ವಿಟ್ಲ: ಪಟ್ಟಣ ಪಂಚಾಯತ್ ಅಧೀನದಲ್ಲಿರುವ ಕೊಠಡಿಯನ್ನು ಬಾಡಿಗೆಗೆ ಪಡೆದು, ಬಳಿಕ ಬಾಡಿಗೆ ನೀಡದೆ ಅಂಗಡಿ ಮಾಲಕ ಪಲಾಯನ ಮಾಡಿದ್ದು, ಆ ಅಂಗಡಿಯನ್ನು ಪಟ್ಟಣ ಪಂಚಾಯತ್ ಅಧಿಕಾರಿಗಳ ತಂಡ ಆ.22ರಂದು ತಮ್ಮ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ವಿಟ್ಲದ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಪಟ್ಟಣ ಪಂಚಾಯತ್ ನ ಅಧೀನದಲ್ಲಿರುವ ಅಂಗಡಿ ಮಳಿಗೆ ಜಿ.3 ಯನ್ನು 2019ನೇ ಸಾಲಿನಲ್ಲಿ ಹೀರಾ ರಾಮ್ ಎಂಬವರು ಏಲಂ ನಲ್ಲಿ ಮಾಸಿಕ ಬಾಡಿಗೆ ಆಧಾರದಲ್ಲಿ ಮಳಿಗೆ ಪಡೆದಿದ್ದರು. ಆದರೆ ಆ ಬಳಿಕ ಅವರು ರೂ. 8.87 ಲಕ್ಷ ಬಾಡಿಗೆ ಪಾವತಿಸಿರಲಿಲ್ಲ. ಬಾಡಿಗೆ ಪಾವತಿ ಮಾಡುವಂತೆ ಅವರಿಗೆ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಕೂಡಾ ಬಾಡಿಗೆ ಪಾವತಿಸದೆ ಪಟ್ಟಣ ಪಂಚಾಯತ್ ಗೆ ವಂಚಿಸಿ ಅಂಗಡಿಗೆ ಬಾಗಿಲು ಹಾಕಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯ ಕೈಗೊಂಡ ತೀರ್ಮಾನದಂತೆ
ಅಂಗಡಿಯನ್ನು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ. ರವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಪಟ್ಟಣ ಪಂಚಾಯತ್ ವಶಕ್ಕೆ ಪಡೆಯಲಾಯಿತು.
ಕಾರ್ಯಾಚರಣೆಯಲ್ಲಿ ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನಗೌಡ, ಚಂದ್ರಶೇಖರ ವರ್ಮ, ಲ್ಯಾನ್ಸಿ ಬ್ರಿಯಾನ್ ಹಾಗೂ ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು.