ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ವ್ಯಾಪಾರ ಪರವಾನಿಗೆ ಶುಲ್ಕ ವಿಧಿಸುವಾಗ ತಾರತಮ್ಯವೆಸಗಲಾಗುತ್ತಿದೆ. ಇದರಿಂದ ಗ್ರಾ.ಪಂ. ಅಭಿವೃದ್ಧಿ ನಿಧಿಗೆ ಅಂದಾಜು 15 ಸಾವಿರದಷ್ಟು ನಷ್ಟವಾಗುತ್ತಿದೆ. ಆದ್ದರಿಂದ ಪರವಾನಿಗೆ ಶುಲ್ಕದ ಬಗ್ಗೆ ತುರ್ತಾಗಿ ವರ್ತಕರ ಸಭೆ ಕರೆದು ಚರ್ಚೆ ನಡೆಸಿ, ಬೈಲಾ ತಯಾರಿಸಿ ಜಿ.ಪಂ.ನಿಂದ ಅನುಮೋದನೆ ಪಡೆದುಕೊಂಡು ಅದರಂತೆ ಆಯಾಯ ವ್ಯಾಪಾರ, ಉದ್ಯಮಕ್ಕನುಗುಣವಾಗಿ ಎಲ್ಲರಿಗೂ ಸಮನಾಗಿ ತೆರಿಗೆ ವಿಧಿಸಬೇಕೆಂಬ ಆಗ್ರಹ 34 ನೆಕ್ಕಿಲಾಡಿಯ ಗ್ರಾಮ ಸಭೆಯಲ್ಲಿ ಕೇಳಿಬಂತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ 34 ನೆಕ್ಕಿಲಾಡಿಯ ಗ್ರಾ.ಪಂ. ಸಭಾಂಗಣದಲ್ಲಿ ಸೆ.20ರಂದು ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಶಬೀರ್ ಅಹ್ಮದ್, ಗ್ರಾ.ಪಂ. ಆಡಳಿತವು ವ್ಯಾಪಾರ ತೆರಿಗೆಯನ್ನು ಪರಿಷ್ಕರಿಸಿ ನಿರ್ಣಯವೊಂದನ್ನು ಮಾಡಿ, ಅದನ್ನು ಅನುಷ್ಠಾನಕ್ಕೆ ತಂದಿದ್ದು, ಅದರಲ್ಲಿ ಆಯಾಯ ವ್ಯಾಪಾರ, ಉದ್ಯಮಗಳಿಗೆ ವಿವಿಧ ಶುಲ್ಕಗಳನ್ನು ವಿಧಿಸಿದೆ. ಆದರೆ ಕೆಲವರಿಂದ ಮಾತ್ರ ನಿಗದಿತ ಶುಲ್ಕವನ್ನು ಗ್ರಾ.ಪಂ. ವಸೂಲಿ ಮಾಡಿದೆ. ಇನ್ನು ಕೆಲವರಿಂದ 5೦೦೦ದ ಬದಲಾಗಿ 1 ಸಾವಿರ ರೂ., 1೦೦೦ ಸಾವಿರದ ಬದಲಾಗಿ 5೦೦ ರೂ. ಪರವಾನಿಗೆ ಶುಲ್ಕವನ್ನು ಪಡೆಯುವ ಮೂಲಕ ತಾರತಮ್ಯ ಎಸಗಿದೆ. ಗ್ರಾ.ಪಂ. ನಿರ್ಣಯ ಮಾಡಿದಂತೆ ತೆರಿಗೆ ವಸೂಲಾತಿ ನಡೆಯದಿರುವುದರಿಂದ ಗ್ರಾ.ಪಂ.ನ ಅಭಿವೃದ್ಧಿ ನಿಧಿಗೆ ವಾರ್ಷಿಕವಾಗಿ ಅಂದಾಜು 15 ಸಾವಿರ ರೂ.ನಷ್ಟು ನಷ್ಟವುಂಟಾಗುವಂತಾಗಿದೆ. ಇದರಿಂದಾಗಿ ಗ್ರಾ.ಪಂ.