ಪುತ್ತೂರು: ಕುಂಬ್ರ ವರ್ತಕರ ಸಂಘವು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಬಗ್ಗೆ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ವಿಭಿನ್ನವಾಗಿ ವರ್ಷಾಚರಣೆಯನ್ನು ಮಾಡುವುದು ಎಂದು ಸಂಘದ ಮಾಸಿಕ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ಅಧ್ಯಕ್ಷತೆಯಲ್ಲಿ ಸೆ.20ರಂದು ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಛೇರಿಯಲ್ಲಿ ನಡೆಯಿತು. ಸಂಘಕ್ಕೆ 2024 ಅಕ್ಟೋಬರ್ 10 ಕ್ಕೆ 20 ವರ್ಷ ತುಂಬುವುದರಿಂದ ವರ್ಷದ ಪೂರ್ತಿ 10 ಕಾರ್ಯಕ್ರಮಗಳನ್ನು ಮಾಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಇದಲ್ಲದೆ ಈ ಹಿಂದೆ ಒಳಮೊಗ್ರು ಗ್ರಾಮ ಪಂಚಾಯತ್‌ನಲ್ಲಿ ಆಧಾರ್ ಕಾಡ್ ತಿದ್ದುಪಡಿ ಕೇಂದ್ರವು ಚಾಲನೆಯಲ್ಲಿತ್ತು ಈ ಕೇಂದ್ರವನ್ನು ಮತ್ತೆ ಸ್ಥಾಪಿಸಲು ಪಂಚಾಯತ್‌ಗೆ ಮನವಿ ಮಾಡುವುದು, ಕುಂಬ್ರದ ಬೀದಿ ದೀಪಗಳನ್ನು ಸರಿಪಡಿಸಲು ಪಂಚಾಯತ್‌ಗೆ ಮನವಿ ನೀಡುವುದು, ಅಂಚೆ ಕಛೇರಿಯಲ್ಲೂ ಆಧಾರ್ ತಿದ್ದುಪಡಿ ವ್ಯವಸ್ಥೆ ಮಾಡುವಂತೆ ಮನವಿ ಮಾಡುವುದು, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸಂಘದ ವತಿಯಿಂದ 50 ಕೆ.ಜಿ ಅಕ್ಕಿಯ ಬಾಬ್ತು ರೂ.2 ಸಾವಿರ ನೀಡುವುದು ಎಂದು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಮಾಧವ ರೈ ಕುಂಬ್ರ, ಕೋಶಾಧಿಕಾರಿ ಎ.ಆರ್.ಸಂಶುದ್ದೀನ್, ಉಪಾಧ್ಯಕ್ಷರುಗಳಾದ ರಮ್ಯಶ್ರೀ, ಉದಯ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ಚರಿತ್ ಕುಮಾರ್, ರೇಷ್ಮಾ, ಸುರೇಶ್ ಕುಮಾರ್ ಸುಶಾ, ರಮೇಶ್ ಆಳ್ವ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಭವ್ಯ ರೈ ಸ್ವಾಗತಿಸಿ, ವಂದಿಸಿದರು.
ಇಲಾಖೆಯ ಸಿಸಿಟಿವಿ ದುರಸ್ತಿಗೆ ಸಂಘದಿಂದ 7500 ರೂ.ಕೊಡುಗೆ
ಪೊಲೀಸ್ ಇಲಾಖೆಯಿಂದ ಕುಂಬ್ರ ಜಂಕ್ಷನ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಪೊಲೀಸ್ ಇಲಾಖೆ ದುರಸ್ತಿ ಮಾಡಿದ್ದು ಇದಕ್ಕೆ 15 ಸಾವಿರ ರೂ. ಖರ್ಚು ತಗಲಿದ್ದು ಈ ಬಗ್ಗೆ ಸಂಘಕ್ಕೆ ಇಲಾಖೆ ಮನವಿ ಮಾಡಿ ಸಹಾಯ ಕೇಳಿರುವುದರಿಂದ ರೂ.7500 ಅನ್ನು ಸಂಘದ ವತಿಯಿಂದ ಪೊಲೀಸ್ ಠಾಣೆಗೆ ನೀಡುವುದು ಎಂದು ನಿರ್ಣಯಿಸಲಾಯಿತು.