ಈ ಬಾರಿಯ ಪುತ್ತೂರು ಶಾರದೋತ್ಸವವು ಗತಕಾಲದ ವೈಭವವನ್ನು ಮರುಸೃಷ್ಟಿಸಲಿದೆ- ಉತ್ಸವ ಸಮಿತಿ, ಶೋಭಾಯಾತ್ರೆ ಸಮಿತಿಯಿಂದ ಪತ್ರಿಕಾಗೋಷ್ಠಿ

0

ಮಹಾಮಾರಿ ಕಾಯಿಲೆಯನ್ನು ಶಮನ ಮಾಡಿದ ಶಾರದೆ – ರಾಜೇಶ್ ಬನ್ನೂರು
ಸೇವಾ ರೂಪದಲ್ಲೇ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ- ಪಿ.ಜಿ.ಜಗನ್ನಿವಾಸ ರಾವ್
ಶೋಭಾಯಾತ್ರೆಯಲ್ಲಿ ಅತ್ಯುತ್ತಮ ಪ್ರದರ್ಶನಗಳಿಗೆ ರೂ. 1.50ಲಕ್ಷ ನಗದು ಬಹುಮಾನ – ಸೀತಾರಾಮ ರೈ
ಶೋಭಾಯಾತ್ರೆಯಲ್ಲಿ 1ಸಾವಿರಕ್ಕೂ ಮಿಕ್ಕಿ ಕುಣಿತ ಭಜಕರು – ಮುರಳಿಕೃಷ್ಣ ಹಸಂತಡ್ಕ
ವೇಷಧಾರಿಗಳು ಪಾಲ್ಗೊಳ್ಳುವಂತೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಸೂಚನೆ – ರಾಜೇಶ್ ಬನ್ನೂರು

ಪುತ್ತೂರು: ಮೈಸೂರು, ಮಡಿಕೇರಿ, ಕುದ್ರೋಳಿಯಂತೆ ವೈಭವದಿಂದ ಕೂಡಿರುವ ನವರಾತ್ರಿ ಉತ್ಸವಗಳು ಪುತ್ತೂರಿನಲ್ಲಿ ಗತಕಾಲದಲ್ಲೇ ನಡೆಯುತ್ತಿದ್ದು, ಕಾಲಾಂತರದಲ್ಲಿ ವೈಭವವನ್ನು ಕಳೆದುಕೊಂಡಿತು ಆದರೂ ಉತ್ಸವಗಳು ನಡೆಯುತ್ತಿತ್ತು. ಮತ್ತೀಗ ಸಾಂಸ್ಕೃತಿಕ, ಧಾರ್ಮಿಕ ಸಭೆ, ವಿವಿಧ ಸ್ತಬ್ದಚಿತ್ರಗಳ ವೇಷಧಾರಿಗಳ ಪ್ರದರ್ಶನ ಮತ್ತು ಶೋಭಾಯಾತ್ರೆಗಳೊಂದಿಗೆ ಮತ್ತೆ ವೈಭವ ಮರುಸೃಷ್ಟಿಯಾಗಲಿದೆ.


ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಶಾರದೋತ್ಸವ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಅವರು ಮಾತನಾಡಿ 1937ರಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಕಿ.ಪ್ರಾ.ಶಾಲೆಯಲ್ಲಿ ಪ್ರಾರಂಭಗೊಂಡಿರುವ 89 ವರ್ಷಗಳ ಇತಿಹಾಸ ಈ ಉತ್ಸವವು ಪುತ್ತೂರಿನ ಶಾರದಾ ಭಜನಾ ಮಂದಿರದಲ್ಲಿ ಪ್ರತಿ ವರ್ಷ ನಡೆಯುತ್ತಿದೆ.ಆದರೆ ಈ ಬಾರಿ ವೈಭವದಿಂದ ನಡೆಯಲಿದೆ. ಅ.15 ರಿಂದ 24 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆಯಲಿದೆ ಎಂದರು.