ನ ಅಭಿವೃದ್ಧಿಗೂ ಹೊಡೆತ ಬಿದ್ದಿದೆ ಎಂದರು. ಇದಕ್ಕೆ ಪೂರಕವಾಗಿ ಗ್ರಾಮಸ್ಥರಾದ ಅನಿ ಮಿನೇಜಸ್, ಅಸ್ಕರ್ ಅಲಿ, ರೂಪೇಶ್ ರೈ ಅಲಿಮಾರ್ ಮಾತನಾಡಿ, ತೆರಿಗೆಯ ನಿರ್ದಿಷ್ಟ ಮಾನದಂಡವನ್ನು ಬಿಟ್ಟು ನಿಮಗೆ ಬೇಕಾದವರಿಗೆ ತೆರಿಗೆಯನ್ನು ಕಡಿಮೆ ಮಾಡುವುದು ಯಾಕೆ? ಇಂತಹ ತಾರತಮ್ಯ ಸರಿಯಲ್ಲ. ಕೆಲವರಿಗೆ ತೆರಿಗೆ ಕಮ್ಮಿ ಮಾಡಿದ್ದೀರಿ. ಅದೇ ವ್ಯಾಪಾರ ನಡೆಸುವ ಕೆಲವರಲ್ಲಿ ನಿರ್ದಿಷ್ಟ ಮಾನದಂಡದಂತೆ ತೆರಿಗೆ ವಸೂಲಿ ಮಾಡಿದ್ದೀರಿ. ಅದನ್ನು ವಾಪಸ್ ಕೊಡುತ್ತೀರಾ ಎಂದರು. ಈ ಬಗ್ಗೆ ಸಮಗ್ರ ಚರ್ಚೆಯಾದ ಬಳಿಕ ವರ್ತಕರ ಸಭೆ ಕರೆದು ಅಲ್ಲಿ ತೆರಿಗೆಯ ಬಗ್ಗೆ ಚರ್ಚಿಸಿ, ಬೈಲಾ ತಯಾರಿಸಿ ಅದಕ್ಕೆ ಜಿ.ಪಂ. ನಿಂದ ಅನುಮೋದನೆ ಪಡೆದುಕೊಂಡು ಅದರಂತೆ ತೆರಿಗೆಯನ್ನು ವಸೂಲಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಮುಗಿಯದ ದಾರಿ ದೀಪ ಸಮಸ್ಯೆ: ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರಿ ದೀಪ ಸಮಸ್ಯೆ ಮುಗಿಯುತ್ತಿಲ್ಲ. ಈಗ ಟೆಂಡರ್ ಪಡೆದುಕೊಂಡವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದಾರಿ ದೀಪ ಉರಿಯದ ಬಗ್ಗೆ ಗ್ರಾ.ಪಂ.ಗೆ, ಸದಸ್ಯರಿಗೆ ದೂರು ನೀಡಿದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ. ಆದ್ದರಿಂದ ಆ ಟೆಂಡರ್ದಾರರ ಹಣವನ್ನು ಯಾವುದೇ ಕಾರಣಕ್ಕೂ ನೀಡಬಾರದು. ಅದನ್ನು ಪೆಂಡಿಂಗ್ ಇಡಬೇಕೆಂಬ ಆಗ್ರಹ ಗ್ರಾಮ ಸಭೆಯಲ್ಲಿ ಕೇಳಿ ಬಂತು. ದಾರಿ ದೀಪವನ್ನು ಉರಿಸುವವರು ಬೆಳಗ್ಗೆಯಾದೊಡನೆ ನಂದಿಸಲು ಮುಂದಾಗುತ್ತಿಲ್ಲವೆಂಬ ಗ್ರಾ.ಪಂ. ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ದಾರಿ ದೀಪವನ್ನು ರಾತ್ರಿ ಬೆಳಗಿಸೋದು, ಬೆಳಗ್ಗೆ ನಂದಿಸುವ ಹೊಣೆಯನ್ನು ನೀರಗಂಟಿಗಳಿಗೆ ಕೊಡಿ ಎಂದು ಆಗ್ರಹಿಸಿದರು.
