ನಾಡಿಗೆ ಬಂದ ಕಾಡು ಕೋಣಗಳು ಮರಳಿ ಕಾಡಿಗೆ ಹೋಗುವುದೇ ಇಲ್ಲ…!

0

ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಡು ಕೋಣಗಳು


ಪುತ್ತೂರು: ಕಾಡು ನಾಶವಾಗುತ್ತಿದ್ದಂತೆಯೇ ಆಹಾರ ಅರಸಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಮತ್ತು ನಾಡಿಗೆ ಬಂದು ಕೃಷಿಗಳನ್ನು ನಾಶ ಮಾಡುವುದು ಪುತ್ತೂರು ತಾಲೂಕಿನ ಗಡಿಗ್ರಾಮಗಳಲ್ಲಿ ನಿತ್ಯದ ಘಟನೆ. ಕಾಡಿನಲ್ಲಿ ಆಹಾರದ ಕೊರತೆಯುಂಟಾದಾಗ ಮಾತ್ರ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತವೆ, ಆಹಾರ ಕೊರತೆಯಾಗಲು ಕಾಡುಗಳ ನಾಶವೂ ಕಾರಣವಾಗಿದೆ. ಕಾಡುಗಳ ರಕ್ಷಣೆಗೆ ಮತ್ತು ಕಾಡುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅದೆಷ್ಟೋ ಅಧಿಕಾರಿಗಳನ್ನು ಇರಿಸಿಕೊಂಡಿದೆ, ಆದರೆ ಕಾಡು ನಾಶವಾಗುತ್ತಲೇ ಇದೆ ಕಾಡುಪ್ರಾಣಿಗಳು ನಾಡಿಗೆ ಬರುತ್ತಲೇ ಇದೆ. ಇಲ್ಲಿ ವಿಶೇಷವೇನೆಂದರೆ ನಾಡಿಗೆ ಬಂದ ಕಾಡುಪ್ರಾಣಿಗಳು ಮರಳಿ ಕಾಡು ಸೇರುವುದೇ ಇಲ್ಲ ಅವು ಮಾನವನ ಹೊಟ್ಟೆಯ ಪಾಲಾಗುತ್ತಿದೆ ಎಂಬ ಆತಂಕದ ವಿಚಾರ ಬೆಳಕಿಗೆ ಬಂದಿದೆ.


ಪುತ್ತೂರು ತಾಲೂಕಿನ ಕೇರಳ ಗಡಿಗ್ರಾಮಗಳಲ್ಲಿ ಇಂಥಹದೊಂದು ಅಮಾನವೀಯ ಕೃತ್ಯಗಳು ನಿತ್ಯವೂ ನಡೆಯುತ್ತಿದೆ. ನೆಟ್ಟಣಿಗೆ ಮುಡ್ನೂರು, ಪಾಣಾಜೆ, ಜಾಲ್ಸೂರು ಗಡಿಗ್ರಾಮಗಳಲ್ಲಿ ಕಾಡಾಣೆಗಳ ಹಾವಳಿ ಇಲ್ಲ. ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಇದೆ. ಕಾಡುಕೋಣಗಳು ಗುಂಪುಗುಂಪಾಗಿ ರಾತ್ರಿ ವೇಳೆ, ಕೆಲವೊಮ್ಮೆ ಹಗಲು ವೇಳೆಯೇ ನಾಡಿಗೆ ಬಂದು ಕೃಷಿಗಳನ್ನು ನಾಶ ಮಾಡುತ್ತವೆ. ಈ ವಿಚಾರವನ್ನು ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಹೇಳುತ್ತಲೇ ಇದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೆ ವ್ಯವಸ್ಥೆ ಮಾಡುವ ಎಂದು ಕಾಲ ಕಳೆಯುತ್ತಿದ್ದಾರೆ. ಕಾಡು ಕೋಣಗಳು ನಾಡಿಗೆ ಬರದಂತೆ ತಡೆಗಟ್ಟುವುದು ಬಿಡಿ ಆ ಗ್ರಾಮಗಳಿಗೆ ತೆರಳಿ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಸಮಯ ಕೂಡಿ ಬರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.

ಕಾಡುಕೋಣ ಕೊಂದು ತಿನ್ನುತ್ತಾರೆ
ರಾತ್ರಿ ವೇಳೆ ಕೆಲವೊಂದು ಆಯಕಟ್ಟಿನ ಸ್ಥಳಗಳಿಂದಲೇ ಕಾಡುಕೋಣಗಳು ಬರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳುವ ಬೇಟೆಗಾರರು ರಾತ್ರಿ ವೇಳೆ ಅವುಗಳನ್ನು ಗುಂಡು ಹೊಡೆದು ಸಾಯಿಸುತ್ತಾರೆ. ಕಾಡು ಕೋಣಗಳು ಬರುತ್ತವೆ , ದಾಳಿ ಮಾಡುತ್ತದೆ ಎಂಬ ಕಾರಣಕ್ಕೆ ಸಂಜೆಯಾಗುತ್ತಲೇ ಗ್ರಾಮಸ್ಥರು ಮನೆ ಸೇರುವ ಕಾರಣ ಬೇಟೆಗಾರರಿಗೆ ಅವುಗಳನ್ನು ಹಿಡಿದು ಕೊಲ್ಲಲು ಸುಲಭವಾಗುತ್ತಿದೆ. ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಅವುಗಳನ್ನು ಕೊಲ್ಲುವ ಮತ್ತು ಆ ಬಳಿಕ ಮಾಂಸ ಮಾಡಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ ನೂರಾರು ಕಾಡುಕೋಣಗಳನ್ನು ಭೇಟೆಗಾರರು ಕೊಂದು ಮುಗಿಸಿದ್ದಾರೆ ಎಂಬ ಆತಂಕದ ಮಾಹಿತಿಯನ್ನು ಗ್ರಾಮಸ್ಥರು ಹೊರ ಹಾಕಿದ್ದಾರೆ. ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬೇಟೆಗಾರರ ಜೊತೆ ಕೆಲವೊಂದು ಮೇಲಧಿಕಾರಿಗಳಿಗೆ ನಿಕಟ ಕೃಪಾಕಟಾಕ್ಷ ಇರುವುದರಿಂದ ಇದೊಂದು ವ್ಯವಹಾರಿಕ ದಂಧೆಯಾಗಿ ಪರಿಣಮಿಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಕಾಡುಕೋಣಗಳೇ ನಾಶವಾದರೂ ಅಚ್ಚರಿಯಿಲ್ಲ. ಈ ಪರಿಸ್ಥಿತಿ ತಲೆದೋರುವ ಮುನ್ನ ಜಿಲ್ಲಾಮಟ್ಟದ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ತುರ್ತು ಕ್ರಮ: ಡಿಸಿಎಫ್
ಈ ವಿಚಾರದಲ್ಲಿ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಕಾಡುಕೋಣಗಳು ಸೇರಿದಂತೆ ಕಾಡುಪ್ರಾಣಿಗಳನ್ನು ಭೇಟೆಯಾಡುವುದು ಅಕ್ಷಮ್ಯ ಅಪರಾಧವಾಗಿದೆ. ಪಾಣಾಜೆ, ಜಾಲ್ಸೂರು ಹಾಗೂ ಕರ್ನೂರು ಗಡಿಗ್ರಾಮದಲ್ಲಿ ವಿಶೇಷ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕರು ಇಂಥಹ ಕೃತ್ಯಗಳು ಕಂಡು ಬಂದಲ್ಲಿ ನೇರವಾಗಿ ನನಗೆ ಕರೆ ಮಾಡಿ ತಿಳಿಸಬಹುದು ಎಂದು ಮಂಗಳೂರು ಡಿಸಿಎಫ್ ಆಂಟ್ಯನಿ ಮರಯಪ್ಪನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here