ಸಮಾಜಮುಖಿ ಚಿಂತನೆಯೊಂದಿಗೆ ಮಾಧ್ಯಮ ಸಂಸ್ಥೆ ಬೆಳಗಲಿ-ಸುಮಾ ಅಶೋಕ್ ರೈ
ಪುತ್ತೂರು: ‘ಇದು ವಿಶ್ವಾಸದ ಧ್ವನಿ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ನಿರ್ವಹಿಸಲಿರುವ ‘ನ್ಯೂಸ್ ಅಕ್ಕರೆ’ಯ ಲೋಕಾರ್ಪಣೆ ಸೆ.21ರಂದು ಸಂಜೆ ಕೋಡಿಂಬಾಡಿಯ ಸೇಡಿಯಾಪು ಕ್ರೀಡಾಂಗಣದಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ, ಉದ್ಯಮಿ ಸುಮಾ ಅಶೋಕ್ ರೈ ಅವರು ‘ನ್ಯೂಸ್ ಅಕ್ಕರೆ’ಯನ್ನು ಲ್ಯಾಪ್‌ಟಾಪ್ ಕಂಪ್ಯೂಟರ್‌ನಲ್ಲಿ ವೆಬ್‌ಸೈಟ್ ಬಟನ್ ಒತ್ತುವ ಮೂಲಕ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಹಲವು ಹೊಸ ಹೊಸ ಚಿಂತನೆಗಳೊಂದಿಗೆ ಕಾರ್ಯಾರಂಭಗೊಂಡಿರುವ ಜಯಪ್ರಕಾಶ್ ಬದಿನಾರು ಮತ್ತು ಅವರ ತಂಡದವರ ನ್ಯೂಸ್ ಅಕ್ಕರೆ ಮಾಧ್ಯಮ ಸಂಸ್ಥೆ ಸಮಾಜಮುಖಿ ಚಿಂತನೆಯೊಂದಿಗೆ ಉತ್ತಮವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಪೂರ್ಣಿಮಾ ಯತೀಶ್ ಶೆಟ್ಟಿ ಬರೆಮೇಲು, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು, ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಮಡಿವಾಳ, ವಿನುತಾ ಜಯಪ್ರಕಾಶ್ ಬದಿನಾರು, ಕೃಷ್ಣಪ್ರಸಾದ್ ಪೆರಿಯಡ್ಕ, ಮೋಹನ್ ಗುರ್ಜಿನಡ್ಕ, ರಾಮಣ್ಣ ಪಿಲಿಂಜ, ಶ್ರೀಧರ್ ಮಾಣಿಲ, ಕಮಲೇಶ್ ಸರ್ವೆದೋಳಗುತ್ತು, ಹೇಮಂತ್ ಸೇಡಿಯಾಪು, ತಿಲಕ್ ಸೇಡಿಯಾಪು ಮತ್ತಿತರರು ಉಪಸ್ಥಿತರಿದ್ದರು.
ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಅಶ್ವತ್ಥಕಟ್ಟೆ ವಠಾರದಲ್ಲಿ ಮೂರು ದಿನ ನಡೆದ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ಪ್ರಯುಕ್ತ ಅಕ್ಕರೆ ನ್ಯೂಸ್ ವತಿಯಿಂದ ಸೇಡಿಯಾಪು ಕ್ರೀಡಾಂಗಣದಲ್ಲಿ ರಾಜ್ ಡ್ಯಾನ್ಸ್ ಪುತ್ತೂರು ಮತ್ತು ಮೂಡಬಿದ್ರೆಯ ಆರಾಧಾನ ಡ್ಯಾನ್ಸ್ ತಂಡದವರಿಂದ ಗಣೇಶ ಸಂಭ್ರಮ ಹಾಗೂ ಡ್ಯಾನ್ಸ್ ಧಮಾಕ ನಡೆಯಿತು. ಮಜಾಭಾರತ್ ಖ್ಯಾತಿಯ ಆರಾಧನಾ ಭಟ್ ಮೂಡಬಿದ್ರೆ, ಪದ್ಮರಾಜ್ ಡಿ.ಸಿ. ಚಾರ್ವಾಕ ಮತ್ತು ದೀಪಕ್ ರಾಮನಗರ ಕಾರ್ಯಕ್ರಮ ನಿರೂಪಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ಶೀನಪ್ಪ ಪೂಜಾರಿ ಬದಿನಾರು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರದ್ವಿನ್ ಬದಿನಾರು ಪ್ರಾರ್ಥಿಸಿದರು. ಆರಾಧನಾ ಭಟ್ ಮೂಡಬಿದ್ರೆ ಮತ್ತು ಶಿಕ್ಷಕ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
ಭ್ರಷ್ಟರ ವಿರುದ್ಧ ಸಮರ ಸಾರುವ ಕಾರ್ಯ-ಜಯಪ್ರಕಾಶ್ ಬದಿನಾರು
ಸಮಾಜದ ಆಗು ಹೋಗುಗಳನ್ನು ಕ್ಷಣ ಕ್ಷಣದಲ್ಲಿ ಜನರಿಗೆ ತಿಳಿಸುವ ಸಲುವಾಗಿ ನ್ಯೂಸ್ ಅಕ್ಕರೆ ಆರಂಭಿಸಲಾಗಿದೆ. ಮಾಧ್ಯಮ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ಭ್ರಷ್ಟರ ವಿರುದ್ಧ ಸಮರ ಸಾರುವ ಕಾರ್ಯವನ್ನು ನ್ಯೂಸ್ ಅಕ್ಕರೆ ಬಳಗ ನಡೆಸಲಿದೆ. ವಿವಿಧ ಮಾಹಿತಿಗಳನ್ನು ಜನತೆಗೆ ನೀಡುವುದರೊಂದಿಗೆ ನಿಖರವಾದ ಸುದ್ದಿಗಳನ್ನು ನೀಡಲಿದ್ದೇವೆ. ಜಾತಿ, ಧರ್ಮ, ಪಕ್ಷದ ಭೇದ ಇಲ್ಲದೆ ಎಲ್ಲರನ್ನೂ ನ್ಯೂಸ್ ಅಕ್ಕರೆ ಬಳಗ ತಲುಪಲಿದೆ. ನ್ಯೂಸ್ ಅಕ್ಕರೆ ಸಂಸ್ಥೆಯನ್ನು ಜನರು ಅಕ್ಕರೆಯಿಂದ ಪ್ರೀತಿಸಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿರುವ ನ್ಯೂಸ್ ಅಕ್ಕರೆ ಬಳಗದ ಮುಖ್ಯಸ್ಥ ಜಯಪ್ರಕಾಶ್ ಬದಿನಾರು ವಿನಂತಿಸಿದ್ದಾರೆ.