ನಿರ್ಣಯಕ್ಕೆ ಬೆಲೆಯಿಲ್ಲವೇ?: ಕಳೆದ ಗ್ರಾಮ ಸಭೆಯಲ್ಲಿ ಭೂಮಿ ಕರ ಬೇಡ ಅನ್ನುವ ನಿರ್ಣಯವನ್ನು ಮಾಡಲಾಗಿದೆ. ಆದರೆ ಇಲ್ಲಿನ ಪಿಡಿಒ ಅವರು ಬಲವಂತವಾಗಿ ಭೂಮಿ ಕರವನ್ನು ಪಡೆಯುತ್ತಿದ್ದಾರೆ. ಹಾಗಾದರೆ ಗ್ರಾಮಸ್ಥರ ನಿರ್ಣಯಕ್ಕೆ ಬೆಲೆಯಿಲ್ಲವೆ ಎಂದು ಕಲಂದರ್ ಶಾಫಿ ಪ್ರಶ್ನಿಸಿದರು. ಆಗ ಪಿಡಿಒ ಸತೀಶ್ ಡಿ. ಬಂಗೇರ ಮಾತನಾಡಿ, 9(11) ಜಾಗಕ್ಕೆ ಭೂಮಿ ಕರ ಪಡೆಯಬೇಕೆಂದು ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಅದರಂತೆ ಭೂಮಿ ಕರವನ್ನು ಪಡೆಯಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಗ್ರಾಮಸ್ಥ ರಾಬರ್ಟ್ ಡಿಸೋಜ ಮಾತನಾಡಿ, 9(11) ಜಾಗದಲ್ಲಿ ಕಟ್ಟಡ ಕಟ್ಟಿದ್ದಕ್ಕೆ ಗ್ರಾ.ಪಂ. ತೆರಿಗೆಯನ್ನು ಹಾಕುತ್ತದೆ. ಆದರೆ ಕಟ್ಟಡದ ಅಡಿ ಸ್ಥಳಕ್ಕೂ ಪ್ರತ್ಯೇಕ ಭೂಮಿ ಕರ ವಿಧಿಸುವುದು ಸರಿಯಲ್ಲ. ಕಟ್ಟಡದ ಅಡಿ ಸ್ಥಳಬಿಟ್ಟು ಬೇರೆ 9(11) ಜಾಗವಿದ್ದಲ್ಲಿ ಅದಕ್ಕೆ ಮಾತ್ರ ಭೂಮಿ ಕರ ವಿಧಿಸಿ ಎಂದರು. ಎಲ್ಲೂ ಇಲ್ಲದ ಈ ಭೂಮಿ ಕರ ನೆಕ್ಕಿಲಾಡಿಯಲ್ಲಿ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಅಬ್ದುರ್ರಹ್ಮಾನ್ ಯುನಿಕ್, ಮುಂದಿನ ಸರಕಾರಿ ಆದೇಶ ಬರುವವರೆಗೆ ಭೂಮಿ ಕರವನ್ನು ತೆಗೆದುಕೊಳ್ಳಬಾರದು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಅಡಳಿತ ಮಂಡಳಿ ನಿರ್ಣಯ ಮಾಡಿ ಎಂದರು. ಆಗ ಸದಸ್ಯ ರಮೇಶ್ ನಾಯ್ಕ ಮಾತನಾಡಿ, ನಾವು ಈಗಾಗಲೇ ನಿರ್ಣಯ ಮಾಡಿದ್ದೇವೆ ಎಂದರು. ಆಗ ಅಬ್ದುರ್ರಹ್ಮಾನ್ ಮಾತನಾಡಿ, ನೀವು ನಿರ್ಣಯ ಮಾಡಿದ ಮೇಲೂ ಇಲ್ಲಿ ಭೂಮಿ ಕರವನ್ನು ಪಡೆಯಲಾಗುತ್ತದೆ ಎಂದರೆ ನಿಮ್ಮ ನಿರ್ಣಯಕ್ಕೂ ಇಲ್ಲಿ ಬೆಲೆಯಿಲ್ಲವೇ? ಎಂದು ಪ್ರಶ್ನಿಸಿದರು. ಈ ಬಗ್ಗೆ ಸಮಗ್ರ ಚರ್ಚೆ ನಡೆದು, ಗ್ರಾಮಸ್ಥರ ಬೇಡಿಕೆಯನ್ನು ನಾನು ಮೇಲಾಧಿಕಾರಿಗಳಿಗೆ ಕಳುಹಿಸುವುದು ಹಾಗೂ ಅವರ ಆದೇಶ ಬರುವವರೆಗೆ ಭೂಮಿ ಕರ ಪಡೆಯದಂತೆ ನಿರ್ಣಯ ಅಂಗೀಕರಿಸಲಾಯಿತು.
