ಕಡಬ: ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಕೆಳಕ್ಕೆ ಬಿದ್ದ ವೃದ್ಧರೋರ್ವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟು, ಇನ್ನೋರ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಸೆ. 24ರಂದು ಸಂಜೆ ಕಡಬದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಡಬ ಗ್ರಾಮದ ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಚುತ್ತ ಗೌಡ (63ವ.) ಎಂದು ಗುರುತಿಸಲಾಗಿದೆ. ಮೃತರು ಸಂಜೆ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮನೆಗೆ ಹೊರಟಿದ್ದ ವೇಳೆ ತಾಲೂಕು ಕಛೇರಿಯ ಸಮೀಪದ ತಿರುವಿನಲ್ಲಿ ಅಚ್ಚುತ್ತ ಗೌಡ ಹಾಗೂ ಬಲ್ಯ ನಿವಾಸಿ ಚಂದ್ರಶೇಖರ ಎಂಬವರು ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಅಚ್ಚುತ್ತ ಗೌಡರವರಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆ್ಯಂಬುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಚಂದ್ರಶೇಖರ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ಹಾಗೂ ಓರ್ವ ಪುತ್ರ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ಪುತ್ತೂರು ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ.ಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.