ಮಹಾಮಾರಿ ಕಾಯಿಲೆಯನ್ನು ಶಮನ ಮಾಡಿದ ಶಾರದೆ:
ಹಲವು ವರ್ಷಗಳ ಹಿಂದೆ ಪುತ್ತೂರಿಗೆ ಮಹಾಮಾರಿ ದೊಡ್ಡ ಕಾಯಿಲೆ ಎಂಬ ಅಂಟುರೋಗ ಜನತೆಗೆ ಸಂಕಟ ತಂದಿತ್ತು. ರೋಗ ಮನೆ ಮನೆಗೆ ಹರಡಿದಾಗ ಬಲ್ನಾಡು ಉಳ್ಳಾಲ್ತಿ ಅಮ್ಮನಲಿಗೆ ಹೋಗುವ ಭಕ್ತರ ನಿರ್ಧಾರದಂತೆ ಸುಬ್ರಾಯ ಕಲ್ಲೂರಾಯ ಮತ್ತು ಮಂಜುನಾಥ ಆಚಾರ್ಯ ಎಂಬವರ ನೇತೃತ್ವದಲ್ಲಿ ಬಲ್ನಾಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಸಂದರ್ಭ ಬಲ್ನಾಡಿನಲ್ಲಿ ದೇವಿಯ ಭಜನೆಯೊಂದೆ ಇದಕ್ಕೆ ಹಾದಿ ಎಂಬ ಅಭಯವಾಯಿತು. ಪುತ್ತೂರಿನಲ್ಲಿ ಶೃಂಗೇರಿ ಶಾರದೆಯ ಪೋಟೋದೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಮನೆ ಮನೆಗೆ ನಗರ ಭಜನೆಯ ಮೂಲಕ ತೆರಳಿ ರೋಗಗ್ರಸ್ಥರಿಗೆ ಪ್ರಸಾದ ನೀಡುವ ಮೂಲಕ ರೋಗ ಶಮನವಾಯಿತು. ಇದೇ ಭಕ್ತರ ತಂಡ ಸುಬ್ರಾಯ ಕಲ್ಲೂರಾಯ ಅವರ ನೇತೃತ್ವದಲ್ಲಿ ಶಾರದಾ ಭಜನಾ ಮಂದಿರವನ್ನು ದೇವಸ್ಥಾನ ವಠಾರದಲ ಶಾಲೆಯಲ್ಲಿ ಸ್ಥಾಪನೆ ಮಾಡಲಾಯಿತು. ಆ ಬಳಿಕ ವಿಜೃಂಭಣೆಯಿಂದ ಶಾರದೋತ್ಸವ ನಡೆಯುತ್ತಿತ್ತು. ನಡುವೆ ವೈಭವ ಕಳೆದ ಕೊಂಡರು ಇದೀಗ ಮತ್ತೆ ಅದು ವೈಭವದಿಂದ ನಡೆಯಲಿದೆ. ಶೋಭಾಯತ್ರೆಯು ಅ.24ರಂದು ಸಂಜೆ ಗಂಟೆ 5ಕ್ಕೆ ಬೊಳುವಾರಿನಿಂದ ಹೊರಟು, ದರ್ಬೆ, ಪರ್ಲಡ್ಕ, ಕೋರ್ಟುರಸ್ತೆಯಾಗಿ, ಲಕ್ಷ್ಮೀವೆಂಕಟರಮಣ ದೇವಸ್ಥಾನದಿಂದ ಮುಂದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿ ಜಲಸ್ಥಂಭನದೊಂದಿಗೆ ಸಂಪನ್ನಗೊಳ್ಳಲಿದೆ. ಸೆ.29ಕ್ಕೆ ಸಂಜೆ ಶಾರದಾ ಭಜನಾ ಮಂದಿರದಲ್ಲಿ ಪುತ್ತೂರು ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಲಿದೆ ಎಂದರು.