ದಲಿತರ ಭೂಮಿಗೆ ಕೈ ಹಾಕಬೇಡಿ: ಬೀತಲಪ್ಪುವಿನಲ್ಲಿ ಸುಮಾರು 50 ವರ್ಷಕ್ಕಿಂತಲೂ ಪೂರ್ವದಿಂದ ದಲಿತ ಸಮುದಾಯದವರೋರ್ವರ ವಶದಲ್ಲಿ ಸರಕಾರಿ ಭೂಮಿ ಇದೆ. ಇದಕ್ಕೆ ಅಲ್ಲಿರುವ ತೆಂಗಿನ ಮರಗಳೇ ಸಾಕ್ಷಿ. ಈಗ ಇದನ್ನು ಗ್ರಾ.ಪಂ. ತನ್ನ ವಶಕ್ಕೆ ಪಡೆಯಲು ನೋಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಆ ಭೂಮಿಯನ್ನು ಗ್ರಾ.ಪಂ.ನ ವಶಕ್ಕೆ ನೀಡಬಾರದು. ಅದನ್ನು ಅವರಿಗೇ ನೀಡಬೇಕು ಎಂದು ರೂಪೇಶ್ ರೈ ಅಲಿಮಾರ್ ತಿಳಿಸಿದರು. ಅನಿ ಮಿನೇಜಸ್ ಕೂಡಾ ಇದಕ್ಕೆ ಧ್ವನಿಗೂಡಿಸಿದರು. ಆಗ ಗ್ರಾ.ಪಂ. ಸದಸ್ಯ ವಿಜಯಕುಮಾರ್ ಮಾತನಾಡಿ, ಮೊದಲು ಒತ್ತುವರಿ ಮಾಡಿಕೊಂಡಿದ್ದೇ ಅವರಲ್ಲಿ ಇರುತ್ತಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ. ಆದರೆ ಅವರು ಅದನ್ನು ಬೇರೆಯವರಿಗೆ ಮಾರಿದ್ದಾರೆ ಹಾಗೂ ಸುಮಾರು 20 ಸೆಂಟ್ಸ್ನಷ್ಟು ಅಲ್ಲಿದ್ದ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರಸ್ತೆ ಬದಿಗೆ ಬೇಲಿ ಹಾಕಿದ್ದಾರೆ. ಆದ್ದರಿಂದ ಇಷ್ಟೆಲ್ಲಾ ಬೆಳವಣಿಗೆಗಳು ಕಾರಣವಾಗಿದೆ ಎಂದರು. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಮಾತನಾಡಿ, ಆ ಭೂಮಿಯನ್ನು ಗ್ರಾ.ಪಂ. ಪಡೆದುಕೊಂಡು ಅಂಬೇಡ್ಕರ್ ಭವನ ಹಾಗೂ ದಫನ ಭೂಮಿಗೆ ಕಾಯ್ದಿರಿಸಲು ಯೋಚನೆಯಿದೆ ಎಂದರು. ಆಗ ರೂಪೇಶ್ ರೈ ಮಾತನಾಡಿ, ಹೆಚ್ಚಿನ ಎಲ್ಲರೂ ಸರಕಾರಿ ಭೂಮಿಯನ್ನೇ ಅಕ್ರಮ- ಸಕ್ರಮದ ಮೂಲಕ ತಮ್ಮ ಸ್ವಂತದ್ದಾಗಿ ಮಾಡಿಕೊಂಡವರೇ ಇರುವುದು. ಸದಸ್ಯರುಗಳು ಯಾರೂ ಈ ರೀತಿ ಮಾಡಿಸಿಲ್ವಾ?. ಹಣವಿದ್ದವರು ಎಲ್ಲಾವನ್ನು ಮಾಡಿಸಿಕೊಂಡಿದ್ದಾರೆ. ಆದರೆ ಇವರು ಬಡವರು. ಹಲವು ವರ್ಷಗಳಿಂದ ಈ ಜಾಗ ಅವರ ಸ್ವಾಧೀನದಲ್ಲಿದ್ದರೂ, ಅದನ್ನು ಅವರಿಗೆ ತಮ್ಮ ಸ್ವಂತದ್ದಾಗಿ ಮಾಡಿಸಿಕೊಳ್ಳಲು ಬಡತನ, ಮಾಹಿತಿಯ ಕೊರತೆಯಿಂದ ಆಗಿಲ್ಲ. ಇವರಿಗೆ ಈ ಭೂಮಿಯನ್ನು ಅಕ್ರಮ – ಸಕ್ರಮದಲ್ಲಿ ಮಾಡಿಕೊಡದ್ದು ತಪ್ಪು ಸರಕಾರಗಳದ್ದು. ಆದ್ದರಿಂದ ಅವರು ಈಗ ರಸ್ತೆ ಮಾರ್ಜಿನ್ನನ್ನು ಒತ್ತುವರಿ ಮಾಡಿಕೊಂಡು ಹಾಕಿರುವ ಬೇಲಿಯನ್ನು ತೆರವುಗೊಳಿಸಿ. ಆದರೆ ಅವರು ಈ ಮೊದಲಿನಿಂದ ಅನುಭವಿಸಿಕೊಂಡು ಬಂದಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಮುಟ್ಟಲು ಹೋಗಬಾರದು. ಅದನ್ನು ಅಕ್ರಮ- ಸಕ್ರಮದಡಿ ಅದರ ಮೂಲ ಫಲಾನುಭವಿಗಳೇ ಮಾಡಿಕೊಳ್ಳಬೇಕು ಎಂದರು. ಅನಿ ಮಿನೇಜಸ್ ಕೂಡಾ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವ ವಾಹನಗಳನ್ನು ಮುಟ್ಟುಗೋಲು ಹಾಕಿ, ದಂಡನೆ ವಿಧಿಸುವ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಈಗಿನ ಶಾಸಕರು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಬದಲಾವಣೆಗಳಾಗಿದ್ದು, ಗ್ರಾಮದ ಅಭಿವೃದ್ಧಿಯ ವಿಚಾರಕ್ಕೆ ರಾಜಕೀಯ ಬೇಧ ಮರೆತು ಎಲ್ಲರೂ ಒಟ್ಟಾಗಿ ಅವರ ಬಳಿ ನಿಯೋಗ ತೆರಳಿ ಸಮಸ್ಯೆಗಳನ್ನು ಪರಿಹರಿಸೋಣ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.
ಮಾರ್ಗದರ್ಶಿ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಸಭೆಯನ್ನು ಮುನ್ನಡೆಸಿದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ತುಳಸಿ, ರತ್ನಾವತಿ, ಸ್ವಪ್ನ, ವೇದಾವತಿ, ಗೀತಾ, ಪ್ರಶಾಂತ್ ಎನ್., ಹರೀಶ ಕೆ. ವಿಜಯಕುಮಾರ್, ರಮೇಶ್ ನಾಯ್ಕ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಡಿ. ಬಂಗೇರ ಸ್ವಾಗತಿಸಿದರು. ಲೆಕ್ಕ ಸಹಾಯಕ ದೇವಪ್ಪ ನಾಯ್ಕ ವಂದಿಸಿದರು. ಗ್ರಾಮಸ್ಥರಾದ ಮೀನಾಕ್ಷಿ ಬೀತಲಪ್ಪು, ಫಯಾಝ್, ನವಾಝ್ ಕರ್ವೇಲು ಮತ್ತಿತರರು ಮಾತನಾಡಿ, ಸಲಹೆ- ಸೂಚನೆ ನೀಡಿದರು.
