ಬರೆಪ್ಪಾಡಿ ಕ್ಷೇತ್ರದಲ್ಲಿ ನಿಧಿ ಸಂಚಯ ಕಾರ್ಯಕ್ರಮ-ಪೂರ್ವಭಾವಿ ಸಭೆ

0

ದೇಗುಲದ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ
ವಿಜ್ಞಾಪನಾ ಪತ್ರ ಅನಾವರಣ
ಪ್ರಾರ್ಥನೆಯ ಶಕ್ತಿಯೇ ಕ್ಷೇತ್ರಕ್ಕೆ ಪ್ರಭಾವ- ಮಾಣಿಲ ಶ್ರೀ


ಕಾಣಿಯೂರು: ಗ್ರಾಮದ ಐಕ್ಯತೆಯಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬದುಕಿರುವಷ್ಟು ಕಾಲ ನಾವು ಸಮಾಜಸೇವೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮನುಷ್ಯ ಜೀವನಕ್ಕೆ ಮೌಲ್ಯ ಸಿಗುತ್ತದೆ. ಸಾತ್ವಿಕ ಆಹಾರ, ಸಹಬಾಳ್ವೆ, ಸತ್ಕರ್ಮಗಳಿಂದ ಬದುಕು ಸಾರ್ಥಕವಾಗುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ್‌ದಾಸ ಪರಮಹಂಸ ಸ್ವಾಮೀಜಿ ಹೇಳಿದರು.


ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಸೆ. 26ರಂದು ಬರೆಪ್ಪಾಡಿ ಕ್ಷೇತ್ರದಲ್ಲಿ ನಡೆದ ನಿಧಿ ಸಂಚಯ ಕಾರ್ಯದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಾವು ಮನೆಗಳಲ್ಲಿ ದಿನನಿತ್ಯ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯ ಶಕ್ತಿಯೇ ಕ್ಷೇತ್ರಕ್ಕೆ ಪ್ರಭಾವ ಬೀರುತ್ತದೆ. ಎಳ್ಳೆಣ್ಣೆ ಸಮರ್ಪಣೆ, ಮುಷ್ಠಿ ಅಕ್ಕಿ ಸಮರ್ಪಣೆಯಿಂದ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂದ ಶ್ರೀಗಳು, ನಮ್ಮ ದೇವಸ್ಥಾನ ನಮ್ಮ ದೇವರು, ನಮ್ಮ ಊರಿನ ಶಾಲೆಯೆಂಬ ಅಭಿಮಾನ ನಮ್ಮಲ್ಲಿರಬೇಕು ಎಂದರು.


ಸಾಮಾನ್ಯ ಸ್ವಯಂ ಸೇವಕರಾಗಿ ದುಡಿದರೆ ದೇವರು ಒಲಿಯುತ್ತಾರೆ- ಭಾಗೀರಥಿ ಮುರುಳ್ಯ:
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮಾನ್ಯ ಸ್ವಯಂ ಸೇವಕರಾಗಿ ದುಡಿದರೆ ದೇವರು ಒಲಿಯುತ್ತಾರೆ. ಸುಂದರ ಪರಿಸರದಲ್ಲಿ ದೇಗುಲ ನಿರ್ಮಾಣವಾಗುವುದರ ಮೂಲಕ ಊರು ಅಭಿವೃದ್ಧಿ ಹೊಂದಲಿ ಎಂದರು.


ಸಮಾನ ಮನಸ್ಸಿನಿಂದ ದುಡಿದಾಗ ಯಶಸ್ಸು ಪ್ರಾಪ್ತಿ- ಎಸ್ ಅಂಗಾರ:
ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ಎಸ್ ಅಂಗಾರ ಮಾತನಾಡಿ, ಎಲ್ಲರೂ ಸಮಾನ ಮನಸ್ಸಿನಿಂದ ದುಡಿದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ. ದೇಗುಲ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಶಕ್ತಿ ಮೀರಿ ದುಡಿದು ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು. ದೇವಸ್ಥಾನದ ಅನುವಂಶಿಯ ಮೊಕ್ತೇಸರರು, ಅರ್ಚಕರಾದ ಜನೇಶ್ ಭಟ್ ಬರೆಪ್ಪಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಕುದ್ಮಾರು, ಕಾಯಿಮಣ, ಬೆಳಂದೂರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಗಿರಿಶಂಕರ ಸುಲಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ದೇಗುಲದ ಯೂಟ್ಯೂಬ್ ಚಾನೆಲ್, ವಿಜ್ಞಾಪನಾ ಪತ್ರ ಲೋಕಾರ್ಪಣೆ:
ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಹಾಗೂ ಕ್ಷೇತ್ರದ ವಿಜ್ಞಾಪನಾ ಪತ್ರವನ್ನು ಗಣ್ಯರು ಅನಾವರಣಗೊಳಿಸಿದರು.


ಪುತ್ತೂರು, ಕಡಬ, ಸುಳ್ಯ ತಾಲೂಕು ಸಮಿತಿ ಪ್ರಮುಖರಾಗಿ ಆಯ್ಕೆ
ಬರೆಪ್ಪಾಡಿ ಕ್ಷೇತ್ರದ ಜೀರ್ಣೋದ್ಧಾರದ ಪ್ರಯುಕ್ತ ಪುತ್ತೂರು, ಕಡಬ, ಸುಳ್ಯ ತಾಲೂಕಿನ ಪ್ರತಿ ಮನೆಯಿಂದ ಒಂದು ಗೊನೆ ಅಡಿಕೆ ಸಂಗ್ರಹ ಮಾಡುವ ನಿಟ್ಟಿನಲ್ಲಿ ನಿಧಿ ಸಂಚಯ ಕಾರ್ಯಕ್ರಮಕ್ಕಾಗಿ ತಾಲೂಕು ಸಮಿತಿ ಪ್ರಮುಖರನ್ನು ಆಯ್ಕೆಮಾಡಲಾಯಿತು. ಪುತ್ತೂರು ತಾಲೂಕು ಸಮಿತಿ ಪ್ರಮುಖರಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಾಲೂಕು ಸಮಿತಿ ಪ್ರಮುಖರಾಗಿ ಕಾಣಿಯೂರು ಗ್ರಾ.ಪಂ.ಸದಸ್ಯ ಗಣೇಶ್ ಉದನಡ್ಕ ಹಾಗೂ ಸುಳ್ಯ ತಾಲೂಕು ಸಮಿತಿ ಪ್ರಮುಖರಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here