ಸೇವಾ ರೂಪದಲ್ಲೇ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ:
ಉತ್ಸವ ಸಮಿತಿ ಸಂಚಾಲಕ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಪುತ್ತೂರು ಶಾರದೋತ್ಸವದಲ್ಲಿ ಕರ್ನಾಟಕ ಸಂಗೀತ, ಯಕ್ಷಗಾನ ತಾಳಮದ್ದಳೆ ಸಹಿತ ಹಲವು ಧಾರ್ಮಿಕ ಕಾರ್ಯಕ್ರಮಗಳು ಸೇವಾ ರೂಪವಾಗಿ 9 ದಿವಸವೂ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಗಂಟೆ 4 ರಿಂದ 7.30 ತನಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಯಥಾ ಪ್ರಕಾರ ಭಜನಾ ಕಾರ್ಯಕ್ರಮ ನಡೆದು ಮಹಾಮಂಗಳಾರತಿ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಪ್ರತಿ ದಿನ ಗಣ್ಯರು ದೀಪ ಬೆಳಗಿಸಿ ಆ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.


ಶೋಭಾಯಾತ್ರೆಯಲ್ಲಿ 1ಸಾವಿರಕ್ಕೂ ಮಿಕ್ಕಿ ಕುಣಿತ ಭಜಕರು:
ಶಾರದೋತ್ಸವ ಸಮಿತಿ ಕಾರ್ಯಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಹಿರಿಯರ ಸಂಕಲ್ಪ ಮತ್ತು ನಮ್ಮೆಲ್ಲರ ಆಶಯದಂತೆ ಶಾರದೋತ್ಸವ ಹಿಂದೂ ಸಮಾಜದ್ದೇ ಆಗಬೇಕು. ಅ.15 ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ. ಅ.24ರತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.20ಕ್ಕೆ ಶಾರದ ಮಾತೆಯ ಪ್ರತಿಷ್ಠೆ ನಡೆಯಲಿದೆ. ವಿಜಯ ದಶಮಿಯ ದಿನ ಸಂಜೆ ಮಹಾಪೂಜೆಯ ಬಳಿಕ ಶಾರದೋತ್ಸವದ ಭವ್ಯ ಮೆರವಣಿಗೆ ನಡೆಯಲಿದೆ. ಸುಮಾರು 1ಸಾವಿರಕ್ಕೂ ಮಿಕ್ಕಿ ಕುಣಿತ ಭಜಕರು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಘಟನೆಯ ಕಾರ್ಯಕರ್ತರುಗಳು, ಎಲ್ಲಾ ಹಿಂದುಬಾಂಧವರು ಭಾಗವಹಿಸುವಂತೆ ಅವರು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ಶಾರದಾ ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ್, ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ್ ಹೆಚ್ ಉಪಸ್ಥಿತರಿದ್ದರು.