ಸಭೆಯ ಆರಂಭದಲ್ಲೇ ವಿಘ್ನ
ಗ್ರಾಮ ಸಭೆಯ ನಿಗದಿತ ಅವಧಿಯಾದ 10:30 ಕಳೆದು 15 ನಿಮಿಷ ಕಳೆದಾಗ ಸಭೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದು, ಈ ಸಂದರ್ಭ ಗ್ರಾಮಸ್ಥ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ ಗ್ರಾಮ ಸಭೆಗೆ ಎಲ್ಲಾ ಇಲಾಖಾಧಿಕಾರಿಗಳು ಬಾರದೇ ಸಭೆ ಆರಂಭಿಸಬಾರದು ಎಂದು ತಿಳಿಸಿದರು. ಬಳಿಕ ಅಧಿಕಾರಿಗಳ ಬರುವಿಕೆಗಾಗಿ ಸುಮಾರು 15 ನಿಮಿಷ ಕಾದಾಗ, ಅಧಿಕಾರಿಗಳು ಒಬ್ಬೊಬ್ಬರಾಗೇ ಬರಲಾರಂಭಿಸಿದರು. ಆಗ ಸಭೆಯನ್ನು ಆರಂಭಕ್ಕೆ ಸೂಚನೆ ದೊರೆಯಿತು. ಆದರೆ ಅಷ್ಟರಲ್ಲಿಯೇ ಎದ್ದು ನಿಂತ ಜತೀಂದ್ರ ಶೆಟ್ಟಿ ಅಲಿಮಾರ್, ಈ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷರು ವಹಿಸಿಕೊಳ್ಳುವುದಕ್ಕೆ ನನ್ನ ವಿರೋಧವಿದೆ. ಅವರು ವಸತಿ ಯೋಜನೆಯಡಿ ಸುಳ್ಳು ಮಾಹಿತಿಯನ್ನು ನೀಡಿ ಮನೆ ನಿರ್ಮಿಸುವ ಮೂಲಕ ಭ್ರಷ್ಟಾಚಾರವೆಸಗಿದವರು. ಇದಕ್ಕಾಗಿ ಅವರಿಗೆ ಹಣ ಕಟ್ಟಲು ಆದೇಶವಾಗಿದ್ದು, ಈ ಮೂಲಕ ಅವರು ತಪ್ಪಿತಸ್ಥರು ಎಂದು ಸಾಬೀತಾಗಿದೆ. ಭ್ರಷ್ಟಾಚಾರದ ಆರೋಪ ಇರುವವರು ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವುದು ಸರಿಯಲ್ಲ. ಇವರನ್ನು ಬಿಟ್ಟು ಬೇರೆ ಯಾರೂ ಬೇಕಾದರೂ ಅಧ್ಯಕ್ಷತೆ ವಹಿಸಿಕೊಳ್ಳಲಿ ಎನ್ನುವುದು ನನ್ನ ಅಭಿಪ್ರಾಯ. ಇದನ್ನು ನೋಡಲ್ ಅಧಿಕಾರಿಯವರಾದ ನಿಮ್ಮ ಮುಂದಿಟ್ಟಿದ್ದೇನೆ. ಆ ಬಳಿಕ ಯಾವ ನಿರ್ಧಾರ ತೆಗೆದುಕೊಳ್ಳುತ್ತೀರಿ ಅದು ನಿಮಗೆ ಬಿಟ್ಟ ವಿಚಾರವೆಂದರು. ಕೊನೆಗೇ ಮಾರ್ಗದರ್ಶಿ ಅಧಿಕಾರಿಯಾದ ಕಿರಣ್ ಅವರು, ಗ್ರಾಮ ಸಭೆಗೆಂದು ಗ್ರಾಮಸ್ಥರು ಸೇರಿದ್ದಾರೆ. ಆದ್ದರಿಂದ ಅವರ ಅಧ್ಯಕ್ಷತೆಯಲ್ಲೇ ಸಭೆಯನ್ನು ನಡೆಸೋಣ ಎಂದರು. ಹೀಗೆ ಸಭೆಯ ಆರಂಭದಲ್ಲಿ ವಿಘ್ನ ಕಂಡರೂ ಬಳಿಕ ಸಭೆ ಸುಸೂತ್ರವಾಗಿ ನಡೆಯಿತು.