ಅಧ್ಯಕ್ಷ ನವೀನ್ ರೈ ಮೊದಲಾದವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮಾತನಾಡಿ ಮಕ್ಕಳ ಪ್ರತಿಭೆಗೆ ಚಿಕ್ಕ ವಯಸ್ಸಿನಲ್ಲೇ ಪ್ರೋತ್ಸಾಹ ಸಿಕ್ಕಿದಾಗ ಅವರು ಯಶಸ್ಸು ಸಾಧಿಸುತ್ತಾರೆ, ಮಕ್ಕಳ ಪ್ರತಿಭೆ ಹೊರಬರಲು ಇಂತಹ ವೇದಿಕೆ ಸಹಕಾರಿಯಾಗಿದ್ದು ದೇಶದ ಸಂಸ್ಕೃತಿ, ಸಂಪ್ರದಾಯ, ಗುರು ಹಿರಿಯರ ಮಾರ್ಗದರ್ಶನ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿ ಆಗಲು ಸಾಧ್ಯ ಎಂದು ಅವರು ಹೇಳಿದರು.


ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪುತ್ತೂರು ಇದರ ಪ್ರ.ಕಾರ್ಯದರ್ಶಿ ನಾಗೇಶ್ ಪಾಟಾಳಿಉದ್ಯಮಿ ಸುಧೀರ್ ಶೆಟ್ಟಿ ನೇಸರಕಂಪ, ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಮುಂಡೂರು ಗ್ರಾ.ಪಂ ಉಪಾಧ್ಯಕ್ಷೆ ಯಶೋಧ ಅಜಲಾಡಿ, ನಿವೃತ್ತ ಶಿಕ್ಷಕ ಬಿ.ವಿ ಶಗ್ರಿತ್ತಾಯ ಉಪಸ್ಥಿತರಿದ್ದರು.
ಸಾಂದೀಪನಿ ಮತ್ತು ಶಾಂತಿಗಿರಿ ಸಂಸ್ಥೆಯವರು ನರಿಮೊಗರು ಕ್ಲಸ್ಟರ್ ಕೇಂದ್ರಕ್ಕೆ ಕೊಡುಗೆಗಳನ್ನು ನೀಡಿರುವುದಕ್ಕೆ ಆ ಶಾಲೆಯವರನ್ನು ಗೌರವಿಸಲಾಯಿತು. ಹಾಗೂ ಕ್ಲಸ್ಟರ್‌ನ ಉತ್ತಮ 6 ನಲಿಕಲಿ ತರಗತಿಯನ್ನು ಹೊಂದಿರುವ ಶಾಲೆಯನ್ನು ಗುರುತಿಸಲಾಯಿತು.

ಶಿಕ್ಷಕಿ ಶುಭಲತಾಗೆ ಸನ್ಮಾನ:
ಈ ಸಾಲಿನ ಜಿಲ್ಲಾ ಉತ್ತಮ ಪ್ರಶಸ್ತಿ ಪುರಸ್ಕೃತ ಆನಡ್ಕ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಸನ್ಮಾನ ಪತ್ರ ವಾಚಿಸಿದರು.

ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ:
ನರಿಮೊಗರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಶಿಕ್ಷಕಿಯರನ್ನು ಗೌರವಿಸಲಾಯಿತು. ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಜಯಶ್ರೀ ಶ್ರೀನಿವಾಸ್, ಎಸ್‌ಜಿಎಂ ಪ್ರೌಢ ಶಾಲೆಯ ಇನ್ನೋರ್ವ ಶಿಕ್ಷಕಿ ಪುಷ್ಪಾವತಿ, ಕುರಿಯ ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಲೀಲಾವತಿ, ಮುಕ್ವೆ ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ವೇದಾವತಿ, ನರಿಮೊಗರು ಪ್ರಾ. ಶಾಲೆಯ ಶಿಕ್ಷಕಿ ಶಾರದಾ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಸನ್ಮಾನ ಪತ್ರ ವಾಚಿಸಿದರು.

ಫ್ಯಾನ್ ಕೊಡುಗೆ:
ಸನ್ಮಾನ ಸ್ವೀಕರಿಸಿದ ಮುಕ್ವೆ ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ವೇದಾವತಿ ಅವರು ನರಿಮೊಗರು ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಫ್ಯಾನ್ ಕೊಡುಗೆಯಾಗಿ ನೀಡಿದರು.

ಇಬ್ಬರು ಶಿಕ್ಷಕರಿಗೆ ಸನ್ಮಾನ:
ನರಿಮೊಗರು ಸಮೂಹ ಸಂಪನ್ಮೂಲ ಕೇಂದ್ರವನ್ನು ಸೌಂದರ್ಯಗೊಳಿಸಿದ ಸರ್ವೆ ಕಲ್ಪಣೆ ಪ್ರಾ.ಶಾಲೆಯ ಶಿಕ್ಷಕ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಅವರಿಗೆ ಸಹಕಾರ ನೀಡಿದ ಹಿರಿಯ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತಗೊಂಡಿರುವ ಇಡ್ಯೊಟ್ಟು ಶಾಲಾ ಶಿಕ್ಷಕ ದೇವಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ-ರಮೇಶ್ ಪಜಿಮಣ್ಣು
ಮುಂಡೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಯೋಜಿಸಲು ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ. ದಾನಿಗಳ ಹಾಗೂ ಎಸ್‌ಡಿಎಂಸಿಯವರ ಸಹಕಾರ, ಶಿಕ್ಷಕ ವೃಂದದವರ ಅವಿರತ ಪರಿಶ್ರಮದ ಫಲವಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ. ಇದರಿಂದಾಗಿ ನಮ್ಮ ಶಾಲೆ ಪ್ರಶಂಸೆಗೆ ಪಾತ್ರವಾಗಿದೆ. ನಮ್ಮೆಲ್ಲರ ಒಗ್ಗಟ್ಟಿನ ಫಲವಾಗಿ ನಮ್ಮ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಯಾದರೂ ಅದು ನೂರಕ್ಕೆ ನೂರು ಯಶಸ್ಸು ಕಾಣುತ್ತದೆ ಎಂದು ಮುಂಡೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ತಿಳಿಸಿದ್ದಾರೆ.

ಮುಂಡೂರು ಶಾಲಾ ಮುಖ್ಯ ಶಿಕ್ಷಕಿ ವಿಜಯಾ ಪಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ವಂದಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಕೆ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ವೃಂದದವರಾದ ರಾಮಚಂದ್ರ ಗೌಡ, ವನಿತಾ ಬಿ, ರವೀಂದ್ರ ಶಾಸ್ತ್ರಿ, ಶಶಿಕಲಾ ಟಿ, ನಾಗವೇಣಿ, ರೂಪಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here