ಅತ್ಯುತ್ತಮ ಪ್ರದರ್ಶನ ತಂಡಗಳಿಗೆ ರೂ. 1.50ಲಕ್ಷ ನಗದು ಬಹುಮಾನ
ಶಾರದೋತ್ಸವವನ್ನು ಅತೀ ವಿಜೃಂಭಣೆಯಿಂದ ಮಾಡುವಂತೆ ಈಗಾಗಲೇ ಎರಡು ಮೂರು ಸಭೆ ಮಾಡಲಾಗಿದೆ. ಶೋಭಾಯಾತ್ರೆಯು ಅದ್ದೂರಿಯಾಗಿ ನಡೆಯಬೇಕೆಂದು ಜಿಲ್ಲೆಯಿಂದ ಭಾಗವಹಿಸುವ ಸ್ತಬ್ದಚಿತ್ರಗಳು, ಸ್ಯಾಕ್ಸೋಪೋನ್, ಭಜನಾ ತಂಡ, ಮನೋರಂಜನಾ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ಅದರ ಜೊತೆಗೆ ಶಾರದೋತ್ಸವದ ವತಿಯಿಂದ ಜಿಲ್ಲೆಯ ನಾನಾ ಭಾಗಗಳಿಂದ ಬರುವ ಪ್ರಸಿದ್ಧ ಕಲಾವಿದರನ್ನು ಗೌರವಿಸುವ ನಿಟ್ಟಿನಲ್ಲಿ ಸ್ತಬ್ದಚಿತ್ರಗಳಿಗೆ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಪ್ರಥಮ ಬಹುಮಾನ ರೂ.1ಲಕ್ಷ, ದ್ವಿತೀಯ ಬಹುಮಾನ ರೂ. 50ಸಾವಿರವನ್ನು ನಿಗದಿ ಪಡಿಸಿದ್ದು, ಇದರಲ್ಲಿ ಸ್ತಬ್ದ ಚಿತ್ರಗಳ ಭಾಗವಹಿಸುವಿಕೆಯ ಸಮಯ, ಶಿಸ್ತು, ಪ್ರದರ್ಶನಗಳನ್ನು ಪರಿಗಣೆನೆಗೆ ತೆಗೆದು ಕೊಂಡು ಬಹುಮಾನ ನೀಡಲಾಗುವುದು. ಶೋಭಾಯಾತ್ರೆಯು ಬೊಳುವಾರಿನಿಂದ ಹೊರಟು, ದರ್ಬೆ, ಪರ್ಲಡ್ಕ, ಕೋರ್ಟ್ ರಸ್ತೆಯಾಗಿ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಭಾಗದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿ ಜಲಸ್ಥಂಭನಗೊಳ್ಳಲಿದೆ. ಎರಡು ದಿನದ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಶೋಭಾಯಾತ್ರೆಯ ಸಂಚಾಲಕ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ತಿಳಿಸಿದರು.

ವೇಷಧಾರಿಗಳು ಪಾಲ್ಗೊಳ್ಳುವಂತೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಸೂಚನೆ:
ಇತ್ತೀಚೆಗೆ ಪಯ್ಯನ್ನೂರಿನಲ್ಲಿ ಜ್ಯೋತಿಷ್ಯರ ಬಳಿ ತೆರಳಿ ಅಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ನವರಾತ್ರಿ ಸಂದರ್ಭ ಶ್ರೀ ಶಾರದೆಯ ಹೆಸರಿನಲ್ಲಿ ಯಾರೆಲ್ಲಾ ವೇಷ ಹಾಕುತ್ತಾರೋ ಅವರೆಲ್ಲಾ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶೋಭಯಾತ್ರೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಪಾಲ್ಗೊಂಡ ವೇಷಧಾರಿಗಳಿಗೆ ಶ್ರೀ ಶಾರದೆಯ ಜಲಸ್ತಂಭನ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ತೀರ್ಥ ತಂದು ಪ್ರೋಕ್ಷಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಈ ಬಾರಿ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಚೆಂಡೆ ವಾದನ, ವಾದ್ಯಗೋಷ್ಠಿ, ಕೀಳುಕುದರೆ, ಬ್ಯಾಂಡ್, ಹುಲಿವೇಷದ ಅಬ್ಬರ ಸಹಿತ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಶಾರದೋತ್ಸವ ನಡೆಯಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಎಲ್ಲಾ ಹಿಂದು ಬಾಂಧವರು ತಮ್ಮ ತಮ್ಮ ಅಂಗಡಿಗಳನ್ನು ತಳಿರುತೋರಣ, ವಿದ್ಯುತ್ ಅಲಂಕಾರದಿಂದ ಅಲಂಕೃತಗೊಳಿಸುವಂತೆ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ವಿನಂತಿಸಿದರು.

LEAVE A REPLY

Please enter your comment!
Please enter your name here