ಪದವಿ ಶಿಕ್ಷಣದ ಜೊತೆಗೆ ಬೇಡಿಕೆಯಿರುವ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಆದ್ಯತೆ ನೀಡಿ : ದೀಕ್ಷಿತ್ ಕುಮಾರ್
ಪುತ್ತೂರು: ಬಿಕಾಂ, ಬಿಬಿಎ ಪದವಿಗಳ ಜೊತೆಗೆ ಔದ್ಯೋಗಿಕ ಲೋಕ ನಿರೀಕ್ಷಿಸುವ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಪೂರ್ತಿಗೊಳಿಸಬೇಕು. ಆ ಮೂಲಕ ವಿಷಯದ ವಿಸ್ತಾರ ಜ್ಞಾನ, ಕೌಶಲ್ಯಗಳ ವೃದ್ಧಿ ಮಾಡಿಕೊಂಡು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ತಯಾರಿನಡೆಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದೀಕ್ಷಿತ್ ಕುಮಾರ್ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಆಯೋಜಿಸಿದ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ವಿದ್ಯಾರ್ಥಿಗಳು ತಂತ್ರಜ್ಞಾನದ ಬಳಕೆಯನ್ನು ವಿವೇಚನೆಯಿಂದ ಮಾಡಿದಾಗ ಯಶಸ್ಸು ಸಾಧ್ಯ ಎಂದರು. ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೆಳವಣಿಗೆ ತಂದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಹರಿಪ್ರಸಾದ್ ಎಸ್ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿನ ಅರ್ಥಪೂರ್ಣ ಭಾಗವಹಿಸುವಿಕೆಯ ಮಹತ್ವವನ್ನು ತಿಳಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಹಮ್ಮದ್ ಎಸ್.ಎಂ. ಇವರು ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸ್ವಯಂ ಕೋರ್ಸ್ ಗಳ ಬಗೆಗಿನ ಕಾರ್ಯಾಗಾರ
ವಾಣಿಜ್ಯ ಮತ್ತು ನಿರ್ವಹಣಾ ಸಂಘದ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನೆಯ ನಂತರ ಆನ್ಲೈನ್ ಕೋರ್ಸ್ ಗಳ ಬಗೆಗಿನ ಕಾರ್ಯಾಗಾರ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ . ದೀಕ್ಷಿತ್ ಕುಮಾರ್ ಇವರು ಆನ್ಲೈನ್ ಕೋರ್ಸ್ ಗಳ ಮಹತ್ವದ ಬಗ್ಗೆ ತಿಳಿಸಿದರು. ಯುಜಿಸಿಯ ಸ್ವಯಂ ಕೋರ್ಸ್ ಗಳು, ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಹಾಗೂ ಕೋರ್ಸ್ ಎರ ದಂತಹ ಪ್ರತಿಷ್ಠಿತ ಆನ್ಲೈನ್ ಪ್ಲಾಟ್ಫಾರ್ಮ್ ಗಳ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿಗಳು ಆನ್ಲೈನ್ ಕೋರ್ಸ್ ಗಳಿಗೆ ನೋಂದಾವಣಿ ಮಾಡಿಕೊಂಡರು.
ಅಂತಿಮ ಪದವಿಯ ಬಿ ಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಜೊತೆ ಕಾರ್ಯದರ್ಶಿ ಶಕೀಲಾ ಫರ್ವಿನ್ ಕೆ. ಪಿ. ಸ್ವಾಗತಿಸಿದರು, ಕಾರ್ಯದರ್ಶಿ ಅನುಷಾ ಅತಿಥಿ ಪರಿಚಯವನ್ನು ನೆರವೇರಿಸಿದರು, ವರದಿ ಸಮಿತಿಯ ಬಿಂದು ಡಿ. ಸಿ. ವಂದಿಸಿದರು, ಜೊತೆ ಕಾರ್ಯದರ್ಶಿ ಶ್ವೇತಾ ಜೆ.ಕೆ. ಕಾರ್ಯಕ್ರಮ ನಿರೂಪಿಸಿದರು.